Tuesday, 13th May 2025

ಆಕಾಶ್ ಆನಂದ್ ತಮ್ಮ ಉತ್ತರಾಧಿಕಾರಿ: ಮಾಯಾವತಿ ಘೋಷಣೆ

ನವದೆಹಲಿ: ಬಿಎಎಸ್​ಪಿ ಮುಖ್ಯಸ್ಥೆ ಮಾಯಾವತಿ ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ.

ಮಾಯಾವತಿಯ ನಂತರ ಸೋದರಳಿಯ ಆಕಾಶ್ ಆನಂದ್ ಪಕ್ಷದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಮಾಯಾವತಿಯವರೇ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.

ಆಕಾಶ್ ಬಿಎಸ್​ಪಿಯ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ ಮತ್ತು ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿಯ ಉಸ್ತುವಾರಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮಧ್ಯಪ್ರದೇಶ, ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ಬಿಎಸ್​ಪಿ ಪ್ರಚಾರಕ್ಕಾಗಿ ಕೆಲಸ ಮಾಡಿದ್ದಾರೆ.

ಆಕಾಶ್ ಆನಂದ್ 2017 ರಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಲಂಡನ್​ನಲ್ಲಿ ಎಂಬಿಎ ಪದವಿ ಪಡೆದಿರುವ ಅವರು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾಯಾವತಿ ಅವರೊಂದಿಗೆ ಪಾಲ್ಗೊಳ್ಳುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.

ಪಾದಯಾತ್ರೆ ನಡೆಸಬಾರದು ಎಂಬ ಪಕ್ಷದ ನಿಲುವನ್ನು ಬದಲಾವಣೆ ಮಾಡಿದ ಆಕಾಶ್ ಆನಂದ್ ಈ ವರ್ಷದ ಆರಂಭದಲ್ಲಿ 14 ದಿನಗಳ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಸಂಕಲ್ಪ ಯಾತ್ರೆ ಮಾಡಿದ್ದರು.

ಆಕಾಶ್ ಆನಂದ್ ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಅವರ ಪುತ್ರ. 28 ವರ್ಷದ ಆಕಾಶ್ ಆನಂದ್ ಬಿಎಸ್​ಪಿ ವಲಯದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *