Saturday, 10th May 2025

ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ ?

ಮಹಾ ಬಯಲು – ೧೨

ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ದಗಂಗಾ ಆಸ್ಪತ್ರೆ

ಶ್ರೀಗಳು ಪ್ರತಿಯೊಂದು ವಿಚಾರವನ್ನು ಸದಾ ಬರೆದಿಡುತ್ತಿದ್ದರು. ಅವರ ಬಳಿ ಮಠದ ಜವಾಬ್ದಾರಿ ಹೊತ್ತಾಗಿ ನಿಂದಲೂ ಮಠದ ಪ್ರತಿಯೊಂದು ರೂಪಾಯಿಯನ್ನೂ ಶ್ರೀಗಳು ಲೆಕ್ಕದಲ್ಲಿ ಬರೆದಿಡುತ್ತಿದ್ದರು. ಅದೆಕ್ಕೆಂತಲೇ ಶ್ರೀಗಳಿಗೆ ಪ್ರತ್ಯೇಕ ಕಪಾಟು ಸದಾ ಶ್ರೀಗಳ ಕೊಠಡಿಯಲ್ಲಿರುತ್ತಿತ್ತು. ಯಾರೇ ಬಂದರೂ ಏನೇ ದಕ್ಷಿಣೆ ನೀಡಿದರೂ ಅದು ಇಷ್ಟೇ ಇತ್ತು. ಇಷ್ಟನ್ನೇ ಖರ್ಚುಮಾಡಲಾಗಿದೆ ಎಂದು ಬರೆದಿಡುತ್ತಿದ್ದರು. ಜೊತೆಗೆ ಯಾರು ನೋಟಿನ ಕಂತೆ ನೀಡಿದರೆ ಅದನ್ನ ಮುಟ್ಟಿಯೇ ಹೇಳುತ್ತಿದ್ದರು ಇಷ್ಟೇ ದುಡ್ಡಿದೆ ಎಂದು.

ಪೈಸೆಗಳ ಕಾಲದಿಂದಲೂ ಮಠವನ್ನ ಬೆಳೆಸುತ್ತಾ ಬಂದ ಶ್ರೀಗಳಿಗೆ ರೂಪಾಯಿಗಳ ಕಾಲದ ನೋಟುಗಳ ಸಂಖ್ಯೆ ಗೊತ್ತಾಗದೇ ಇರುತ್ತಾ ಹೇಳಿ? ಜೊತೆಗೆ ಯಾರಾದರೂ ದೊಡ್ಡ ಮೊತ್ತವನ್ನ ದಾನವನ್ನಾಗಿ ನೀಡಿದರೆ ‘ಇಷ್ಟೊಂದು ಯಾಕೆ?’ ಎಂದು ಕೇಳುತ್ತಿದ್ದ ಜಗತ್ತಿನ ಮೊದಲ ಶ್ರೀಗಳು ಇವರೇ ಎನ್ನಿಸುತ್ತೆ.  ಹೌದು. ಲಕ್ಷಗಳ ಲೆಕ್ಕದಲ್ಲಿ ದಾನ ಬಂದರೆ ಆ ಬಗ್ಗೆ ಶ್ರೀಗಳು ಯೋಚಿಸುತ್ತಿದ್ದರು. ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ ಎಂದು ಕೇಳುತ್ತಿದ್ದರು.

ಜೊತೆಗೆ ತಮ್ಮಲ್ಲಿರುವ ಆರ್ಥಿಕ ಸಂಪನ್ಮೂಲವೆಷ್ಟು ಅದರಿಂದ ಖರ್ಚು ಮಾಡಿದರೆ ಉಳಿಯುವುದೆಷ್ಟು, ಮಿಕ್ಕ ಹಣಕ್ಕೆ ಏನು ಮಾಡಲಿ ಎಂದು ಯಾರ ಬಳಿಯೂ ಶ್ರೀಗಳು ಮಾತನಾಡುತ್ತಿರಲಿಲ್ಲ. ಎಂತಹ ಬರಗಾಲದಂತಹ ಸಮಯದಲ್ಲಿಯೂ ಶ್ರೀಗಳು ಒಂದು ದಿನವೂ ಕಷ್ಟದ ಬಗ್ಗೆ ಹೇಳಿಕೊಂಡವರಲ್ಲ. ನಿತ್ಯ ಸಾವಿರಾರು ಮಕ್ಕಳನ್ನು, ಬರುವ ಭಕ್ತರಿಗೆ ಸದಾ ಸೌಕರ್ಯಗಳನ್ನ ಒದಗಿಸಬೇಕಿತ್ತು. ಒಮ್ಮೊಮ್ಮೆ ಉತ್ತರ ಕರ್ನಾಟಕದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು ಬಂದವರು ಒಂದೆರಡು ದಿನ ಮಠದಲ್ಲಿಯೇ ಉಳಿಯುತ್ತಿದ್ದರು.

ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳಾದರೂ, ಹೋಗುವವರು ಮಠಕ್ಕೆ ಬಂದು ಆಹಾರ, ವಿಶ್ರಾಂತಿ ಪಡೆದೇ ಮುಂದೆ ಹೋಗುತ್ತಿದ್ದರು. ಎಲ್ಲವನ್ನೂ ನಿಭಾಯಿಸಲಿಕ್ಕೆ ಭಕ್ತರು ನೀಡುವ ಕಾಣಿಕೆ ಹೊರತುಪಡಿಸಿ ಇನ್ನಾವ ವರಮಾನಗಳು ಮಠಕ್ಕೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬರುವ ಕಷ್ಟಗಳಿಗೆ ಯಾರ ಬಳಿಯೂ ಕೇಳುತ್ತಿರಲಿಲ್ಲ. ಮಠದ ಸಮಸ್ಯೆ ಯಾರೊಂದಿಗೂ ಹಂಚಿಕೊಳ್ಳಲು ಶ್ರೀಗಳಿಗೆ ಇಷ್ಟವಿರಲಿಲ್ಲ.

ಯಾರೊಂದಿಗೂ ಇಷ್ಟು ಸಾಲದೆ ಬಂದಿದೆ ವ್ಯವಸ್ಥೆ ಮಾಡಿ ಎಂದವರಲ್ಲ. ‘ಏನು ಮಾಡ್ತೀರಾ ಬುದ್ದಿ ಹೀಗಾಗಿದ್ಯಲ್ಲ’ಎಂದು ಕೇಳಿದರೆ ಎಲ್ಲ ಸಿದ್ಧಲಿಂಗೇ ಶ್ವರ ನೋಡಿಕೊಳ್ತಾನೆ’ ಬಿಡು ಎನ್ನುತ್ತಿದ್ದರು. ಏನಾದರೂ ಕೊರತೆ ಬಂದರೂ ಅದಕ್ಕೆ ಬೇಕಾದ ಪೂರ್ವ ತಯಾರಿ ಮಠದಲ್ಲಿತ್ತು. ಶ್ರೀಗಳ ಆಪ್ತ ಭಕ್ತರ ತಂಡವೇ ಶ್ರೀಗಳ ಪ್ರತಿಯೊಂದು ವಿಚಾರವನ್ನು ಗಮನಿಸುತ್ತಿದ್ದರು.

ಮಠದಲ್ಲಿ ಏನೇ ಕೊರತೆ ಬಂದರೂ ಅದನ್ನ ಹೇಳಿಕೊಳ್ಳದಿದ್ದರೂ ಅದು ಹೇಗೋ ಶ್ರೀಗಳ ಆಪ್ತ ಭಕ್ತರು ಹಾಗೂ ಶಿಷ್ಯಂದಿರಿಗೆ ತಿಳಿದು ಗುರು ಕೇಳುವ ಮುನ್ನವೇ ಮಠದ ಆವರಣದಲ್ಲಿ ಕೊರತೆಯಾದ್ದದ್ದೆಲ್ಲಾ ಇರುವಂತೆ ನೋಡಿಕೊಳ್ಳುತ್ತಿದ್ದರು. ‘ಗುರುವಿನ ಅಂತಃಕರಣ ಅರಿತ ಶಿಷ್ಯರು. ಶಿಷ್ಯರ ನಾಡಿಮಿಡಿತ ಅರಿತ ತಾಯಿ ಹೃದಯದ ಗುರುಗಳು ಇವರ ನಡುವೆ ಮಕ್ಕಳು’ ಹೀಗೆ ಸಿದ್ಧಗಂಗಾ ಮಠ ತಪೋಭೂಮಿಯಾಗಿ ಬೆಳೆದಿದ್ದು.

Leave a Reply

Your email address will not be published. Required fields are marked *