Tuesday, 13th May 2025

ನಾಯಕತ್ವಕ್ಕೆ ಕಾಯುತ್ತಿದೆ ರಾಜ್ಯ ಬಿಜೆಪಿ

ವರ್ತಮಾನ

maapala@gmail.com

ಇನ್ನು ಆರೇಳು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆಡಳಿತಾರೂಢ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಜನಪ್ರಿಯತೆ ಗಳಿಸಲು ಪ್ರಯತ್ನಿಸುವುದರ ಜತೆಗೆ ಸಂಘಟನಾತ್ಮಕವಾಗಿಯೂ ಕೆಲಸ ಶುರು ಮಾಡಿಕೊಂಡಿದೆ.

ಜೆಡಿಎಸ್ ತನ್ನ ಸೀಮಿತ ಸಾಮರ್ಥ್ಯದಿಂದಾಗಿ ಅದೃಷ್ಟದ ಬೆನ್ನೇರಿ ಹೊರಟಿದೆ. ಆದರೆ, ಪ್ರಮುಖ ಪ್ರತಿಪಕ್ಷ ಬಿಜೆಪಿ…. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕಳೆದ ಎರಡೂ ವರೆ ತಿಂಗಳಲ್ಲಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟಗಳನ್ನು ಗಮನಿಸಿದಾಗ ಪಕ್ಷ ಸೋಲಿನ ಬೇಸರದಿಂದ ಸಂಪೂರ್ಣ ಹೊರಬಂದು ಕೆಲಸ ಆರಂಭಿಸಿದಂತೆ ಕಾಣಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿ ಗೊಳಿಸಿದ ಬಳಿಕ ಹೋರಾಟಕ್ಕೆ ಪ್ರಬಲ ಅಸ ಸಿಗದೇ ಇದ್ದರೂ ಜೆಡಿಎಸ್, ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎತ್ತಿಕೊಟ್ಟ ವಿಷಯಗಳನ್ನು
ಮುಂದಿಟ್ಟುಕೊಂಡು ತಾನು ಪ್ರಬಲ ಪ್ರತಿಪಕ್ಷ ಎಂಬುದನ್ನು ಪರಿಣಾಮಕಾರಿಯಾಗಿಯೇ ನಿರೂಪಿಸಿದೆ.

ಸಿಕ್ಕಿದ ಪ್ರತಿ ಯೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸರಕಾರಕ್ಕೆ ಮುಜುಗರ ತರುವಲ್ಲಿ ಯಶಸ್ವಿಯಾಗಿದೆ. ವಿಧಾನ ಸಭೆಯೊಳಗೆ ಪಕ್ಷದ ಶಾಸಕರ ಸಂಘಟಿತ ಹೋರಾಟಗಳು ಪ್ರತಿಪಕ್ಷವಾಗಿ ಬಿಜೆಪಿಯ ಬಗ್ಗೆ ಜನರಿಟ್ಟುಕೊಂಡಿದ್ದ ನಿರೀಕ್ಷೆ ಗಳನ್ನು ಸುಳ್ಳು ಮಾಡಲಿಲ್ಲ. ಕೆಲವೊಮ್ಮೆ ಅತಿಯಾಯಿತು
ಇವರದ್ದು ಎಂಬಂತೆ ಕಾಣಿಸುತ್ತಿದ್ದರೂ ಜನರ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಆದರೆ… ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಆ ಚುನಾವಣೆ ಎದುರಿಸಲು ಸಂಘಟನಾತ್ಮಕವಾಗಿ ಏನು ಕೆಲಸ ಮಾಡುತ್ತಿದೆ ಎಂಬುದು ಮಾತ್ರ ಪ್ರಶ್ನಾರ್ಹ.

ವಿಧಾನಸಭೆಯೊಳಗೇನೋ ಶಾಸಕರು ಸಂಘಟಿತರಾಗಿ ಕೆಲಸ ಮಾಡಿದರು. ಆದರೆ, ವಿಧಾನಸಭೆಯ ಹೊರಗೆ ಅವರನ್ನು ಒಟ್ಟಾಗಿ ಕರೆದೊಯ್ಯಲು ಒಬ್ಬ ಶಾಸಕಾಂಗ ಪಕ್ಷದ ನಾಯಕ ನನ್ನೇ ಆಯ್ಕೆ ಮಾಡಿಕೊಂಡಿಲ್ಲ. ಸದ್ಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶಾಸಕರು ಕೆಲಸ
ಮಾಡುತ್ತಿದ್ದಾರಾದರೂ ಮುಂದೆ ಶಾಸಕಾಂಗ ಪಕ್ಷದ ನಾಯಕರಾಗಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇರುವುದರಿಂದ ಬೊಮ್ಮಾಯಿ ಅವರೂ ಪೂರ್ಣ ಮನಸ್ಸಿನೊಂದಿಗೆ ಕೆಲಸ ಮಾಡಲು ಸಾಧ್ಯ ವಾಗುತ್ತಿಲ್ಲ. ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದೊಳಗೆ ಸಾಕಷ್ಟು ಕ್ರಿಯಾಶೀಲರಾಗಿದ್ದರೂ ಹೊರಗೆ ಸಾಮಾಜಿಕ ಜಾಲತಾಣದ ಮೂಲಕವಷ್ಟೇ ಸಕ್ರಿಯರಾಗಿದ್ದಾರೆ ಹೊರತು ಅದ
ರಿಂದ ಹೊರಬಂದು ಶಾಸಕರನ್ನು ಒಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿಲ್ಲ.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತಂತೆ ವರಿಷ್ಠರು ಕಳುಹಿಸಿಕೊಟ್ಟ ವೀಕ್ಷಕರು ಶಾಸಕರು ಮತ್ತು ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸಿ ವರದಿ
ಸಲ್ಲಿಸಿ ತಿಂಗಳಾಗುತ್ತಾ ಬಂದರೂ ಇನ್ನೂ ವರಿಷ್ಠರು ಮಾತ್ರ ಈ ಕುರಿತಂತೆ ನಿರ್ಧಾರ ಕೈಗೊಂಡಿಲ್ಲ. ಇದು ಸಹಜವಾಗಿಯೇ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದವರಿಗೆ ನಿರಾಶೆ ತಂದಿದ್ದು, ತಾವು ಸಕ್ರಿಯವಾಗಿ ಕೆಲಸ ಮಾಡಿದರೂ ಹುದ್ದೆ ಸಿಗುವ ಬಗ್ಗೆ ಖಾತರಿ ಇಲ್ಲದ ಕಾರಣ ಒಲ್ಲದ ಮನಸ್ಸಿನಿಂದ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇನ್ನು ಪಕ್ಷದ ರಾಜ್ಯಾಧ್ಯಕ್ಷರ ವಿಚಾರದಲ್ಲೂ ಅದೇ ಪರಿಸ್ಥಿತಿ. ಹಾಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಅವಧಿ ೨೦೨೨ರ ಆಗಸ್ಟ್‌ಗೇ ಕೊನೆ ಗೊಂಡಿತ್ತು. ಆದರೆ, ವಿಧಾನಸಭೆ ಚುನಾವಣೆ ಇದೆ ಎಂಬ ಕಾರಣಕ್ಕೆ ಅವರನ್ನೇ ಮುಂದುವರಿಸಿ, ವಿಧಾನಸಭೆ ಚುನಾವಣೆ ಬಳಿಕ ಬದಲಾವಣೆ ಮಾಡಲು ವರಿಷ್ಠರು ನಿರ್ಧರಿಸಿದ್ದರು. ಇದೀಗ ವಿಧಾನಸಭೆ ಚುನಾವಣೆ ಮುಗಿದು ಎರಡು ತಿಂಗಳಾಗಿದೆ. ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿರುವ ಕಾರಣ ಅದರ
ಹೊಣೆಯನ್ನು ರಾಜ್ಯಾಧ್ಯಕ್ಷರು ಹೊತ್ತುಕೊಂಡಿದ್ದಾರೆ. ಮೇಲಾಗಿ ನಳಿನ್ ಕುಮಾರ್ ಕಟೀಲ್ ಸಾರಥ್ಯದಲ್ಲಿ ಪಕ್ಷಕ್ಕೆ ಸೋಲಾಗಿರುವುದರಿಂದ ಅವರನ್ನು ಬದಲಾವಣೆ ಮಾಡು ವುದು ಖಂಡಿತ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಾಗಿ ಹುದ್ದೆಯಿಂದ ನಿರ್ಗಮನದ ನಿರೀಕ್ಷೆಯಲ್ಲಿರುವ ಕಟೀಲ್ ಕೂಡ ಒಂದು ರೀತಿ ‘ಮ್ಯೂಟ್’ ಆಗಿದ್ದಾರೆ. ಅವರ ಸಂಘಟನೆ ಎಂಬುದು ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ.

ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಒಂದಿಬ್ಬ ರನ್ನು ಹೊರತುಪಡಿಸಿ ಉಳಿದಂತೆ ಪಕ್ಷದ ಪದಾಧಿಕಾರಿಗಳೂ ಆಸಕ್ತಿ ಕಳೆದುಕೊಂಡಿದ್ದಾರೆ. ಏಕೆಂದರೆ, ರಾಜ್ಯಾಧ್ಯಕ್ಷರ ಬದಲಾವಣೆ ಜತೆಗೆ ರಾಜ್ಯ ಘಟಕವನ್ನೂ ಪುನಾರಚಿಸಲಾಗುತ್ತದೆ. ಆ ಸಂದರ್ಭದಲ್ಲಿ ತಮಗೆ ಅವಕಾಶ ಸಿಗುವುದೇ ಎಂಬ ಅನುಮಾನ ಅವರಲ್ಲಿದೆ. ಅದೇ ರೀತಿ ಜಿಲ್ಲಾ ಘಟಕ ಗಳು ಕೂಡ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿ ಕೊಂಡಿಲ್ಲ. ಹೀಗಾಗಿ ಕಾರ್ಯಕರ್ತರು ಕೂಡ ತಮ್ಮ ಪಾಡಿಗೆ ತಾವಿದ್ದಾರೆ. ಸಾಮಾನ್ಯವಾಗಿ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಇದೆ ಎನ್ನುವ ಸಂದರ್ಭದಲ್ಲಿ ಒಂದು ವರ್ಷಕ್ಕೆ ಮುನ್ನವೇ ಸಂಘಟನಾತ್ಮಕ ಕೆಲಸಗಳು ಚುರುಕುಗೊಳ್ಳುತ್ತವೆ. ಅದರಲ್ಲೂ ಮುಖ್ಯವಾಗಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಸ್ಥಳೀಯ ಮಟ್ಟದಲ್ಲಿ ಜನರ ಬಳಿ ಕೆಲಸವಾಗುತ್ತದೆ. ಒಂದೆಡೆ ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕದಲ್ಲಿ ವಿಳಂಬ, ‘ಮ್ಯೂಟ್’ ಮೂಡ್‌ನಲ್ಲಿರುವ ರಾಜ್ಯಾಧ್ಯಕ್ಷರು ಮತ್ತು ಅವರಂತೆ ಉಳಿದುಕೊಂಡಿರುವ ಪದಾಽಕಾರಿಗಳಿಂದಾಗಿ ರಾಜ್ಯ ಬಿಜೆಪಿಗೆ ಗರ ಬಡಿದಂತಾಗಿದ್ದು, ಇದೇ ಪರಿಸ್ಥಿತಿ ತಳಮಟ್ಟ ದವರೆಗೂ ವಿಸ್ತರಿಸಿದೆ.

ಹೀಗಾಗಿ ಲೋಕಸಭೆ ಚುನಾವಣೆಯ ಸಿದ್ಧತೆಗಳು ಎಲ್ಲೂ ಕಾಣಿಸುತ್ತಿಲ್ಲ. ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಚ್ಚಿಕೊಂಡೇ ನಾಯಕರು ಮತ್ತು
ಕಾರ್ಯಕರ್ತರು ಕಾಲ ಕಳೆಯುತ್ತಿದ್ದಾರೆಯೇ ಹೊರತು ತಾವು ಜನರ ಬಳಿ ಹೋಗಿ ಪ್ರಧಾನಿ, ಕೇಂದ್ರ ಸರಕಾರದ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಾ ಮತಗಳಿಕೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿಲ್ಲ. ಪಕ್ಷದ ಎಲ್ಲರಲ್ಲೂ ಒಂದು ರೀತಿಯ ಅನಾಥ ಭಾವನೆ ಕಾಡುತ್ತಿದೆ. ೧೯೯೬ರ ಬಳಿಕ ಲೋಕಸಭೆ ಚುನಾವಣೆ ವಿಷಯದಲ್ಲಿ ಬಿಜೆಪಿ ಇಷ್ಟೊಂದು ನಿರಾಶೆಯಿಂದ ಇರುವುದು ಇದೇ ಪ್ರಥಮ. ಏಕೆಂದರೆ, ಆ ಅವಽಗಾಗಲೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ವಾತಾವರಣ ನಿರ್ಮಾಣ ವಾಗಿತ್ತು. ಹೀಗಾಗಿ ಕಾರ್ಯಕರ್ತರು ಅತ್ಯಂತ ಕ್ರಿಯಾಶೀಲ ರಾಗಿ ಕೆಲಸ ಮಾಡಿದ್ದರು.

ಇದರ ಪರಿಣಾಮ ೧೯೯೯ರ ಲೋಕಸಭೆ ಚುನಾವಣೆ ಸೇರಿದಂತೆ ನಂತರದ ಎಲ್ಲಾ ಚುನಾವಣೆಗಳಲ್ಲೂ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಬಂದಿತ್ತು. ಅದರಲ್ಲೂ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ೨೮ ಕ್ಷೇತ್ರಗಳ ಪೈಕಿ ೨೫ ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಮೂಲಕ ದಾಖಲೆಯನ್ನೇ ಸೃಷ್ಟಿಸಿತ್ತು. ಆಗಲೂ ಬಿಜೆಪಿ ಅಧಿಕಾರದಲ್ಲಿರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರಬೇಕು ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ರಾಜ್ಯದ ಜನರು ಬಿಜೆಪಿ ಜತೆ ನಿಂತರು. ಆದರೆ, ಈಗ ಪರಿಸ್ಥಿತಿ ಅಷ್ಟೊಂದು ಅನುಕೂಲಕರವಾಗಿ ಇಲ್ಲ. ವಿಧಾನಸಭೆ ಚುನಾವಣೆಯ ವೇಳೆ ಪ್ರಧಾನಿ ಮೋದಿ ೨೮ ಬಾರಿ ರಾಜ್ಯಕ್ಕೆ ಬಂದು ಹೋದರೂ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಏಕೆ, ಹೀನಾಯ ಪ್ರದರ್ಶನದಿಂದ ಪಾರು
ಮಾಡಲು ಕೂಡ ಆಗಲಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅಲೆಯ ಜತೆಗೆ ಸಂಘಟನೆಯೂ ಅಗತ್ಯ. ಈ ಸಂಘಟನೆಯನ್ನು ಸಕ್ರಿಯಗೊಳಿಸಲು ಸೂಕ್ತ ನಾಯಕರೂ ಬೇಕು.

ಸೋತರೂ ಬಿಜೆಪಿಯವರು ಉತ್ಸಾಹ ಕಳೆದುಕೊಂಡಿಲ್ಲ ಎಂಬುದಕ್ಕೆ ವಿಧಾನಸಭೆಯ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಹೋರಾಟಗಳೇ ಸಾಕ್ಷಿ. ಪ್ರತಿಯೊಂದು ವಿಷಯದಲ್ಲೂ ಆಕ್ರಮಣಕಾರಿಯಾಗು ಮುನ್ನುಗ್ಗುವ ಉತ್ಸಾಹ ಇನ್ನೂ ಕುಂದಿಲ್ಲ. ಕೇವಲ ಆದರೆ, ಕೇವಲ ಹೋರಾಟಗಳಿಂದ ಮತಗಳಿಕೆ ಅಸಾಧ್ಯ. ಅದರೊಟ್ಟಿಗೆ ಸಂಘಟನೆಯೂ ಇರಬೇಕಾಗುತ್ತದೆ. ಈ ಸಂಘಟನೆ ಗಟ್ಟಿ ಯಾಗಬೇಕಾದರೆ ಸೂಕ್ತ ನಾಯಕನ ಉಪಸ್ಥಿತಿ ಬೇಕು. ಇಲ್ಲವಾದಲ್ಲಿ ಗಟ್ಟಿಯಾಗಿ ಬೆಂಬಲಕ್ಕೆ ನಿಲ್ಲಲು ನಾಯಕನಿಲ್ಲದೆ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳಬಹುದು.

ಒಮ್ಮೆ ಉತ್ಸಾಹ ಕಳೆದುಕೊಂಡರೆ ಮತ್ತೆ ಅವರನ್ನು ಎಬ್ಬಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆಗೆ ಹೆಚ್ಚು ಸಮಯವೂ ಇಲ್ಲ. ಹೀಗಾಗಿ ತಕ್ಷಣ ಪಕ್ಷಕ್ಕೆ ಮತ್ತು ಶಾಸಕಾಂಗ ಪಕ್ಷಕ್ಕೆ ಸೂಕ್ತ ನಾಯಕನನ್ನು ತಕ್ಷಣವೇ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲವಾದಲ್ಲಿ ಮುಂಬರುವ ಲೋಕಸಭೆ ಚುನಾವಣೆ ವೇಳೆ ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ, ಈಗಾಗಲೇ ಸರಕಾರದ ಗ್ಯಾರಂಟಿ ಯೋಜನೆ
ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ತಳಮಟ್ಟದಲ್ಲಿ ಓಡಾಡಲಾರಂಭಿಸಿದ್ದಾರೆ. ಈಗಲೂ ಬಿಜೆಪಿ ವರಿಷ್ಠರು ಎಚ್ಚೆತ್ತುಕೊಳ್ಳದಿದ್ದರೆ ಅದರ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ಪಡೆಯವುದು ಖಚಿತ. ಈಗಾಗಲೇ ವಿಧಾನಸಭೆ ಚುನಾವಣೆ ಸೋಲಿನಿಂದ ಬೇಸರಗೊಂಡಿರುವ ಬಿಜೆಪಿ ಕಾರ್ಯಕರ್ತರಿಗೆ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಬಾರದೇ ಇದ್ದರೆ ಅವರು ಮತ್ತಷ್ಟು ಕಂಗೆಡಬಹುದು.

ಅಂತಹ ಪರಿಸ್ಥಿತಿ ಬಂದರೆ ಮತ್ತೆ ಪಕ್ಷವನ್ನು ಸಂಘಟಿಸುವುದು ಕಷ್ಟವಾಗಲಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಚಾಣಕ್ಯ ಅಮಿತ್ ಶಾ
ಅವರಂಥ ನಾಯಕರನ್ನು ಹೊಂದಿರುವ ಬಿಜೆಪಿ ರಾಜ್ಯದ ವಿಚಾರದಲ್ಲಿ ಏಕೆ ಎಡವುತ್ತಿದೆಯೋ?

ಲಾಸ್ಟ್ ಸಿಪ್: ಹೊಸದಾಗಿ ಸೌಧ ಕಟ್ಟುವುದು ಸುಲಭ. ಆದರೆ, ಕಟ್ಟಿದ ಸೌಧ ಶಥಿಲಗೊಂಡರೆ ಅದನ್ನು ಜೀರ್ಣೋದ್ಧಾರ ಮಾಡುವುದು ಅತ್ಯಂತ ಕಷ್ಟ.

Leave a Reply

Your email address will not be published. Required fields are marked *