Monday, 12th May 2025

ತ್ರಿಪುರಾ ವಿಧಾನಸಭೆ ಕಲಾಪ: ಐವರು ಶಾಸಕರ ಅಮಾನತು

ಅಗರ್ತಲಾ: ತ್ರಿಪುರಾ ವಿಧಾನಸಭೆ ಕಲಾಪದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ತಿಪ್ರಾ ಮೋಥಾ ಪಕ್ಷ ಸೇರಿ ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ ನಡೆದಿದೆ.

ಸದನದ ಬಾವಿಗೆ ಇಳಿದು ತಳ್ಳಾಟ, ನೂಕಾಟ ಉಂಟು ಮಾಡಿ ಶಾಸಕರು ರಣಾಂಗಣ ಸೃಷ್ಟಿಸಿದ್ದಾರೆ. ಹೀಗಾಗಿ ಐವರು ಶಾಸಕರನ್ನು ಸ್ಪೀಕರ್​ ಒಂದು ದಿನದ ಮಟ್ಟಿಗೆ ಕಲಾಪ ದಿಂದ ಅಮಾನತುಗೊಳಿಸಿದ್ದಾರೆ.

ಪ್ರತಿಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ ಅವರು ಬಾಗ್​ಬಾಶಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜದಾವ್​ಲಾಲ್ ನಾಥ್ ಇತ್ತೀಚಿಗೆ ಸದನದಲ್ಲೇ ಅಶ್ಲೀಲ ಚಿತ್ರ ವೀಕ್ಷಣೆ ವಿಷಯದ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಆದರೆ, ಚರ್ಚೆಗೆ ಅವಕಾಶ ನೀಡದ ಸ್ಪೀಕರ್​, ಕೆಲ ಪ್ರಮುಖ ವಿಷಯಗಳ ಚರ್ಚೆ ನಂತರ ತಮ್ಮ ಬಳಿಗೆ ಹಿಂತಿರುಗಿ ಎಂದು ಸೂಚಿಸಿ ದರು. ಇದರಿಂದ ಪ್ರತಿಪಕ್ಷಗಳ ಶಾಸಕರು ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಸದನದ ಬಾವಿಗೆ ಇಳಿದು ಶಾಸಕರು ಗದ್ದಲ ಸೃಷ್ಟಿಸಿದರು. ಮಹಿಳಾ ಶಾಸಕರು ಸೇರಿ ಮೇಜುಗಳನ್ನು ಕುಟುತ್ತಾ ಹಾಗೂ ಮೇಜುಗಳ ಮೇಲೆ ಹತ್ತಿ ಕೋಲಾಹಲ ಉಂಟು ಮಾಡಿದರು. ಹೀಗಾಗಿ ಇಡೀ ಕಲಾಪವು ಗೊಂದಲದ ಗೂಡಾಗಿ ರಣಾಂಗಣವಾಗಿ ಮಾರ್ಪಟ್ಟಿತು. ಈ ವೇಳೆ, ವಿಧಾನಸಭೆಯ ಸಿಬ್ಬಂದಿ ಸ್ಪೀಕರ್​ ಪೀಠದ ಬಳಿ ಭದ್ರತಾ ಕಲ್ಪಿಸಿ ಪೀಠದತ್ತ ತೆರಳದಂತೆ ತಡೆದರು.

ಸದನದಲ್ಲಿ ಶಾಸಕರ ವರ್ತನೆಯನ್ನು ಸ್ಪೀಕರ್​ ಬಿಸ್ವಬಂಧ್ ಸೇನ್ ಖಂಡಿಸಿದರು. ಅಲ್ಲದೇ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಿಪ್ರಾ ಮೋಥಾ ಪಕ್ಷದ ಮೂವರು ಹಾಗೂ ಸಿಪಿಐ(ಎಂ) ಮತ್ತು ಕಾಂಗ್ರೆಸ್​ ಪಕ್ಷದ ತಲಾ ಇಬ್ಬರು ಸೇರಿ ಐವರು ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿದರು.

Leave a Reply

Your email address will not be published. Required fields are marked *