ವರ್ತಮಾನ
maapala@gmail.com
ಕಾಂಗ್ರೆಸ್ ಸರಕಾರ ಹಿಂದಿನ ಬಿಜೆಪಿ ಸರಕಾರದ ತೀರ್ಮಾನಗಳ ವಿರುದ್ಧ ಒಂದರ ಹಿಂದೊಂದು ಕ್ರಮಗಳನ್ನು ಕೈಗೊಳ್ಳು ತ್ತಿರುವುದನ್ನು ಗಮನಿಸಿದಾಗ ಸೇಡಿನ ರಾಜಕೀಯ ಆರಂಭಿಸಿದೆ ಎನ್ನಿಸುವುದು ಸಹಜ. ಆದರೆ, ಕಾಂಗ್ರೆಸ್ ಕೆಲವು ತರಾತುರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
ಸಾವಿರಾರು ಕೋಟಿ ರು. ಮೊತ್ತದ ನೀರಾವರಿ ಯೋಜನೆಗಳ ಟೆಂಡರ್ ರದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಕ್ರಮದ ತನಿಖೆ, ಹಿಂದಿನ ಸರಕಾ ರದ ಅವಧಿಯಲ್ಲಿ ಪರಿಷ್ಕರಣೆಯಾದ ಪಠ್ಯಗಳ ರದ್ದು, ಸರಕಾರಿ ಅಭಿಯೋಜಕರ ನೇಮಕಾತಿ ಅಕ್ರಮದ ತನಿಖೆ, ಖಾಸಗಿ ಸಂಸ್ಥೆಗಳಿಗೆ ಹಂಚಿಕೆಯಾಗಿರುವ ಭೂಮಿ ಹಿಂಪಡೆಯುವ ಉದ್ದೇಶದಿಂದ ಪರಿಶೀಲನೆಗೆ ನಿರ್ಧಾರ, ಕಳೆದ ಆರು ತಿಂಗಳಲ್ಲಿ ಸರಕಾರ ಕೈಗೊಂಡಿದ್ದ ಪ್ರಮುಖ ತೀರ್ಮಾನಗಳ ಮರುಪರಿಶೀಲನೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಕೃಷಿ ಕಾಯಿದೆಗಳ ಮರುಪರಿಶೀಲನೆಗೆ ತೀರ್ಮಾನ… ಲೆಕ್ಕ ಹಾಕುತ್ತಾ ಹೋದರೆ ಇಂತಹ ಹತ್ತಾರು ತೀರ್ಮಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತೆಗೆದುಕೊಳ್ಳುತ್ತಿದೆ.
ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸ್ದ್ದಿನ್ನು ಬಿಟ್ಟರೆ ಸರಕಾರ ಮಾಡಿರುವ ಅತಿ ಹೆಚ್ಚಿನ ಕೆಲಸ ಎಂದರೆ ಅದು ಹಿಂದಿನ ಸರಕಾರದ ನಿರ್ಧಾರಗಳು, ಆದೇಶಗಳನ್ನು ಮರು ಪರಿಶೀಲಿಸ ಲು ಮುಂದಾಗಿರುವುದು. ಅದಷ್ಟೇ ಅಲ್ಲ, ಮುಖ್ಯಮಂತ್ರಿಯಾಗಿ ಪ್ರಮುಖ ಸಚಿವರು ಕೂಡ ತಾವು ಮುಂದೇನು ಮಾಡಬೇಕು ಎಂಬುದಕ್ಕಿಂತ ಹಿಂದಿನ ಬಿಜೆಪಿ ಸರಕಾರದ ಅವಧಿಯನ್ನು ಟೀಕಿಸುವುದಕ್ಕೇ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ.
ಯಾವುದೇ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಅಧಿಕಾರ ಕಳೆದುಕೊಂಡಿರುವ ಪಕ್ಷ ಆಡಳಿತ ಪಕ್ಷದ ವಿರುದ್ಧ ಹೋರಾಟ ಆರಂಭಿಸುವುದು ಸಹಜ. ಅಧಿಕಾರಕ್ಕೆ ಬಂದಾಗಿನಿಂದಲೇ ಹೊಸ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ, ಎಚ್ಚರಿಕೆ ನೀಡುತ್ತಾ, ತಪ್ಪಿದಾಗ ಅದರ ವಿರುದ್ಧ ಹೋರಾಟಕ್ಕಿಳಿಯುವ ಮೂಲಕ ಜನರನ್ನು ಬಡಿದೆಬ್ಬಿಸುವುದು ರಚನಾತ್ಮಕ ಪ್ರತಿಪಕ್ಷದ ಕೆಲಸ ಮತ್ತು ಜವಾಬ್ದಾರಿ. ಇದನ್ನು ಬಿಜೆಪಿ ಮತ್ತು ಜೆಡಿಎಸ್ ತಕ್ಕಮಟ್ಟಿಗೆ ಮಾಡುತ್ತಿವೆಯಾದರೂ ಅದಕ್ಕಿಂತ ತೀವ್ರವಾಗಿ ಆಡಳಿತ ಪಕ್ಷ ಕಾಂಗ್ರೆಸ್ಸೇ ಪ್ರತಿಪಕ್ಷಗಳ ವಿರುದ್ಧ ಮುಗಿಬಿದ್ದಿದೆ.
ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಈಗಾಗಲೇ ಪ್ರತಿಪಕ್ಷಗಳ ಬಾಯಿಯನ್ನು ಬಹುತೇಕ ಮುಚ್ಚಿರುವ ಸರಕಾರ ಇದೀಗ ಅವುಗಳ ಮೂಗು ಹಿಡಿಯಲು ಸಜ್ಜಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪ್ರಮುಖ ಪ್ರತಿಪಕ್ಷ ಬಿಜೆಪಿ ವಿರುದ್ಧ ಅತ್ಯಂತ ತೀವ್ರವಾಗಿ
ಮುಗಿಬಿದ್ದು ಉಸಿರಾಡಲೂ ಒದ್ದಾಡುವಂತೆ ಮಾಡುತ್ತಿದೆ. ಆ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ
ಆರಂಭಿಸುತ್ತಿರುವ ಬಿಜೆಪಿ ಮೇಲೇಳದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಯಾವುದೇ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಹಿಂದಿನ ಸರಕಾರದ ತೀರ್ಮಾನಗಳ ವಿರುದ್ಧ ಈ ಪರಿಯಲ್ಲಿ ಮುಗಿ ಬಿದ್ದಿರುವುದು ಇದೇ ಪ್ರಥಮ. ಇದಕ್ಕೆ ಆಡಳಿತ ನಡೆಸುವವರು ನೀಡಿರುವ ಕಾರಣ, ಆಡಳಿತ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು. ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದೇ ರೀತಿ ಬಿಜೆಪಿ ವಿರುದ್ಧ, ಆ ಪಕ್ಷ ಅಧಿಕಾರದಲ್ಲಿದ್ದಾಗ ಕೈಗೊಂಡ ನಿರ್ಧಾರಗಳ ವಿರುದ್ಧ ಕಾಂಗ್ರೆಸ್ ಸರಕಾರ ಕೈಗೊಳ್ಳುತ್ತಿರುವ ನಿಲುವುಗಳು ಅತಿ ಎನಿಸುತ್ತಿದೆ. ಆದರೆ, ಈ ಅತಿಯಿಂದ ಉದ್ಭವಿಸುವ ವಿಷವನ್ನು ಜೀರ್ಣಿಸಿಕೊಳ್ಳಲು ರಾಜ್ಯದ ಜನರು ಕಾಂಗ್ರೆಸ್ಗೆ ಬಹುಮತ ಕೊಟ್ಟಿದ್ದಾರೆ. ಹಾಗೆಂದು ಕಾಂಗ್ರೆಸ್ ನಾಯಕರು ಇದರ ಪರಿಣಾಮಗಳನ್ನು ಊಹಿಸದೆ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ
ಎಂದಲ್ಲ.
ಇದರಿಂದ ಆಗುವ ಅಪಾಯದ ಅರಿವು ಅವರಿಗಿದೆ. ಜತೆಗೆ ಆ ಅಪಾಯವನ್ನು ಎದುರಿಸಿ ನಿಲ್ಲಲು ಸಾಕಷ್ಟು ಸಮಯವೂ ಅವರಿಗಿದೆ. ಒಂದೊಮ್ಮೆ ಈಗ ಸುಮ್ಮನಿದ್ದು ಇನ್ನೇನು ಚುನಾವಣೆ ಬಂತು ಎನ್ನುವಾಗ ಹಿಂದಿನ ಸರಕಾರಗಳ ಅಕ್ರಮಗಳನ್ನು ಪ್ರಸ್ತಾಪಿಸುತ್ತಾ ಕಾಲ ಕಳೆದರೆ ನಮಗೂ ಬಿಜೆಪಿಗೆ ಬಂದ ಪರಿಸ್ಥಿತಿಯೇ ಬರಬಹುದು ಎಂಬುದನ್ನು ಅವರು ತಿಳಿದುಕೊಂಡಿ ದ್ದಾರೆ.
ಅದಕ್ಕಾಗಿ ಈಗಿನಿಂದಲೇ ವಿವಾದಕ್ಕೆ ಕಾರಣವಾಗುವ ಎಲ್ಲಾ ನಿರ್ಧಾರಗಳನ್ನೂ ಕೈಗೊಂಡು ಬಳಿಕ ಆಡಳಿತದ ಬಗ್ಗೆ ಗಮನ ಹರಿಸಲು ಅವರು ಮುಂದಾಗಿದ್ದಾರೆ. ಇದನ್ನವರು ಕಲಿತದ್ದು ಬಿಜೆಪಿ ಸರಕಾರದಿಂದಲೇ. 2018ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಿ 2019ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 2022ರ ಮಧ್ಯಂತರ ದವರೆಗೆ ಏನೂ ಮಾಡಲೇ ಇಲ್ಲ. ಆಡಳಿತಾತ್ಮಕವಾಗಿ ಕೆಲವು ನಿರ್ಧಾರ ಗಳನ್ನು ಕೈಗೊಂಡಿದ್ದು ಬಿಟ್ಟರೆ ಉಳಿದಂತೆ ಹಿಂದಿನ ಸರಕಾರ ಗಳ ನಿರ್ಧಾರಗಳ ಬಗ್ಗೆ ಅಥವಾ ಆ ಅವಧಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ.
ಆದರೆ, ಯಾವಾಗ ಪಿಎಸ್ಐ ನೇಮಕ ಅಕ್ರಮ, ೪೦ ಪರ್ಸೆಂಟ್ ಕಮಿಷನ್ ಆರೋಪಗಳು ಬಂದವೋ ಆಗ ಎಚ್ಚೆತ್ತು
ಹಿಂದಿನ ಸರಕಾರಗಳ ಅಕ್ರಮಗಳನ್ನು ಪ್ರಸ್ತಾಪಿಸಿ ತನಿಖೆಗೆ ಮುಂದಾಯಿತು. ಅಷ್ಟೇ ಅಲ್ಲ, ಮೀಸಲು ಹೆಚ್ಚಳ, ಮರು ಪರಿಶೀಲನೆ ಸೇರಿದಂತೆ ಯಾವತ್ತೋ ಕೈಗೊಳ್ಳಬೇಕಾಗಿದ್ದ ತೀರ್ಮಾನಗಳನ್ನು ಆಡಳಿತದ ಕೊನೆಯ ದಿನಗಳಲ್ಲಿ
ಕೈಗೊಂಡಿತು. ಸರಕಾರ ಯಾವುದೇ ಪ್ರಮುಖ ನಿರ್ಧಾರ ಗಳನ್ನು ಕೈಗೊಂಡಾಗ ಅದಕ್ಕೆ ಪರ ಮತ್ತು ವಿರೋಧ ಕಂಡು ಬರುವುದು ಸಾಮಾನ್ಯ.
ಮೊದಲು ವಿರೋಧವೇ ಮುನ್ನಲೆಗೆ ಬರುತ್ತದೆ. ಆ ವಿರೋಧದ ಕೂಗು ಕಮ್ಮಿಯಾದ ಬಳಿಕ ಪರ ಇರುವ ಅಂಶಗಳನ್ನು ಹೆಚ್ಚೆಚ್ಚು ಪ್ರಸ್ತಾಪಿಸಿ ವಿರೋಧವನ್ನು ಕಡಿಮೆ ಮಾಡಲಾಗುತ್ತದೆ. ಆದರೆ, ಬಿಜೆಪಿ ಸರಕಾರದ ಅವಧಿಯಲ್ಲಿ ಕೈಗೊಂಡ ಪ್ರಮುಖ
ನಿರ್ಧಾರಗಳ ಬಗ್ಗೆ ಇರುವ ವಿರೋಧಗಳು ತಾರಕಕ್ಕೇರಿದಾಗಲೇ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. ಹೀಗಾಗಿ ನಿರ್ಧಾರಗಳ ಹಿಂದೆ ಇರುವ ಪೂರಕ ಅಂಶಗಳನ್ನು ಜನರಿಗೆ ತಲುಪಿಸಲು ಬಿಜೆಪಿಯಿಂದ ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಬಿಜೆಪಿ ಹೀನಾಯವಾಗಿ ಸೋಲು ವಂತಾಯಿತು.
2013-18ರ ಮಧ್ಯೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವೂ ಇದೇ ತಪ್ಪನ್ನು ಮಾಡಿತ್ತು. ಸರಕಾರದ ಕೊನೆಯ ಅವಧಿ ಯಲ್ಲಿ ವಿವಾದಿತ ತೀರ್ಮಾನ ಗಳನ್ನು ಕೈಗೊಂಡಿತ್ತು. ಬಿಜೆಪಿಯಂತೆ ಅದು ಕೂಡ 2018ರ ಚುನಾವಣೆಯಲ್ಲಿ ಪರಿಣಾಮ ಎದುರಿಸಿ ಸೋತಿತು. ಇದರಿಂದ ಪಾಠ ಕಲಿತೇ ಕಾಂಗ್ರೆಸ್ ಈಗ ತನ್ನ ಕೆಲಸ ಆರಂಭಿಸಿದೆ. ಯಾವೆಲ್ಲಾ ನಿರ್ಧಾರಗಳಿಗೆ ಹೆಚ್ಚು ಜನರಿಂದ ವಿರೋಧ ವ್ಯಕ್ತವಾಗುತ್ತದೋ? ಭಾವನಾತ್ಮಕವಾಗಿ ಕೆರಳಿಸುತ್ತದೋ ಅಂತಹ ನಿರ್ಧಾರ ಗಳನ್ನು ಈಗಲೇ ತೆಗೆದುಕೊಳ್ಳು ತ್ತಿದೆ. ಇದರಿಂದಾಗಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾದರೂ ಇನ್ನೂ ಐದು ವರ್ಷ ಅಧಿಕಾರ ಇರುವುದರಿಂದ ಸರಕಾರ ಕ್ಕೇನೂ ಅಪಾಯ ಆಗುವುದಿಲ್ಲ.
ಬಹುಮತದ ಸರಕಾರ ಇರುವುದರಿಂದ ಬೆರಳೆಣಿಕೆಯ ಶಾಸಕರು ತಿರುಗಿ ಬಿದ್ದು ಸರಕಾರ ಉರುಳಿಸಲು ಸಾಧ್ಯವಿಲ್ಲ. ಏನೇ ಪ್ರತಿರೋಧ ಎದುರಾದರೂ ಕೆಲವು ದಿನ ಮುಂದುವರಿದು ಬಳಿಕ ತಣ್ಣಗಾಗುತ್ತದೆ. ಸ್ವಲ್ಪ ದಿನಗಳ ಬಳಿಕ ಜನರೂ ಅದನ್ನು ಮರೆತುಹೋಗುತ್ತಾರೆ. ಎಲ್ಲವೂ ಸಹಜ ಎನ್ನುವಂತೆ ಮುಂದುವರಿಯುತ್ತದೆ. ಚುನಾವಣೆಗೆ ಒಂದೆರಡು ವರ್ಷ ಇದೆ ಎನ್ನುವಾಗ ಯಾವುದೇ ವಿವಾದಿತ ವಿಷಯಗಳಿಗೆ ಕೈಹಾಕದೆ ಆಡಳಿತ ಮುಂದುವರಿಸಿಕೊಂಡು ಹೋದರೆ ಆಗ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಪ್ರತಿಪಕ್ಷಗಳಿಗೆ ಪ್ರಬಲ ಅಸಗಳು ಸಿಗುವುದಿಲ್ಲ.
ಹೀಗಾಗಿ ಕೊನೆಯ ಎರಡು ವರ್ಷಗಳಲ್ಲಿ ಆಡಳಿತಾತ್ಮಕವಾಗಿ ಉತ್ತಮ ನಿರ್ಧಾರಗಳನ್ನು ಕೈಗೊಂಡರೆ ಮತ್ತೆ ಅಧಿಕಾರಕ್ಕೆ
ಬರುವುದು ಕಷ್ಟವೇನೂ ಅಲ್ಲ ಎಂಬುದನ್ನು ಕಾಂಗ್ರೆಸ್ ಅರಿತಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರಕಾರ ಕೂಡ ಮಾಡುತ್ತಿರುವುದು ಇದೇ ರೀತಿಯ ತಂತ್ರ. ಅದನ್ನೇ ರಾಜ್ಯದಲ್ಲಿ ಕಾಂಗ್ರೆಸ್ ಅನುಸರಿಸುತ್ತಿದೆ.
ಇನ್ನು ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಇದೆಯಾದರೂ ಈಗಿನ ನಿರ್ಧಾರಗಳಿಗೆ ಎದುರಾಗುವ ವಿರೋಧಗಳಿಂದ ಕಳೆದುಕೊಳ್ಳುವುದೇನೂ ಇಲ್ಲ. ಏಕೆಂದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಅದು ಗೆದ್ದಿದ್ದು ಒಂದೇ ಸ್ಥಾನ. ಮತ್ತೆ ಆ ಸ್ಥಾನ ಗೆದ್ದುಕೊಳ್ಳುವುದು ಕಷ್ಟವೂ ಅಲ್ಲ. ಸ್ಥಾನಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಅದಕ್ಕೆ ಗ್ಯಾರಂಟಿ ಯೋಜನೆಗಳ ಬಲ ಇದೆ. ಯೋಜನೆಗಳಿಗೆ ವಿಧಿಸಿರುವ ಷರತ್ತುಗಳ ಬಗ್ಗೆ ಏನೇ ವಿರೋಧವಿದ್ದರೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅದರ ಲಾಭ ಸಿಗುವುದಂತೂ ಸುಳ್ಳಲ್ಲ.
ಮೇಲಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟೇ ಸೀಟು ಗೆದ್ದರೂ ದೆಹಲಿಯಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ೨೦೨೮ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಿನಿಂದಲೇ ಕೆಲಸ ಆರಂಭಿಸಿದೆ. ಯುದ್ಧ ಕಾಲೇ
ಶಸಾಭ್ಯಾಸ ಎನ್ನುವುದಕ್ಕಿಂತ ಮೊದಲೇ ಶಸ್ತ್ರಾಭ್ಯಾಸ ಮಾಡಿ ಬಳಿಕ ಯಾವುದೇ ಸುಳಿವಿಲ್ಲದೆ ವಿರೋಧಿಗಳ ಮೇಲೆ ದಾಳಿ
ಮಾಡುವ ಹೊಸ ತಂತ್ರಗಾರಿಕೆ ಹೆಣೆದಿದೆ.
ಲಾಸ್ಟ್ ಸಿಪ್: ತಪ್ಪು ಮಾಡುವುದು ಸಹಜ. ಆದರೆ, ಅ ತಪ್ಪನ್ನು ಮುಚ್ಚಿಕೊಂಡು ಬೇರೆಯವರ ಬಗ್ಗೆ ಬೆರಳು ತೋರಿಸಿ ಪಾರಾಗುವವನೇ ನಿಜವಾದ ರಾಜಕಾರಣಿ.