Monday, 12th May 2025

ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಮುಂದೂಡಿಕೆ

ಚೆನ್ನೈ: ನಿವೃತ್ತ ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ವಿರುದ್ಧ ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮುಂದೂಡಿದೆ.

ಮಾಜಿ ಅಧಿಕಾರಿಯ ವಿರುದ್ಧ ಮಾನನಷ್ಟ ಮೊಕದಮ್ಮೆ ಹೂಡಿದ್ದ ಸಿವಿಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ಆದೇಶವನ್ನು ಪರಿಶೀಲಿಸಲು ನ್ಯಾಯಾಲಯ ನಿರ್ಧರಿಸಿದ್ದು, ಪ್ರಕರಣವನ್ನು ಆಗಸ್ಟ್ 31 ಕ್ಕೆ ಮುಂದೂಡಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ, ಧೋನಿ ಅವರ ವಕೀಲ ಪಿಎಸ್ ರಾಮನ್, ಸಿವಿಲ್ ಮೊಕದ್ದಮೆಗೆ ಸಂಬಂಧಿಸಿ ದಂತೆ ನ್ಯಾಯಯುತ ಆದೇಶವನ್ನು ಸಲ್ಲಿಸಲು ಸಮಯ ಕೋರಿದರು. ಈ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾ ಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಿದೆ. ಜಿ ಸಂಪತ್ ಕುಮಾರ್ ಅವರ ಪರ ಹಿರಿಯ ವಕೀಲ ಪೆರುಂಬುಲವಿಲ್ ರಾಧಾಕೃಷ್ಣನ್ ಅವರು ಧೋನಿ ಆರೋಪಿಸಿದಂತೆ ತಮ್ಮ ಕಕ್ಷಿದಾರರು ಯಾವುದೇ ಹಗರಣದ ಹೇಳಿಕೆಗಳನ್ನು ಮಾಡಿಲ್ಲ ಎಂದು ಪ್ರತಿಪಾದಿಸಿದರು.

2014 ರಲ್ಲಿ ನಡೆದ ಕುಖ್ಯಾತ ಐಪಿಎಲ್ ಬೆಟ್ಟಿಂಗ್ ಹಗರಣದ ತನಿಖೆಗೆ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿ ಕ್ರಿಕೆಟಿಗ ನಿವೃತ್ತ ಅಧಿಕಾರಿಯಿಂದ 100 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಂಪತ್ ಕುಮಾರ್ ನೀಡಿದ ಲಿಖಿತ ಹೇಳಿಕೆಯು ಅವಹೇಳನಕಾರಿ ಹೇಳಿಕೆಗಳನ್ನು ಹೊಂದಿದೆ ಎಂಬ ವಾದದೊಂದಿಗೆ ಧೋನಿಯವರು ಮಾನನಷ್ಟ ಮೊಕದಮ್ಮೆ ಹೂಡಿದ್ದರು.

ಇನ್ನು ಎಂಎಸ್ ಧೋನಿಗೆ ದೇಶದೆಲ್ಲೆಡೆ ಅಪಾರ ಅಭಿಮಾನಿ ಬಳಗ ಇದೆ. ಈ ರೀತಿಯ ಆರೋಪದಿಂದ ನನ್ನ ಕೋಟ್ಯಾಂತರ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳ ದೃಷ್ಟಿಯಲ್ಲಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಿದೆ. ಜೊತೆಗೆ ನನ್ನ ಖ್ಯಾತಿಗೆ, ಹೆಸರಿಗೆ ಕಳಂಕ ತಂದಿದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *