Saturday, 17th May 2025

ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ

ಉಳ್ಳಾಲ: ಸೋಮೇಶ್ವರದ ಅಲಿಮಕಲ್ಲು ಸಮೀಪ ಶನಿವಾರ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಅದೇ ಪ್ರದೇಶದಲ್ಲಿ ಭಾನುವಾರ ದೊರೆತಿದೆ.

ಭಾನುವಾರ ಬೆಳಗ್ಗಿನವರೆಗೂ ಸ್ಥಳೀಯ ಈಜುಗಾರರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್ (18) ಮೃತರೆಂದು ಗುರುತಿಸ ಲಾಗಿದೆ.

ಸೋಮೇಶ್ವರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶ್ವಿತ್, ಯುವರಾಜ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಕಾಲೇಜು ಮುಗಿಸಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆಯಲ್ಲಿ ಪಾಲ್ಗೊಂಡ ಬಳಿಕ ದೇವಸ್ಥಾನದಲ್ಲಿ ಊಟ ಮುಗಿಸಿ ಅಲ್ಲೇ ಪಕ್ಕದ ಮರದಡಿಯಲ್ಲಿ ಕುಳಿತಿದ್ದರು. ಸುಮಾರು ಮೂರು ಗಂಟೆಯ ಬಳಿಕ ಸ್ಥಳೀಯ ಗೂಡಂಗಡಿಯಿಂದ ತಿಂಡಿ ತೆಗೆದುಕೊಂಡು ದೇವಸ್ಥಾನದಿಂದ ಉಚ್ಚಿಲದ ಕಡೆಗೆ ಸುಮಾರು ಒಂದು ಕಿ.ಮೀ. ಸಮುದ್ರದ ಬದಿಯಲ್ಲೇ ನಡೆದುಕೊಂಡು ಹೋಗಿದ್ದರು. ಬಳಿಕ ಸೋಮೇಶ್ವರ ಅಲಿಮಕಲ್ಲು ಬಳಿ ಸಮುದ್ರಕ್ಕೆ ಇಳಿದಿದ್ದರು.

ಈ ಸಂದರ್ಭದಲ್ಲಿ ನಾಲ್ವರು ಸಮುದ್ರ ಬದಿಯಲ್ಲಿ ಕುಳಿತಿದ್ದರೆ, ಯುವರಾಜ್ ಮತ್ತು ಯಶ್ವಿತ್ ಸಮುದ್ರದ ನೀರಿಗಿಳಿದು, ಕಲ್ಲಿನ ಸಮೀಪ ಹೋಗಿದ್ದರು. ಸಮುದ್ರದ ಅಲೆಯೊಂದಕ್ಕೆ ಯುವರಾಜ್ ಜಾರಿ ಬಿದ್ದು ಸಮುದ್ರ ಪಾಲಾದಾಗ ಯಶ್ವಿತ್ ಆತನನ್ನು ರಕ್ಷಿಸಲು ಹೋಗಿ ನೀರಿನ ಸೆಳೆತಕ್ಕೆ ಸಿಕ್ಕಿದ್ದರು.

ಸಹಪಾಠಿಗಳು ಮುಳುಗುತ್ತಿರುವುದನ್ನು ಕಂಡು ಟಯರ್ ಟ್ಯೂಬ್ ಬಳಸಿ ರಕ್ಷಣೆಗೆ ಯತ್ನಿಸಿದ್ದು, ರಕ್ಷಣೆ ಸಾಧ್ಯವಾಗದೆೇ ಇದ್ದಾಗ ಕಿರುಚಿದ್ದಾರೆ. ರಾತ್ರಿಯವರೆಗೂ ಹುಡುಕಾಡಿದರೂ ಇಬ್ಬರೂ ಪತ್ತೆಯಾಗಿರಲಿಲ್ಲ.

ಈ ಪ್ರದೇಶದಲ್ಲಿ ಸ್ಥಳೀಯ ಜೀವರಕ್ಷಕ ಈಜುಗಾರರು ಮತ್ತು ತಟದಲ್ಲಿರುವ ಪೊಲೀಸ್​, ಗೃಹರಕ್ಷಕ ಸಿಬ್ಬಂದಿ ಸಮುದ್ರಕ್ಕಿಳಿಯುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುತ್ತಾರೆ.

Leave a Reply

Your email address will not be published. Required fields are marked *