Thursday, 15th May 2025

ಅನಂತಪುರದಲ್ಲಿ ಪ್ರತ್ಯಕ್ಷವಾಯ್ತು ಮೂರನೇ ‘ಬಬಿಯಾ’; ಭಕ್ತರ ನಂಬಿಕೆ ನಿಜವಾಯ್ತು !

ಕುಂಬಳೆ: ಕಾಸರಗೋಡಿನ ಸರೋವರ ಕ್ಷೇತ್ರ ಅನಂತಪುರದ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಸಿಕ್ಕಿದೆ. ಭಕ್ತರ ನಂಬಿಕೆಯಂತೆ ಮೊಸಳೆ ಪ್ರತ್ಯಕ್ಷ ವಾಗಿರುವುದು ಆಸ್ತಿಕರ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ.

ದೇವರ ಮೊಸಳೆ ಎಂದೇ ಖ್ಯಾತ  ‘ಬಬಿಯಾ’ ಹೆಸರಿನ ಮೊಸಳೆ ಕಳೆದ ವರ್ಷ ವೃದ್ಧಾಪ್ಯದ ಕಾರಣದಿಂದ ಅಸುನೀಗಿತ್ತು. ಅದು ಜಗತ್ತಿನಾದ್ಯಂತ ಬಹಳ ದೊಡ್ಡ ಸುದ್ದಿಯೂ ಆಗಿತ್ತು. ಆಗಲೂ ಕ್ಷೇತ್ರದ ಕಾರಣಿಕದ ಬಗ್ಗೆ ಅಪಾರ ನಂಬಿಕೆಯಿರುವ ಭಕ್ತರು, ಮುಂದಿನ ದಿನಗಳಲ್ಲಿ ಮತ್ತೊಂದು ದೇವರ ಮೊಸಳೆ ಇಲ್ಲಿ ಕಾಣಿಸಿಕೊಳ್ಳಲಿದೆ ಎಂಬ ದೃಢ ನಂಬಿಕೆ ವ್ಯಕ್ತಪಡಿಸುತ್ತಿದ್ದರು. ಆ ನಂಬಿಕೆಯನ್ನು ನಿಜಗೊಳಿಸಿದೆ ಈಗ ಕಾಣಿಸಿಕೊಂಡಿರುವ ಮೂರನೇ ‘ಬಬಿಯಾ’.

ಸ್ಥಳೀಯ ಸುದ್ದಿ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದಲೇ ಈ ಬಗ್ಗೆ ವದಂತಿ ರೂಪದ ವರದಿಗಳು ಬರಲಾರಂಭಿಸಿದ್ದವು. ಆದರೆ ಸಂಜೆಯ ವರೆಗೆ ಮೊಸಳೆ ಮೂರ್ನಾಲ್ಕು ಬಾರಿ ಕಾಣಿಸಿಕೊಂಡಿದೆ ಎಂದು ದೇವಸ್ಥಾನದ ಮೂಲಗಳು ಖಚಿತಪಡಿಸಿವೆ. ಆದರೆ ಹಿಂದಿನ ಬಬಿಯಾನಂತೆ ಈ ಮೊಸಳೆ ಇಂದು ದೇವರ ಪ್ರಸಾದವನ್ನು ಸೇವಿಸಿಲ್ಲ ಮತ್ತು ಅರ್ಚಕರು ಕರೆದಾಗ ಸ್ಪಂದಿಸಿಲ್ಲ.

ಬಬಿಯಾ ಮೃತಪಟ್ಟು ಒಂದು ವರ್ಷ ಒಂದು ತಿಂಗಳ ಬಳಿಕ ಸದೃಢ ಮೊಸಳೆ ಪ್ರತ್ಯಕ್ಷವಾಗಿದೆ. ಇದು ಭಕ್ತರಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.

ಎರಡನೇ ಬಬಿಯಾ ಮೃತಪಟ್ಟು ಒಂದು ವರ್ಷದ ಬಳಿಕ ಮೂರನೇ ಬಬಿಯಾ ಎಂದು ಕರೆಯಬಹುದಾದ ಮೊಸಳೆ ಕಾಣಿಸಿಕೊಂಡಿರುವುದು ಸೋಜಿಗವೇ ಸರಿ.

Leave a Reply

Your email address will not be published. Required fields are marked *