Monday, 12th May 2025

ಸಾತ್ಪುರ ಭವನದಲ್ಲಿ ಭಾರೀ ಬೆಂಕಿ: ಸಕಾಲದಲ್ಲಿ ಕಟ್ಟಡ ತೆರವು

ಭೋಪಾಲ್: ಭಾರತೀಯ ವಾಯುಪಡೆ, ಭಾರತೀಯ ಸೇನೆ ಮತ್ತು ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡ ಸುದೀರ್ಘ ಕಾರ್ಯಾಚರಣೆಯ ನಂತರ ಹಲವಾರು ಸರಕಾರಿ ಇಲಾಖೆಗಳ ಕಚೇರಿಗಳನ್ನು ಹೊಂದಿರುವ ಭೋಪಾಲ್‌ನ ಸಾತ್ಪುರ ಭವನದಲ್ಲಿ ಕಾಣಿಸಿಕೊಂಡಿದ್ದ ಭಾರೀ ಬೆಂಕಿಯನ್ನು ನಂದಿಸಲಾಗಿದೆ.

ಸಕಾಲದಲ್ಲಿ ಕಟ್ಟಡವನ್ನು ತೆರವು ಮಾಡಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.

ಆದಿವಾಸಿ ಕಲ್ಯಾಣ ಇಲಾಖೆಯ ಪ್ರಾದೇಶಿಕ ಕಚೇರಿ ಇರುವ ಸರಕಾರಿ ಕಟ್ಟಡದ ಮೂರನೇ ಮಹಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಮೂರನೇ ಮಹಡಿಯಿಂದ ಮೇಲಿನ ಮೂರು ಮಹಡಿಗಳಿಗೆ ಬೆಂಕಿ ವೇಗವಾಗಿ ವ್ಯಾಪಿಸಿದೆ.

ಆರೋಗ್ಯ ಇಲಾಖೆ ಕಚೇರಿ ಸೇರಿದಂತೆ ಅಲ್ಲಿರುವ ಎಲ್ಲ ಕಚೇರಿಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಕಡತಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬೆಂಕಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದು, ಬೆಂಕಿ ನಂದಿಸಲು ನೆರವು ಕೋರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.