ವರ್ತಮಾನ
maapala@gmail.com
ಬಿಜೆಪಿ ಸಹಾವಸವೇ ಬೇಡ ಎಂದು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ, ಪಕ್ಷ ಅಧಿಕಾರ ಕಳೆದುಕೊಂಡು ಸೋತರು ಪರವಾಗಿಲ್ಲ ಎಂಬ ಕಾರಣಕ್ಕೆ ೨೦೦೮ರಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ರಾಜ್ಯ ಸರಕಾರ ವಿಸರ್ಜನೆಗೆ ಕಾರಣರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೊನೆಗೂ ತಾವು ಇಷ್ಟು ವರ್ಷ ಅಂತರ ಕಾಯ್ದುಕೊಂಡು ಬಂದ ಬಿಜೆಪಿಯನ್ನು ಅಪ್ಪಿಕೊಂಡಿದ್ದೇಕೆ?
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಬಳಿಕ ಬಿಜೆಪಿಗಿಂತ ಹೆಚ್ಚು ಟೀಕೆ, ಆಕ್ಷೇಪಣೆಗಳಿಗೆ ಒಳಗಾಗಿದ್ದು ಜೆಡಿಎಸ್ ಮತ್ತು ಆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಜನತಾ ಪರಿವಾರ ಹರಿದು ಹಂಚಿಹೋದಾಗ ಜಾತ್ಯತೀತ ಜನತಾ ದಳ ಎಂಬ ಪಕ್ಷವನ್ನು ಕಟ್ಟಿ ಬೆಳೆಸಿ ಇದುವರೆಗೆ ಜತನದಿಂದ ಕಾಪಾಡಿಕೊಂಡು ಬಂದು, ಇದೀಗ ತಾವೇ ಕೋಮುವಾದಿ ಎಂದು ಟೀಕಿಸಿಕೊಂಡು ಬಂದಿದ್ದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ದೇವೇಗೌಡರ ಜಾತ್ಯತೀತ ಮನಸ್ಥಿತಿ ಹೇಗೆ ಒಪ್ಪಿತು ಎಂಬ ಪ್ರಶ್ನೆಯನ್ನು ಬಿಜೆಪಿ ಮತ್ತು ದೇವೇಗೌಡರ ಆಪ್ತ ವಲಯ ದವರನ್ನು ಹೊರತುಪಡಿಸಿ ಬೇರೆಲ್ಲರೂ ಕೇಳಿದ್ದರು.
ದೇವೇಗೌಡರ ರಾಜಕೀಯ ಇತಿಹಾಸ, ಜಾತ್ಯತೀತತೆ ಕುರಿತ ಅವರ ಬದ್ಧತೆಯನ್ನು ಬಲ್ಲವರೆಲ್ಲರಲ್ಲೂ ಈ ಪ್ರಶ್ನೆ ಮೂಡುವುದು ಸಹಜವೇ ಆಗಿತ್ತು. ಮತ್ತೊಂದೆಡೆ ದೇವೇಗೌಡರು ಕಟ್ಟಿದ ಪಕ್ಷದ ಕೆಲವು ನಾಯಕರೇ ಈ ಮೈತ್ರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ಇನ್ನು ಕೆಲವರು ಪಕ್ಷ ತ್ಯಜಿಸಲು ಮುಂದಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕೂಡ ಒಂದು ಕಾಲು ಹೊರಗಿಟ್ಟು ಎರಡನೇ ಕಾಲು ಹೊರಗಿಡಲು ಸಮಯಕ್ಕಾಗಿ ಕಾಯುತ್ತಿದ್ದಾರೆ.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ನಿರ್ಧಾರದ ಸಂಪೂರ್ಣ ಲಾಭ ಪಡೆಯಲು ಮುಂದಾಗಿರುವ ಕಾಂಗ್ರೆಸ್ ಆ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಜಾತ್ಯತೀತ ದೇವೇಗೌಡರೂ ಕೋಮುವಾದಿಯಾಗಿದ್ದಾರೆ ಎಂಬ ಟೀಕೆ ಮಾಡುತ್ತಾ ಮೈತ್ರಿ. ಸಂಪೂರ್ಣ ಲಾಭ ಪಡೆಯಲು ಹವಣಿಸುತ್ತಿದೆ. ದೇವೇಗೌಡರು ಯಾವುದೋ ಆಸೆ, ಆಕಾಂಕ್ಷೆಗಳಿಗೆ ಮಣಿದು, ಅಽಕಾರದ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲು ಸಾದ್ಯವಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಅವರಿಗೆ ಖುಷಿ ಅಥವಾ ಸಮಾಧಾನ ನೀಡುವ ಸಂಗತಿಯೂ ಅಲ್ಲ ಎಂಬುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ.
ಏಕೆಂದರೆ, ಅವರು ಅಂತಹ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಜಾಯಮಾನದವರಲ್ಲ ಎಂಬುದು ಅವರಿಗೆ ಗೊತ್ತಿದೆ. ತಮ್ಮ ಪುತ್ರ ಎಚ್.ಡಿ.ಕುಮಾರ
ಸ್ವಾಮಿ ಅವರ ಒತ್ತಾಯಕ್ಕೆ ಮಣಿದು ದೇವೇಗೌಡರು ಈ ತೀರ್ಮಾನ ಕೈಗೊಂಡಿರಬಹುದಾದರೂ ಅದಕ್ಕೆ ಕಾರಣ ಕಾಂಗ್ರೆಸ್ ಮತ್ತು ಅವರು ಅತಿಯಾಗಿ
ನಂಬಿದ್ದ ಮುಸ್ಲಿಮರು ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ದೇವೇಗೌಡರ ಆಪ್ತ ವಲಯದಲ್ಲಿದ್ದವರೇ ಹೇಳುತ್ತಿದ್ದಾರೆ. ಈ ಎರಡು ಕಾರಣಗಳು ಇಲ್ಲದಿದ್ದರೆ ಅವರು ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿಯವವರು ಅಲ್ಲ.
ಅದಕ್ಕಿಂತಲೂ ಮುಖ್ಯವಾಗಿ ಇಷ್ಟು ವರ್ಷ ಕಾಪಾಡಿಕೊಂಡು ಬಂದ ಸಿದ್ಧಾಂತವನ್ನು ತಮ್ಮ ಇಳಿ ವಯಸ್ಸಿನಲ್ಲಿ ಬಿಟ್ಟು ಕೊಡುವ ಜಾಯಮಾನ ಅಥವಾ ಮನಸ್ಥಿತಿ ದೇವೇಗೌಡರದ್ದಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಅಧಿಕಾರದ ಆಸೆಯೂ ಅವರಿಗಿಲ್ಲ ಮತ್ತು ಮತ್ತೆ ಅಧಿಕಾರ ಸಿಗುತ್ತದೆ ಎಂಬ ನಿರೀಕ್ಷೆಯನ್ನೂ ಅವರು
ಹೊಂದಿಲ್ಲ. ಏಕೆಂದರೆ, ೧೯೯೬ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಯುನೈಟೆಡ್ ಫ್ರಂಟ್ ನಾಯಕರ ಒತ್ತಾಯಕ್ಕೆ ಕಟ್ಟುಬಿದ್ದು ಎಚ್.ಡಿ.ದೇವೇಗೌಡರು
ಪ್ರಧಾನಿಯಾದ ಬಳಿಕ ತನಗೆ ಬೆಂಬಲ ನೀಡಿದ್ದ ಕಾಂಗ್ರೆಸ್‌ನ ಒತ್ತಡಕ್ಕೂ ಮಣಿಯದೆ ಅಧಿಕಾರ ನಡೆಸಿದರು.
ಇದರ ಪರಿಣಾಮ ೧೧ ತಿಂಗಳಲ್ಲೇ ಅಧಿಕಾರ ಕಳೆದುಕೊಳ್ಳಬೇಕಾಯಿತು. ಈ ವೇಳೆ ಬಿಜೆಪಿ, ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿ ಅವರೇ ನೀವು ಪ್ರಧಾನಿಯಾಗಿ ಮುಂದುವರಿಯಿರಿ. ನಿಮಗೆ ನಮ್ಮ ಪಕ್ಷದಿಂದ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ದೇವೇಗೌಡರು ಖುಲ್ಲಂಖುಲ್ಲ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ನನಗೆ ಅಧಿಕಾರದಿಂದ ಸಿದ್ಧಾಂತ ಮುಖ್ಯ, ಪಕ್ಷ ಮುಖ್ಯ ಎಂದು ಹೇಳಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬಂದರು. ಅದೇ ರೀತಿ ತಮ್ಮ ಇಚ್ಛೆಗೆ ವಿರುದ್ಧವಾಗಿ ೨೦೦೬ರಲ್ಲಿ ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಸರಕಾರ ಉರುಳಿಸಿ, ಬಿಜೆಪಿ ಜತೆ ಸೇರಿ ಮುಖ್ಯಮಂತ್ರಿ ಯಾದಾಗ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಳಿಕ ಅನಿವಾರ್ಯವಾಗಿ ಈ ಮೈತ್ರಿಯನ್ನು ಒಪ್ಪಿಕೊಂಡರಾದರೂ ಒಪ್ಪಂದದಂತೆ ೨೦೦೮ರಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲೇ ಬಾರದು. ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ಸಿದ್ಧಾಂತಕ್ಕೆ ಕೊನೆ ಹಾಡಿದಂತಾಗುತ್ತದೆ. ಸರಕಾರ ಉರುಳಿದರೂ ಪರವಾಗಿಲ್ಲ, ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರೆ ನಾನು ನಿನ್ನ
ಮುಖ ನೋಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಕಟು ಮಾತುಗಳಲ್ಲಿ ಹೇಳಿದರು. ಇದರ ಪರಿಣಾಮ ಮೈತ್ರಿ ಮುರಿದು ಸರಕಾರ ಉರುಳಿತು. ಆಗ ದೇವೇಗೌಡರು ಖುಷಿ ಪಟ್ಟರೇ ಹೊರತು ಅವರಲ್ಲಿ ಒಂದು ಸಣ್ಣ ನೋವು ಕೂಡ ಇರಲಿಲ್ಲ. ಏಕೆಂದರೆ, ಅವರ ಸಿದ್ಧಾಂತಕ್ಕೆ ಕಾಂಗ್ರೆಸ್‌ಗಿಂತ ದೊಡ್ಡ ವೈರಿ ಬಿಜೆಪಿ ಆಗಿತ್ತು. ಇದರ ಪರಿಣಾಮ ಬಿಜೆಪಿ ೨೦೦೮ರಲ್ಲಿ ಅಧಿಕಾರಕ್ಕೆ ಬರುವಂತಾಯಿತಾದರೂ ದೇವೇಗೌಡರು ಸಿದ್ಧಾಂತ ಬಿಟ್ಟು ಹೋಗಲಿಲ್ಲ.
ಅಂಥ ದೇವೇಗೌಡರು ಈಗ ಪುತ್ರ ಕುಮಾರಸ್ವಾಮಿ ಒತ್ತಾಯಕ್ಕೆ ಕಟ್ಟುಬಿದ್ದು ಸಿದ್ಧಾಂತದೊಂದಿಗೆ ರಾಜಿಯಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ
ಎಂದರೆ ಅದರ ಹಿಂದೆ ಬೇರೆ ಕಾರಣಗಳು ಇವೆ ಎಂಬುದು ಸ್ಪಷ್ಟ. ಅದುವೇ ಕಾಂಗ್ರೆಸ್ ಮತ್ತು ಅವರು ಅತಿಯಾಗಿ ಬಿದ್ದ ಮುಸ್ಲಿಮರು. ತಮ್ಮ ಸಿದ್ಧಾಂತಕ್ಕೆ ಬೆಲೆ ಸಿಗದ ಪರಿಸ್ಥಿತಿಯಲ್ಲಿ ಇವರಿಬ್ಬರ ಮಧ್ಯೆ ಸಿಲುಕಿದ್ದ ಪಕ್ಷ ವನ್ನು ಉಳಿಸಿಕೊಳ್ಳುವುದು ದೇವೇಗೌಡರಿಗೆ ಮುಖ್ಯವಾಗಿತ್ತು.
೨೦೦೪ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅದು ಅಧಿಕಾರಕ್ಕೆ ಬರಲೇ ಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಜತೆ ಕೈಜೋಡಿಸಿ ಸರಕಾರ ರಚಿಸಲು ಒಪ್ಪಿದರು. ಆದರೆ, ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ಹೊಂದಿದ್ದರೂ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್‌ಅನ್ನು ಒಡೆಯುವ ಕೆಲಸಕ್ಕೆ ಕೈಹಾಕಿತು. ಈ ಮಾಹಿತಿ ಗೊತ್ತಾಗಿ ಮೊದಲ ಬಾರಿ ಶಾಸಕರಾದರೂ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಮುರಿದು ದೇವೇಗೌಡರ ಮಾತಿಗೆ ವಿರುದ್ಧವಾಗಿ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ್ದರು. ಈ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಅವಕಾಶ ಸಿಕ್ಕಿದಾಗಲೆಲ್ಲಾ ಜೆಡಿಎಸ್ ಒಡೆಯುತ್ತಲೇ ಬಂದಿತ್ತು.
ಆದರೂ ಸಿದ್ಧಾಂತದ ಜತೆ ರಾಜಿ ಮಾಡಿಕೊಳ್ಳಲು ಒಪ್ಪದ ದೇವೇಗೌಡರು ೨೦೧೮ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಸನಿಹ ಬಂದಾಗಲೂ ಅವಕಾಶ ಕೊಡದೆ ಕಾಂಗ್ರೆಸ್ ಜತೆ ಸೇರಿ ಸರಕಾರ ರಚಿಸಿದರು. ಹಿಂದೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಾಗ ಆದ ಸಮಸ್ಯೆಗಳನ್ನು ಅರಿತು ಈ ಬಾರಿ ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡಿದರು. ಆದರೆ, ಈ ಸರಕಾರವೂ ಹೆಚ್ಚು ದಿನ ಬಾಳಲಿಲ್ಲ. ಅದರ ಮಧ್ಯೆ ಜೆಡಿಎಸ್ ಒಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮುಂದುವರಿಸಿತ್ತು.
೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಽಕಾರಕ್ಕೆ ಬಂದರೂ ಅದು
ತನ್ನ ಈ ಚಾಳಿಯನ್ನು ಬಿಡಲಿಲ್ಲ. ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಗಾಳ ಹಾಕಲಾರಂಭಿಸಿತ್ತು. ಪರಿಸ್ಥಿತಿ ಇದೇ ರೀತಿ ಮುಂದು
ವರಿದರೆ ಜೆಡಿಎಸ್‌ಅನ್ನು ಕಾಂಗ್ರೆಸ್ ಆಪೋಷನ ತೆಗೆದುಕೊಳ್ಳಬಹುದು ಎಂಬ ಆತಂಕ ದೇವೇಗೌಡರನ್ನು ಕಾಡಲಾರಂಭಿಸಿತ್ತು.
ಆಗಲೇ ಅವರು ಸಿದ್ಧಾಂತದ ಜತೆ ರಾಜಿ ಮಾಡಿಕೊಳ್ಳಲು ಯೋಚಿಸಿದರು. ಏಕೆಂದರೆ ಜಾತ್ಯತೀತ ಸಿದ್ಧಾಂತ ಪಾಲಿಸುತ್ತಾ ಮುಸ್ಲಿಂ ಮತಗಳನ್ನು ನಂಬಿಕೊಂಡಿದ್ದ ದೇವೇಗೌಡರಿಗೆ ಆ ಪಕ್ಷವೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಕೈ ಕೊಟ್ಟಿತ್ತು. ಪಕ್ಷ ಅಧಿಕಾರದಲ್ಲಿದ್ದಾಗ ಆ ಸಮುದಾಯಕ್ಕೆ ನ್ಯಾಯ ಒದಗಿಸ ಲಾಗಿತ್ತೇ ಹೊರತು ಅನ್ಯಾಯವಾಗುವ ಯಾವುದೇ ತೀರ್ಮಾನಕ್ಕೂ ಕೈಹಾಕಿರಲಿಲ್ಲ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಕೋಮು ಸಂಘರ್ಷಕ್ಕೆ ಅವಕಾಶ ಮಾಡಿ ಕೊಡಲಿಲ್ಲ. ಹಾಗೆಂದು ತುಷ್ಠೀಕರಣ ನೀತಿಯನ್ನೂ ಅನುಸರಿಸಲಿಲ್ಲ.
ಇದರ ಪರಿಣಾಮ ಮುಸ್ಲಿಮರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಸಂಪೂರ್ಣ ಕೈಬಿಟ್ಟರು. ಆ ಮೂಲಕ ತುಷ್ಠೀಕರಣ ನೀತಿಯೇ ಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು. ಇದು ದೇವೇಗೌಡರಿಗೆ ಅತ್ಯಂತ ನೋವು ತಂದಿತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಹಾಗೆಂದು ಅವರು ದೇವೇಗೌಡರನ್ನು ಅಂಧರಂತೆ ಬೆಂಬಲಿಸಿದವರಲ್ಲ. ಅವರ ಕಡೆಯಿಂದ ತಪ್ಪುಗಳಾದಾಗ ಅದನ್ನು ತೋರಿಸಿ ಅವರಿಂದ ದೂರವಾಗಿ, ದೇವೇಗೌಡರಿಗೆ
ಸತ್ಯ ಅರಿವಾದ ಮೇಲೆ ಹತ್ತಿರ ಸೇರಿದವರೂ ಇದ್ದಾರೆ.
ಅತ್ತ ತಾನು ನಂಬಿದ ಮುಸ್ಲಿಂ ಮತದಾರರೂ ಕೈಕೊಟ್ಟರು. ಮತ್ತೊಂದೆಡೆ, ಜೆಡಿಎಸ್‌ನ ಭದ್ರಕೋಟೆ ಎನಿಸಿದ, ಒಕ್ಕಲಿಗ ಸಮುದಾಯ ಹೆಚ್ಚು ಸಂಖ್ಯೆಯಲ್ಲಿರುವ ಹಳೇ ಮೈಸೂರು ಭಾಗದಲ್ಲೂ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡು ಅದನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಪರಿಸ್ಥಿತಿ ಎದುರಾಯಿತು. ಇದರ ಪರಿಣಾಮ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಜೆಡಿಎಸ್ ಕೇವಲ ೧೯ ಸ್ಥಾನಗಳಿಗೆ ಇಳಿಯುವಂತಾಯಿತು. ಇಷ್ಟಾದ ಬಳಿಕವೂ
ಕಾಂಗ್ರೆಸ್ ಹಳೇ ಮೈಸೂರು ಭಾಗದಲ್ಲಿ ತನ್ನ ಹಿಡಿತ ವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ಶಾಸಕರು,
ಮಾಜಿ ಶಾಸಕರು, ಮುಖಂಡರಿಗೆ ಬಲೆ ಬೀಸಲಾರಂಭಿಸಿತು. ಆಗಲೇ ದೇವೇಗೌಡರಿಗೆ ಅಪಾಯದ ಅರಿವಾಗಿತ್ತು.
ಇನ್ನು ಸುಮ್ಮನಿದ್ದರೆ ಪಕ್ಷ ಸಂಪೂರ್ಣ ನಾಶವಾಗಿ ತಾನು, ತನ್ನ ಕುಟುಂಬದವರು ಮಾತ್ರ ಉಳಿದುಕೊಳ್ಳಬೇಕಾಗುತ್ತದೆ. ಅತ್ತ ಸಿದ್ಧಾಂತವೂ ಕೈಹಿಡಿಯಲಿಲ್ಲ, ಇತ್ತ ಯಾರನ್ನು ವಿರೋಧಿಸಲು ಕಾಂಗ್ರೆಸ್ ಜತೆ ಕೈ ಜೋಡಿಸಿದೆನೋ ಅದೇ ಪಕ್ಷ ಈಗ ತಮ್ಮನ್ನು ನಾಶ ಮಾಡಲು ಹೊರಟಿದೆ. ಇದರಿಂದ ಪಾರಾಗಬೇಕಾದರೆ ಇರುವ ದಾರಿ ಬಿಜೆಪಿ ಜತೆ ಮೈತ್ರಿ ಒಂದೇ ಎಂಬುದನ್ನು ತೀರ್ಮಾನಿಸಿದ ದೇವೇಗೌಡರು ನೇರವಾಗಿ ಅಮಿತ್ ಶಾ ಅವರ ಬಳಿ ತೆರಳಿದರು. ಕಾಂಗ್ರೆಸ್‌ನ ಇಂಡಿಯ ಮೈತ್ರಿಕೂಟಕ್ಕೆ ವಿರುದ್ಧವಾಗಿ ಎನ್‌ಡಿಎ ಮೈತ್ರಿಕೂಟ ಬಲಗೊಳಿಸಲು ಪ್ರಯತ್ನಿಸುತ್ತಿದ್ದ ಅಮಿತ್ ಶಾ ಅವರಿಗೂ ಇದು ಬೇಕಾಗಿತ್ತು.
ಕೂಡಲೇ ಮೈತ್ರಿಗೆ ಒಪ್ಪಿದರು. ಇದೀಗ ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಪಕ್ಷ ತೊರೆಯಲು ಮುಂದಾಗಿದ್ದ ಕೆಲವರನ್ನು ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದ ಕಾರಣ ದೇವೇಗೌಡರು ಸ್ಥಿತಪ್ರಜ್ಞರಂತೆ ಇದ್ದಾರೆ. ಸಮುದಾಯವೇ ಕೈಬಿಟ್ಟ ಮೇಲೆ ಮುಖಂಡರನ್ನು ಕಟ್ಟಿಕೊಂಡೇನು ಪ್ರಯೋಜನ ಎಂದು ಭಾವಿಸಿ, ಅದರ ಬದಲು ಬಿಜೆಪಿ ಜತೆ ಸೇರಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಉಳಿಸಿಕೊಳ್ಳುವತ್ತ ಪ್ರಯತ್ನ ಆರಂಭಿಸಿ ದ್ದಾರೆ. ಹೀಗಾಗಿ ಟೀಕೆಗೂ ಒಳಗಾಗುತ್ತಿದ್ದಾರೆ. ಆದರೆ, ಟೀಕೆ ಮಾಡಿದವರು ತಮಗೇನು ಮಾಡಿದರು ಎಂಬುದನ್ನು ಸ್ಪಷ್ಟವಾಗಿ ಅರಿತಿರುವ ದೇವೇಗೌಡರು ಅದಕ್ಕೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವಿದ್ದಾರೆ.
ಲಾಸ್ಟ್ ಸಿಪ್: ಮಿತ್ರರೆನಿಸಿಕೊಂಡವರು ಶತ್ರುಗಳಾದಾಗ ಅವರನ್ನೆದುರಿಸಲಾದರೂ ಬೇರೆಯವರೊಂದಿಗೆ ಮಿತ್ರತ್ರ ಸಾಽಸುವುದೇ ಈಗಿನ ರಾಜಕೀಯ ಸಿದ್ಧಾಂತ.