Thursday, 15th May 2025

ಮನಸ್ಸಿನ ಪ್ರಪಂಚದೊಳು ಕಲ್ಪನೆಯ ಕಲಾ ಪ್ರಪಂಚ

ಶ್ವೇತಪತ್ರ

shwethabc@gmail.com

ಭೌತಿಕ ಹಾಗೂ ಅಧ್ಯಾತ್ಮಿಕ ಪ್ರಪಂಚಗಳನ್ನು ಬೆಸೆಯುವ ಕೊಂಡಿಯೇ ಕಲ್ಪನೆ. ಹಾಗೇ ಕಣ್ಣು ಮುಚ್ಚಿ ನಿಮ್ಮ ಇಷ್ಟದ ಪುಸ್ತಕದ ಕೆಲವು ಸಾಲುಗಳನ್ನು ಯಾರಿಗಾದರೂ ಓದಲು ಹೇಳಿ. ಮತ್ತದನ್ನು ನೀವು ಕಲ್ಪಿಸಿಕೊಳ್ಳುತ್ತ ಹೋಗಿ ನಿಮ್ಮೆದುರಿಗೆ ಬೇರೊಂದೇ ಪ್ರಪಂಚ ತೆರೆದುಕೊಳ್ಳುತ್ತದೆ; ಪ್ರಯತ್ನಿಸಿ ನೋಡಿ.

ಈಗ ನಿಮ್ಮೆದುರಿಗೆ ಕಿತ್ತಲೆ ಹಣ್ಣಿದೆ ಎಂದುಕೊಳ್ಳೋಣ. ಅದಕ್ಕೆ ಉಪ್ಪು ಖಾರ ಹಾಕಿ ಅದನ್ನು ನಿಮ್ಮ ಬಾಯೊಳಗೆ ಹಿಂಡಿಕೊಳ್ಳುವಿರೆಂಬುದನ್ನು ಕಲ್ಪಿಸಿ ಕೊಳ್ಳಿ. ಅದಾಗಲೇ ನಿಮ್ಮ ಬಾಯಲ್ಲಿ ನೀರೂರಿತಲ್ಲವೇ? ಇಡೀ ನಮ್ಮ ಆಲೋಚನೆ, ಕಲ್ಪನೆಗಳಿಗಿರುವ ಮ್ಯಾಜಿಕಲ್ ಶಕ್ತಿಯದು. ಭಗವದ್ಗೀತೆ ಹೇಳುವಂತೆ ಸೃಷ್ಟಿಯು ಅದಾಗಲೇ ಅಸ್ತಿತ್ವದಲ್ಲಿರುವ ಯಾವುದೋ ಒಂದರ ಕಲ್ಪನೆಯಷ್ಟೇ. ಅನಂತ ಸಾಧ್ಯತೆಗಳನ್ನು ಮೀರುವ ಗುಣ ಕಲ್ಪನೆಗಿದೆ. ಈ ಪ್ರಪಂಚವೇ ನಮ್ಮ ಕಲ್ಪನೆ ಎಂಬ ಕ್ಯಾನ್ವಾಸ್. ನಮಗೇನು ಬೇಕು ಎಂಬುದನ್ನು ಕಲ್ಪಿಸುತ್ತ ಕ್ಯಾನ್ವಾಸಿಗೆ ಬೇಕಾದ ಬಣ್ಣ ತುಂಬಿದರಾಯಿತು; ಲೈಫ್ ಈಸ್ ಬ್ಯೂಟಿ ಫುಲ್. ಹಂಗೇರಿಯ ದೇಶದ ಪ್ರಸಿದ್ಧ ಶೂಟರ್ ಕ್ಯಾರೋಲಿನ್ ಟಾಕೀಸ್ ಜಗತ್ತಿನ ಉತ್ತಮ ಪಿಸ್ತೂಲ್ ಶೂಟರ್ ಎನಿಸಿದ್ದ. ೧೯೩೮ರಲ್ಲಿ ನಡೆದ
ಅಚಾತುರ್ಯದ ಅವಘಡವೊಂದರಲ್ಲಿ ಆತ ತನ್ನ ಬಲಗೈಯನ್ನು ಕಳೆದುಕೊಳ್ಳಬೇಕಾಯಿತು. ಆತನ ಶೂಟಿಂಗ್‌ಗೆ ಬಲಗೈ ಪ್ರಧಾನವಾಗಿತ್ತು. ಈ ಘಟ
ನೆಯ ನಂತರ ಆತ ಸೋಲಲಿಲ್ಲ.

ಆಸ್ಪತ್ರೆಯಲ್ಲಿರುವಷ್ಟು ದಿನವೂ ದೃಢಚಿತ್ತದೊಂದಿಗೆ ತನ್ನ ಶೂಟಿಂಗ್ ಅನ್ನು ಕಲ್ಪಿಸಿಕೊಳ್ಳತೊಡಗಿದ. ಆಸ್ಪತ್ರೆಯಿಂದ ಬಂದ ನಂತರ ಎಡಗೈಯಲ್ಲಿ ಶೂಟಿಂಗ್ ಅಭ್ಯಾಸ ಮಾಡತೊಡಗಿದ. ಒಂದೇ ಕೈಯ್ಯೊಂದಿಗೆ ೧೯೩೯ರ ಹಂಗೇರಿ ನ್ಯಾಷನಲ್ ಚಾಂಪಿಯನ್‌ಶಿಪ್‌ಗೆ ತೆರಳಿದ. ಆತನನ್ನು ಎಲ್ಲರೂ ಅನುಕಂಪದಿಂದ ನೋಡುತ್ತಿದ್ದಾಗಲೇ ಆತ ಚಾಂಪಿಯನ್‌ಶಿಪ್ ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದ್ದ. ಆ ನಂತರದ ಒಲಿಂಪಿಕ್ಸ್‌ನಲ್ಲಿ ಕೂಡ
ಆತ ಚಿನ್ನವನ್ನು ಗೆದ್ದಿದ್ದ. ಕ್ಯಾರೋಲಿ ಟಾಕೀಸ್‌ನ ಕಲ್ಪನೆ, ಸಂವೇದನೆ, ದೃಢತೆ ಆತನ ಕನಸುಗಳಿಗೆ ಇಂಬು ತುಂಬಿದವು.

ಅಮೆರಿಕದ ಒ-ವಿನ್ – ಶೋನಲ್ಲಿ ಜಿಮ್ ಕ್ಯಾರಿ ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ. ಕಲ್ಪಿಸಿಕೊಂಡ ಮಾತ್ರಕ್ಕೆ, ಮರುಕ್ಷಣವೇ ಹೋಗಿ ಸ್ಯಾಂಡ್ವಿಚ್ ಮಾಡಲಾಗುವುದಿಲ್ಲ, ಅದಕ್ಕೆ ಪೂರಕವಾದ ಪ್ರಯತ್ನದ ಅವಶ್ಯಕತೆಯೂ ಇರುತ್ತದೆ. ಕ್ಯಾರೋಲಿ ಟಾಕೀಸ್‌ಗಿದ್ದಂತೆ. ಕ್ರೀಡಾ ಲೋಕದ ಮತ್ತೊಬ್ಬ ಮಿನುಗುತಾರೆ ಬಾಕ್ಸಿಂಗ್ ದಂತಕಥೆ ಮಹಮದ್ ಅಲಿ; ಆತ ಯಾವಾಗಲೂ ತನ್ನ ವಿಜಯವನ್ನು ಕಲ್ಪಿಸಿಕೊಳ್ಳುತ್ತಿದ್ದ, ಆಟ ಇಲ್ಲದಿರುವಾಗಲೂ. ಅಲಿಯ ಯಶಸ್ಸಿಗೆ ಬಹು ಮುಖ್ಯ ಕಾರಣ ಆತನಿಗೆ ತನ್ನ ಕಲ್ಪನೆಗಳ ಪಾಸಿಟಿವ್ ಪರಿಣಾಮಗಳ ಕುರಿತಾಗಿದ್ದ ನಂಬಿಕೆ. ಬಾಕ್ಸಿಂಗ್ ರಿಂಗ್ ಒಳಗೆ ಧುಮುಕುವ ಮೊದಲೇ ಆತ ಪ್ರತಿ ಹೊಡೆತಕ್ಕೂ ಮಾನಸಿಕವಾಗಿ ತಯಾರಿ ನಡೆಸುತ್ತಿದ್ದ.

ಎಷ್ಟೋ ಬಾರಿ ತನ್ನ ಎದುರಾಳಿಗೆ ಇನ್ನು ಸ್ವಲ್ಪ ಹೊತ್ತಿನ ನಾನು ಮ್ಯಾಚ್ ಗೆಲ್ಲುತ್ತೇನೆ ಎಂದು ಹೇಳುತ್ತಿದ್ದ. ಅಷ್ಟೇ ಅಲ್ಲ ಯಾವ ಸುತ್ತಿನಲ್ಲಿ ತಾನು ವಿಜೇತನಾಗುತ್ತೇನೆ ಎಂಬುದನ್ನು ಆತ ಸರಿಯಾಗಿ ಕಲ್ಪಿಸಿಕೊಂಡು ಹೇಳುತ್ತಿದ್ದ. ರಿಂಗ್‌ನೊಳಗೆ ಧುಮುಕುವ ಮೊದಲು ದೈಹಿಕವಾಗಿಯೂ,  ಮಾನಸಿಕ ವಾಗಿಯೂ ಆತ ಅದ್ಭುತ ತಯಾರಿ ನಡೆಸಿಯೇ ಹೊರಡುತ್ತಿದ್ದ ಆತ ಅದಾಗಲೇ ಮಾನಸಿಕವಾಗಿ ಆಟವನ್ನು ಗೆದ್ದಿರುತ್ತಿದ್ದ. ಅದುವರೆಗಿನ ಅವನ ಮಾನಸಿಕ ಕಲ್ಪನಾ ಶಕ್ತಿಯನ್ನು ವಾಸ್ತವಗೊಳಿಸಿಕೊಳ್ಳುತ್ತಿದ್ದನಷ್ಟೇ.

ತನ್ನ ಕಲ್ಪನೆಗಳು ನಿಜವಾಗಲೇಬೇಕೆಂಬ ಸೂಚನೆಗಳನ್ನು ಅಲಿ ತನ್ನ ಸುಪ್ತ ಮನಸ್ಸಿಗೆ ಕೊಡುತ್ತಲೇ ಆಟಕ್ಕೆ ಅಣಿಯಾಗುತ್ತಿದ್ದ. ಮೊಹಮ್ಮದ್ ಅಲಿ
ತನ್ನ ಬದುಕನ್ನು ಶಕ್ತಿಯುತವಾದ ಸಂವೇದನೆಯ ಕಲ್ಪನಾ ಪ್ರಪಂಚದಲ್ಲಷ್ಟೇ ಬದುಕಲಿಲ್ಲ. ಬದಲಿಗೆ ಅವುಗಳನ್ನು ನಿಜವಾಗಿಸುತ್ತ ತನ್ನ ಬಾಕ್ಸಿಂಗ್ ವೃತ್ತಿಯನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ದ. ಆತನೇ ಹೇಳುವಂತೆ ಚಾಂಪಿಯನ್ನರು ಹುಟ್ಟುವುದು ಜಿಮ್‌ಗಳಲ್ಲಲ್ಲ; ಅವರು ಹುಟ್ಟುವುದು
ತಮ್ಮ ಅಂತರಂಗದ ಆಸೆ, ಕನಸು,ಕಲ್ಪನೆಗಳಲ್ಲಿ. ಚಾಂಪಿಯನ್ನರಿಗೆ ಇರಬೇಕಾದದ್ದು ಸ್ಕಿಲ್ಲು ಅದಕ್ಕಿಂತ ಹೆಚ್ಚಾಗಿ ವಿಲ್ಲು(ಪವರ್).

ಇದೇ ತರಹದ ಮತ್ತೊಂದು ಕ್ರೀಡಾ ಕಥೆ ಬ್ಯಾಸ್ಕೆಟ್ ಬಾಲ್ ಜಗತ್ತಿನ ಮೈಕಲ್ ಜೋಡನ್‌ನದ್ದು. ಆತ ತಾನು ಕೊನೆಯ ಗೋಲನ್ನು ಹೊಡೆಯುವ
ಮುಂಚೆ ಅದನ್ನು ಕಲ್ಪಿಸಿಕೊಳ್ಳುತ್ತ ಕಣ್ಣಿನ ಮುಂದೆ ತರಿಸಿಕೊಳ್ಳುತ್ತಿದ್ದ. ಅವನಿಗೆ ಆಯಾಸವಾದಾಗಲೆಲ್ಲ ಕಣ್ಣು ಮುಚ್ಚಿ ಕುಳಿತು ತನ್ನಾಟವನ್ನು ಕಲ್ಪಿಸಿಕೊಳ್ಳುತ್ತಿದ್ದ. ಈ ಕಲೆ ಆತನ ಬ್ಯಾಸ್ಕೆಟ್‌ಬಾಲ್ ಆಡುವಾಗ ಬ್ಯಾಸ್ಕೆಟ್ ಎಸೆತಕ್ಕೆ ಸದಾ ನೆರವಾಗುತ್ತಿತ್ತು. ಆದರೂ ಒಂದು ಮಾತು ಈ ಕಲ್ಪನೆಯ
ಮನೋ ಪ್ರಪಂಚದೊಳಗೆ ಸುಲಭವಾಗಿ ನೆಗೆಟಿವ್ ಆಲೋಚನೆಗಳು ನುಸುಳಿ ಕನಸುಗಳನ್ನು, ಕಲ್ಪನೆಗಳನ್ನು ಕಂಗೆಡಿಸಿಬಿಡಬಹುದು. ನೆಗೆಟಿವ್
ಆಲೋಚನೆಗಳೆಂದಿಗೂ ಭಯದಿಂದ ಕೂಡಿರುತ್ತವೆ. ಈ ಭಯವು ನಮ್ಮ ಯೋಚನೆಯನ್ನು, ಕಲ್ಪನೆಯನ್ನು ನಿಷ್ಕ್ರಿಯಗೊಳಿಸಿಬಿಡಬಹುದು.

ಭವಿಷ್ಯದ ಬಗ್ಗೆ ನಮ್ಮ ಯೋಚನೆ ಇದ್ದರೆ ಈ ಕ್ಷಣದಲ್ಲಿ ನಾವು ಬದುಕುತ್ತಿಲ್ಲವೆಂದರ್ಥ. ನೀವು ಯಾವುದೋ ಶಸಚಿಕಿತ್ಸೆಗೆ ಒಳಗಾಗಿದ್ದೀರಿ ಎಂದು ಕೊಳ್ಳೋಣ. ನಾನು ಒಳ್ಳೆಯ ವೈದ್ಯರ ಬಳಿ ಇದ್ದೇನೆ ಆರಾಮಾಗಿ ಇದನ್ನು ಗೆದ್ದು ಬರುತ್ತೇನೆ-ಹೀಗೆಂದುಕೊಂಡರೆ ಅದು ನಿಮ್ಮಲ್ಲಿನ ಪಾಸಿಟಿವಿಟಿ ಆದರೆ ಶಸ್ತ್ರಚಿಕಿತ್ಸೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಗೂಗಲ್ ಮಾಡಿ ಅದರ ಪ್ರಕ್ರಿಯೆ, ಅದನ್ನು ಹೇಗೆ ಮಾಡುತ್ತಾರೆ? ಅದರ ಅಡ್ಡ ಪರಿಣಾಮಗಳೇನು? ಹೀಗೆ ಬೇಡದ ಸರಕುಗಳನ್ನು ತಲೆಗೆ ತುಂಬಿಸಿಕೊಂಡರೆ ಆಲೋಚನೆಗಳು ಚಿಂತೆಗಳಾಗಿ ಕಾಡಲು ಶುರುವಿಟ್ಟುಕೊಳ್ಳುತ್ತವೆ.

ಮನಸ್ಸು ನೆಗೆಟವಿಟಿಯ ಬಂದರಾಗಿ ಬಿಡುತ್ತದೆ. ನಮ್ಮ ಬದುಕಲ್ಲಿ ಕಾರಣವಿಲ್ಲದೆ ಕೆಲವೊಮ್ಮೆ ಭಯಗಳು ಮುತ್ತುತ್ತವೆ. ಮುಂದಿನ ಸಲ ನಿಮಗೆ ಭಯವಾದಾಗ ಸಮಸ್ಯೆ ಏನೆಂದು ವಿಶ್ಲೇಷಿಸಿ ಅದಕ್ಕೆ ಬೇಕಾದ ಪರ್ಯಾಯ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳಿ. ನೀವು ಕಲ್ಪಿಸಿಕೊಳ್ಳುವ ಭಯಗಳಿಗೆ, ನೆಗೆಟಿವಿಟಿಗೆ ಜಾಗ ಬೇಡ. ಈ ತಂತ್ರ ತಕ್ಷಣವೇ ನೆಗೆಟಿವಿಟಿಯನ್ನು ತಡೆದು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ನೆನಪಿರಲಿ ಭಯ ಭ್ರಮೆಯಷ್ಟೇ; ಅದು ನಿಜವಲ್ಲ, ಆದರೆ ಧೈರ್ಯ ಅನಂತ, ನಿರಂತರ ಭಯದೂಡಿ ಕಲ್ಪನೆಯ ಮನೋ ಪ್ರಪಂಚವನ್ನು ಅರಳಿಸಿ.

Leave a Reply

Your email address will not be published. Required fields are marked *