Saturday, 10th May 2025

ಹೋಲಿಕೆಗಳ ಲೋಕದಲ್ಲಿ !

ಅಂತರ್‌-ಜಾಲ

ಬಡೆಕ್ಕಿಲ ಪ್ರದೀಪ

ಅಳೆಯುತ್ತಾ ಅಳೆಯುತ್ತಾ ಎಲ್ಲವನ್ನೂ ನಮ್ಮದೇ ತಕ್ಕಡಿಯಲ್ಲಿ ತೂಗುತ್ತಾ ಹೋದರೆ, ಆ ತೂಕ, ಸುಖದ ತೂಕ ಕಡಿಮೆ ಮಾಡಿ, ಅಸಮಾ ಧಾನದ ತೂಕ ಹೆಚ್ಚಿಸುವ ಮೂಲಕ ಅನಿವಾರ್ಯವಾಗಿ ನಿಮ್ಮನ್ನು ಬೇಸರದ ಬಾಟಲಿಯೊಳಗೆ ಲೀಟರು ನೀರಿನಲ್ಲಿ ಮುಳುಗಿಸಿ ಬಿಡಬಹುದು.

ನಿಮಗೇನಾದ್ರೂ ಗೊತ್ತಿದ್ರೆ ಹೇಳಿ. ಆದರೆ ಅದು ನೀವು ತಿಳಿದುಕೊಂಡಿರುವ ಅಳತೆ ಅನ್ನುವುದು ನೆನಪಿರಲಿ. ಮಾಪನ ಯಾವತ್ತಿಗೂ ಇನ್ನೊಂದರ ಜೊತೆ ನಾವು ಮಾಡುವ ಹೋಲಿಕೆಯೇ ಹೊರತು, ಅದರ ಸ್ವಂತ ಬಲದ್ದಲ್ಲ ಅನ್ನುವುದು ಸ್ವಲ್ಪ ಯೋಚಿಸಿ. ಇಂಗ್ಲಿಷ್‌ನಲ್ಲಿ ಮೆಶರ್‌ಮೆಂಟ್ ಎಂದು ಕರೆಯ ಲ್ಪಡುವ ಈ ಅಳತೆ, ಮಾಪನ ಏನೇ ಇದ್ದರೂ ನಮಗೆ ಅದು ಹೋಲಿಕೆ ಮಾಡುವ, ಕಂಪೇರ್ ಮಾಡುವ ಒಂದು ವಿಧಾನವೇ ಹೊರತು ಬೇರೇನಲ್ಲ.

ನಮ್ಮ ಖುಷೀ, ದುಃಖವೂ ಅಷ್ಟೇ, ಅದನ್ನು ನಾವು ಇನ್ನೊಂದರೊಂದಿಗೆ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿ ದರೆ ಮಾತ್ರ ಅದರ ಅಳತೆ ಸಿಗೋದು. ಒಂದು ವೇಳೆ ಆ ಅಳತೆ ಮಾಡುವುದು ಬಿಟ್ಟರೆ ನಮಗೆ ಸಿಕ್ಕಿದ್ದರಲ್ಲಿಯೇ ಖುಷಿ ಅಥವಾ ಸಮಾಧಾನ ಇದ್ದೇ ಇರುತ್ತದೆ. ಕೈಯಲ್ಲಿ ಸಖತ್ತಾಗಿರೋ ವಾಚು ಅಥವಾ -ನು ಇಟ್ಟುಕೊಂಡು ಓಡಾಡುವ ನಮಗೆ ನಮ್ಮ ಪಕ್ಕದಲ್ಲಿರುವ ವ್ಯಕ್ತಿಯ ಕೈಯಲ್ಲಿರುವ ಗೆಜೆಟ್ ಇನ್ನಷ್ಟು ಅಡ್ವಾನ್ಸ್‌ಡ್ ಆಗಿದ್ದಾಗ ಮಾತ್ರ ಅದೇನೋ ಮನಸ್ಸಿಗೆ ನಾಟುತ್ತದೆ. ನನ್ ಹತ್ರ ಇರೋದು ಇಷ್ಟೊಂದು ಟಾಪ್ ಲೆವೆಲ್‌ನ ಗೆಜೆಟ್ ಅಲ್ವಲ್ಲಾ ಅನ್ನುವ ಕೊರಗು ಮನಸ್ಸಿನಲ್ಲಿ ಮನೆ ಮಾಡುತ್ತದೆ. ಕೊರಗು ನಿಧಾನವಾಗಿ ನಮ್ಮನ್ನು ತನ್ನ ಆಸರೆಗೆ ತೆಗೆದುಕೊಳ್ಳುತ್ತದೆ.

ಈ ಹೋಲಿಕೆಯೇ ನಮ್ಮ ಸಂತೋಷದ ಮಾಪನ, ಕೈಯಲ್ಲಿ ಅದೆಷ್ಟೇ ಇದ್ದರೂ ಅದಕ್ಕಿಂತ ಹೆಚ್ಚಿನದು ಅನಿಸಿ ಕೊಂಡದ್ದೇನಾದರೂ ನಮ್ಮ ಮುಂದೆ ಕಾಣಿಸಿಕೊಂಡರೆ ಅದು ನಮಗೆ ನಮ್ಮ ಕೈಯಲ್ಲಿರುವ ವಸ್ತುವನ್ನು ನಗಣ್ಯ ವಾಗಿಸಿಬಿಡುತ್ತದೆ. ನಾವು ಇಷ್ಟು ದಿನ ಸಂತೋಷ ಅಂತ ಯಾವುದನ್ನು ಆಲಿಂಗಿಸಿಕೊಂಡಿರುತ್ತೇವೋ, ಅದು ಖುಷಿಯನ್ನು ನೀಡುವ ಸಾಧನವಾಗಿರು ವುದು ಅಲ್ಲಿಗೇ ಕೊನೆಗೊಳ್ಳುತ್ತದೆ.

ಈ ಅಳತೆ ಅಥವಾ ಮಾಪನವನ್ನು ಎಲ್ಲರೂ ಬಳಸುವುದು ಸಹಜ, ಆದರೆ ಅಳತೆ ನಮ್ಮ ಬೆಳವಣಿಗೆಗೆ ಊರುಗೋಲಾಗದೇ, ನಮ್ಮ ಮನಸ್ಸನ್ನು ಚಿಂತೆಗೆ ಹಚ್ಚುವ ವಿಷಯವಾದರೆ ಮಾತ್ರ ಈ ತೊಂದರೆ. ಮಾಪನಕ್ಕೂ ನಮ್ಮ ಮಾನಕ್ಕೂ ಅಂಥಾ ದೊಡ್ಡ ಕನೆಕ್ಷನ್ ಇಲ್ಲದಿದ್ದರೂ, ನಾವು ಆ ಸಂಬಂಧವನ್ನು ಸೃಷ್ಟಿಸಿಕೊಳ್ಳುತ್ತೇವೆ. ಇದರಿಂದ ನಮ್ಮ ನಡತೆ, ನೀತಿ ನಿಯಮಗಳು ಬಿಗಿಗೊಂಡು, ನಾವು ಬದುಕುವ ರೀತಿ ಚೆನ್ನಾಗಿ ಆಯಿತೋ, ಅದು ಒಳ್ಳೆಯ ಮಾಪನ ಅನ್ನೋಣ. ಅದೇ ಅದರ ಮೂಲಕ ನಾವು ನಮ್ಮ ತಲೆ ಹಾಳು ಮಾಡಿಕೊಂಡು, ಇನ್ನೊಬ್ಬರು ಕೂಡ ನಮ್ಮಿಂದ ಹೆಚ್ಚು ಬೆಳವಣಿಗೆ ಕಾಣಬಾರದು ಎನ್ನುವವರೆಗೆ ನಾವು ಹಾಕುವ ಯೋಜನೆಗಳು ಮಾತ್ರ ತುಂಬಾ ಡೇಂಜರಸ್.

ಹಿಂದೆ ಒಬ್ಬರು ಕೈಯಲ್ಲಿ ಪೆನ್ಸಿಲ್ ಒಂದನ್ನು ಕೊಟ್ಟು, ಅದರ ಪಕ್ಕ ಇನ್ನೊಂದು ಚಿಕ್ಕ ಪೆನ್ಸಿಲ್ ಇಟ್ಟು, ನೋಡಪ್ಪಾ ಈ ದೊಡ್ಡ ಪೆನ್ಸಿಲನ್ನ ಮುಟ್ಟದೇ ಚಿಕ್ಕದಾಗಿಸಬೇಕು ಅಂದಾಗ ನಾನು ಒಂದು ಕ್ಷಣ ಯೋಚನೆಗೆ ನಿಂತೆ. ಮುಟ್ಟದೇ ಹೇಗಪ್ಪಾ ಈ ಪೆನ್ಸಿಲನ್ನ ಚಿಕ್ಕದು ಮಾಡೋದು ಅನ್ನುವ ಚಿಂತೆಯನ್ನು ಮುಖದಲ್ಲಿ ತೋರಿಸದೆ ಅವರನ್ನೇ ನೋಡ್ತಾ ನಿಂತವನಿಗೆ, ಅವರು, ಆ ದೊಡ್ಡ ಪೆನ್ಸಿಲಿಗಿಂತಲೂ ದೊಡ್ಡ ಪೆನ್ಸಿಲನ್ನ ಪಕ್ಕದಲ್ಲಿ ತಂದು ಇಟ್ಟು, ಈಗ ಇದು ಚಿಕ್ಕದಾಯ್ತು ಅಂತ ನಕ್ಕಾಗ ನಾನು, ಓಹ್ ಹೌದಲ್ಲ, ಈ ರೀತಿ ಯೋಚನೆ ಮಾಡಿರಲೇ ಇಲ್ಲ ಅಂತ ಯೋಚಿಸಿ ವರ್ಷಗಳೇ ಆಯಿತು.

ಬದುಕೇ ಒಂದು ಹೋಲಿಕೆ
ಈಗಲೂ ಈ ಘಟನೆಯನ್ನು ಬದುಕಿನ ಬೇರೆ ಬೇರೆ ವಿಭಾಗಗಳಲ್ಲಿ ಅಳವಡಿಸಿಕೊಳ್ಳುತ್ತಾ ನೋಡಿದಾಗ, ಬದುಕೇ ಇನ್ನೊಂದರ ಜೊತೆ ಹೋಲಿಕೆ ಮಾಡುತ್ತಾ ನಡೆಯುವ ವಿಚಿತ್ರವನ್ನು ಗಮನಿಸಿ ನಗುತ್ತಾ ಇರುತ್ತೇನೆ. ಈ ಹೋಲಿಕೆ, ಈ ಮಾಪನ, ಈ ಅಳತೆ, ಎಲ್ಲವೂ ಬದುಕಿಗೆ ಅನಿವಾರ್ಯ ವಾದವುಗಳೇ, ಆದರೆ ಅದರ ಬಳಕೆ ಹೇಗೆ ಅನ್ನುವುದರ ಮೇಲೆ ನಮ್ಮ ಬದುಕಿನ ಬೆಳಕೇ ನಿರ್ಧಾರವಾಗುತ್ತದೆ. ಹೋಲಿಕೆ ಬದುಕಿನ ಆರಂಭದಲ್ಲೇ ಶುರು, ಇನ್ನು ದೊಡ್ಡ ದೊಡ್ಡ ಹೋಲಿಕೆಗಳಂತೂ ಇನ್ನಷ್ಟು ಡೇಂಜರಸ್. ಅವನ ಹತ್ರ ಅಷ್ಟೊಂದು ಕಾರ್‌ಗಳಿವೆ, ನನ್ ಹತ್ರ ಒಂದು ಕಾರು, ಒಂದು ಬೈಕು ಮಾತ್ರ. ಅವನು -ಟಲ್ಲೇ ಓಡಾಡ್ತಾನೆ, ನಾನು ಬಸ್ ಪಾಸ್‌ನಲ್ಲಿ ಬದುಕು ಸಾಗಿಸ್ತಾ ಇದೀನಿ. ಅವರಿಗೆ ಫ್ರೀಯಾಗಿ ಎಲ್ಲಾ ಸಿಗತ್ತೆ, ನಾನು ಎಲ್ಲಕ್ಕೂ ದುಡ್ಡು ಕೊಡ್ಬೇಕು.

ಮಾಪನ, ಬದುಕನ್ನು ಬೆಳಗಿಸುವ ವಿಚಾರಕ್ಕಿಂತ ಹೆಚ್ಚಾಗ, ಮನಸ್ಸಿನ ತಾಪಮಾನ ಹೆಚ್ಚಿಸಿ, ಮಂಗಳೂರಿನವರು ಹೇಳುವ ಹಾಗೆ, ಮಂಡೆ ಬೆಚ್ಚ ಮಾಡಿಸಿಬಿಡುವ ಹೋಲಿಕೆ, ಮಾಪನ, ಅಳತೆ ಆಗಿಬಿಟ್ಟರಂತೂ, ಅದು ಟೆನ್ಶನ್ ಆಗಿ, ಅದರಿಂದ ಬಿಪಿಯೋ, ಶುಗರ್ರ‍ೋ ಬರುವ ರೀತಿಯ ಮನಃಸ್ಥಿತಿ ಬಂದರಂತೂ ಕೇಳೋದೇ ಬೇಡ. ಇದುವೇ ಮಾಪನದ ಡೇಂಜರ್. ಸೋ ಮಾಪನ ಮಾಡುವಾಗ ಜೋಪಾನ ಅಂದಿದ್ದು ಇದಕ್ಕೇ. ಆದರೆ ಕೆಲವೊಂದರ ಮಾಪನ ಅನಿವಾರ್ಯ, ಎವರೆಸ್ಟ್ ಅಷ್ಟು ಎತ್ತರ ಅಂತ ಗೊತ್ತಾಗಬೇಕಿದ್ದರೆ, ಅದನ್ನು ಲೋಕದ ಉಳಿದ ಗಗನಚುಂಬಿ ಪರ್ವತಗಳಿಗೆ ಹೋಲಿಕೆ
ಮಾಡಲೇ ಬೇಕು.

ಆಗಷ್ಟೇ ಅದರ ಅಳತೆ ಸಿಗುವುದು. ನಿಮಗೆ ಗೊತ್ತಾ, ನಾವು ನೋಡುವ ಸಮಯ, ತೂಗುವ ಕಲ್ಲಿನ ಭಾರ, ಅಳೆಯುವ ಲೀಟರಿನ ಮಾಪನ, ಎಲ್ಲವೂ ಇನ್ನೊಂದರ ಜೊತೆ ಹೋಲಿಕೆಯೇ ಹೌದು ಅಂತಾ? ಪಕ್ಕದಲ್ಲಿರುವ ಕಲ್ಲು ಅದು ನಿಜಕ್ಕೂ ಒಂದು ಕೆಜಿಯದು ಅಂತ ನಿಮಗೆ ಗೊತ್ತಾಗಬೇಕಿದ್ದರೆ, ಅಥವಾ ಒಂದು ಲೀಟರ್ ಅಂದರೆ ಇಷ್ಟೇ ಅನ್ನುವುದು ತಿಳಿಯಬೇಕಿದ್ದರೆ ಅದನ್ನು ಮೂಲದಲ್ಲೊಂದು ಅಳತೆಯೊಂದಿಗೆ ಮಾಪಿಸಲೇಬೇಕಾಗಿದ್ದಿರ ಬಹುದು ಅನ್ನುವುದು ನಿರ್ವಿವಾದ.

ಹೀಗೆ ಮಾಪನಕ್ಕೆ ಅಷ್ಟೊಂದು ಅನಿವಾರ್ಯ ಸ್ಥಾನ ಇರುವುದು ಒಂದೆಡೆಯಾದರೆ, ಯಾವುದನ್ನು ಅಳೆಯುತ್ತೇವೆ ಅನ್ನುವುದೂ ಇನ್ನೊಂದು ವಿಶೇಷ, ಅಷ್ಟೇ ಮುಖ್ಯ ವಿಷಯ ಅನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಅಳೆಯುತ್ತಾ ಅಳೆಯುತ್ತಾ ಎಲ್ಲವನ್ನೂ ನಮ್ಮದೇ ತಕ್ಕಡಿಯಲ್ಲಿ ತೂಗುತ್ತಾ ಹೋದರೆ, ಆ ತೂಕ, ಸುಖದ ತೂಕವನ್ನು ಕಡಿಮೆ ಮಾಡಿ, ಅಸಮಾಧಾನದ ತೂಕ ಹೆಚ್ಚಿಸುವ ಮೂಲಕ ಅನಿವಾರ್ಯವಾಗಿ ನಿಮ್ಮನ್ನು ಬೇಸರದ ಬಾಟಲಿಯೊಳಗೆ ಲೀಟರು ನೀರಿನಲ್ಲಿ ಮುಳುಗಿಸಿಬಿಡಬಹುದು. ಹಾಗಾಗಿ, ಮಾಪನ ಮಾಡೋ ವೇಳೆ, ಜೋಪಾನ!