ವರ್ತಮಾನ
maapala@gmail.com
೨೦೧೩ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ತೊರೆದು ಬಿ.ಎಸ್.ಯಡಿ ಯೂರಪ್ಪ ಕೆಜೆಪಿ ಕಟ್ಟಿದ್ದು ಇದಕ್ಕೆ ಒಂದು ಕಾರಣವಾದರೆ, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸದನದಲ್ಲಿ ತೊಡೆತಟ್ಟಿ ಪಾದಯಾತ್ರೆ ನಡೆಸಿದ್ದು ಮತ್ತೊಂದು ಕಾರಣ. ಆ ವೇಳೆ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿ ಎಂಬ ಸಂಪ್ರದಾಯ ಇತ್ತು.
ಆದರೆ, ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಸೋಲು ಅನು ಭವಿಸಿದ ಕಾರಣ (ಅವರು ಮುಖ್ಯಮಂತ್ರಿಯಾಗ ಬಾರದು ಎಂಬ ಕಾರಣಕ್ಕೆ ಸೋಲಿಸಿದರು) ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರಿಗೆ ಯಾರೂ ಎದುರಾಡುವವರು ಇರಲಿಲ್ಲ. ಹೀಗಾಗಿ ಸಚಿವ ಸಂಪುಟ ರಚನೆ ಮಾಡಿದಾಗ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಡಲಾಗಿತ್ತು. ಒಂದಲ್ಲಾ ಒಂದು ದಿನ ಶಿವಕುಮಾರ್ ತಮಗೆ ಪ್ರಬಲ ಪ್ರತಿಸ್ಪಽಯಾಗುತ್ತಾರೆ ಎಂಬುದು ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಆಗಲೇ ಸ್ಪಷ್ಟವಾಗಿತ್ತು.
ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟಿದ್ದಕ್ಕೆ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಏನೂ ಹೇಳದೇ ಇದ್ದರೂ ಸಚಿವ ಸ್ಥಾನಕ್ಕಾಗಿ ಲಾಬಿ ಬಿಟ್ಟಿರಲಿಲ್ಲ. ಜತೆಗೆ ತಮ್ಮ ಸಂಘಟನಾ ಚಾತುರ್ಯವನ್ನೂ ಅಲ್ಪಾವಽಯಲ್ಲೇ ಸಾಬೀತುಪಡಿಸಿದರು. ಈ ಕಾರಣದಿಂದ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅನಿವಾರ್ಯ ಎಂಬುದನ್ನು ಗಮನಿಸಿದ ಹೈಕಮಾಂಡ್, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ನೋಡಿಕೊಂಡಿತಲ್ಲದೆ, ಇಂಧನದಂತಹ ಪ್ರಮುಖ ಖಾತೆಯನ್ನು ಕೊಡಿಸಿತ್ತು.
ನಂತರ ೨೦೧೮ರಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಡಿ.ಕೆ.ಶಿವಕುಮಾರ್ ಅಲ್ಲೂ ಸಚಿವರಾಗಿ ಕೆಲಸ ಮಾಡಿದರು. ಈ ವೇಳೆ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಸಿಗದೇ ಇದ್ದರೂ ಶಿವಕುಮಾರ್ ಮಾತು ನಡೆಯುತ್ತಿತ್ತು. ನಂತರ ಮೈತ್ರಿ ಸರಕಾರ ಉರುಳುವ ಪರಿಸ್ಥಿತಿ ಬಂದಾಗ ಉಳಿಸಿಕೊಳ್ಳಲು ಅವರು ಸಾಕಷ್ಟು ಪ್ರಯತ್ನ ನಡೆಸಿದರೂ ಅಂತಿಮವಾಗಿ ವಿಫಲವಾದರು. ಆ ಸಂದರ್ಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಸರಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈಜೋಡಿಸಲೇ ಇಲ್ಲ.
ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದರೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಆದ ಗೊಂದಲ, ತನಗೇ ಮುಖ್ಯಮಂತ್ರಿ ಪಟ್ಟ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿಯಲು ಕಾರಣವೇನು ಎಂಬುದಕ್ಕೆ ಮೇಲಿನ ಅಂಶಗಳೇ ಉತ್ತರ ಹೇಳುತ್ತವೆ. ಕಾಂಗ್ರೆಸ್ ರಾಜ್ಯದಲ್ಲಿ ಶಕ್ತಿಯುತವಾಗಿದ್ದರೂ ಉತ್ತರ ದ್ರುವ, ದಕ್ಷಿಣ ದ್ರುವ ಎಂಬಂತಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಂದಾಗಿ ಒಗ್ಗಟ್ಟು ಪ್ರದರ್ಶಿಸುವುದು ಕಷ್ಟವಾಗಿತ್ತು.
ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಆದರೆ. ಯಾವಾಗ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಯಾಗಿ ನೇಮಕಗೊಂಡರೋ, ಅವರು ಮಾಡಿದ ಮೊದಲ ಕೆಲಸ ಇವರಿಬ್ಬರ ಮಧ್ಯೆ ಬಲವಂತದ ಒಗ್ಗಟ್ಟು ಪ್ರದರ್ಶನ ಮಾಡಿಸಿದ್ದು. ಸುರ್ಜೇವಾಲ ಅವರ ಈ ಪ್ರಯತ್ನದಿಂದಾಗಿ ಇಬ್ಬರ ಮಧ್ಯೆ ಒಳಗೊಳಗೆ ಏನೇ ಭಿನ್ನಾಭಿಪ್ರಾಯವಿದ್ದರೂ ಬಹಿರಂಗವಾಗಿ ಅದನ್ನು ಹೊರಬರದಂತೆ ಅದುಮಿಟ್ಟುಕೊಳ್ಳುವಂತಾಯಿತು.
ಇದರ ಪರಿಣಾಮವೇ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸುಲಭವಾಗಿ ಬಹುಮತ ಗಳಿಸುವಂತಾಯಿತು. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅದುವರೆಗೆ ಅದುಮಿಟ್ಟುಕೊಂಡಿದ್ದ ಭಿನ್ನಾಭಿಪ್ರಾಯಗಳು ಫಲಿತಾಂಶದ ಬಳಿಕ ಬಹಿರಂಗವಾಯಿತು. ಮುಖ್ಯಮಂತ್ರಿ ಹುದ್ದೆಗಾಗಿ ಇಬ್ಬರೂ ಪೈಪೋಟಿ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ರಾಹುಲ್ ಗಾಂಧಿಯವರೇ ಪ್ರಯತ್ನಿಸಿದರೂ ಅವರನ್ನು ಸಮಾಧಾನಪಡಿಸಲು ಆಗಲಿಲ್ಲ.
ಸೋನಿಯಾ ಗಾಂಧಿ ವೀಡಿಯೋ ಕಾನರೆನ್ಸ್ ಮೂಲಕ ಖುದ್ದಾಗಿ ಡಿ.ಕೆ.ಶಿವಕುಮಾರ್ ಜತೆ ಮಾತನಾಡಿ ಮನವೊಲಿಸು ವವರೆಗೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಬಂಡೆ ಯಂತೆ ಪಟ್ಟುಹಿಡಿದು ಕುಳಿತಿದ್ದರು. ಇದಕ್ಕೆ ಕಾರಣ ತಿಳಿಯಬೇಕಾದರೆ ಮತ್ತೆ ೨೦೧೩ರಿಂದ ೨೦೧೯ರ ನಡುವೆ ಇವರಿಬ್ಬ ನಡುವೆ ಆದ ಬೆಳವಣಿಗೆಗಳನ್ನು ಮತ್ತೊಮ್ಮೆ ಅವಲೋಕಿಸಬೇಕು.
ಕೆಪಿಸಿಸಿ ಅಧ್ಯಕ್ಷರಾಗಿದ್ದರೂ, ಸಿದ್ದರಾಮಯ್ಯ ಅವರಷ್ಟೇ ಪ್ರಬಲವಾಗಿದ್ದರೂ ಸಿದ್ದರಾಮಯ್ಯ ಅವರಿದ್ದಾಗ ತಮಗೆ ಮುಖ್ಯ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬುದು ಡಿ.ಕೆ.ಶಿವಕುಮಾರ್ಗೆ ಗೊತ್ತಿಲ್ಲದೇ ಇದ್ದ ವಿಚಾರವೇನೂ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬುದು ಮೊದಲೇ ಸ್ಪಷ್ಟವಾಗಿತ್ತು ಕೂಡ . ಹೀಗಿದ್ದರೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗಾಗಿ ಕೊನೆಯವರೆಗೂ ಪಟ್ಟು ಹಿಡಿಯಲು ಮುಖ್ಯ ಕಾರಣ, ಸಿದ್ದರಾಮಯ್ಯ ಮೇಲಿನ ಅಪನಂಬಿಕೆ ಮತ್ತು ತಮ್ಮನ್ನು ಟೇಕನ್ ಫಾರ್ ಗ್ರಾಂಟೆಡ್ ಎಂದು ಪರಿಗಣಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ನ ಧೋರಣೆ. ಮಹಾರಾಷ್ಟ್ರದ ಕಾಂಗ್ರೆಸ್-ಎನ್ಸಿಪಿ ಸರಕಾರ ಉಳಿಸುವ ಮೂಲಕ ೨೦೦೨ರಲ್ಲೇ ಡಿ.ಕೆ.ಶಿವಕುಮಾರ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ದ್ದರೂ, ನಂತರದಲ್ಲಿ ಸಾಕಷ್ಟು ಬಾರಿ ಅವರು ಅದನ್ನು ಪುನರಾವರ್ತಿಸಿದರೂ ಡಿ.ಕೆ.ಶಿವಕುಮಾರ್ ಅವರ ಪಕ್ಷ ನಿಷ್ಠೆಯೇ ಅವರಿಗೆ ೨೦೧೩ರಲ್ಲಿ ಮುಳುವಾಯಿತು.
ಕಾಂಗ್ರೆಸ್ ಅಽಕಾರಕ್ಕೆ ಬಂದರೂ ಮಂತ್ರಿ ಸ್ಥಾನ ಕೂಡ ಸಿಗಲಿಲ್ಲ. ಬಳಿಕ ಒತ್ತಡ ಹೇರಿ ಮಂತ್ರಿಮಂಡಲ ಸೇರಿಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಅಷ್ಟೇ ಅಲ್ಲ, ಆಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ ಹೈಕಮಾಂಡ್ ಅವರನ್ನು ಬದಿಗೆ ಸರಿಸಿ ದಿನೇಶ್ ಗುಂಡೂರಾವ್ ಅವರನ್ನು ಆ ಸ್ಥಾನಕ್ಕೆ ನೇಮಿಸಿತ್ತು. ಪಕ್ಷದ ಮೇಲಿನ ನಿಷ್ಠೆಯಿಂದಾಗಿ ಅದನ್ನೂ ಡಿ.ಕೆ.ಶಿವ ಕುಮಾರ್ ನುಂಗಿಕೊಂಡು ಕೆಲಸ ಮಾಡಿದರು. ಮತ್ತೊಂದೆಡೆ ಕಾಂಗ್ರೆಸ್ಗೆ ಸಂಕಷ್ಟ ಬಂದಾಗಲೆಲ್ಲಾ ಡಿ.ಕೆ.ಶಿವಕುಮಾರ್ ಮಧ್ಯೆಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಿದ್ದರು.
ಪಕ್ಷದ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದರು. ೨೦೧೯ ರಲ್ಲಿ ಮೈತ್ರಿ ಸರಕಾರ ಉರುಳಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋತ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್, ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಕೈಚೆಲ್ಲಿ ಕುಳಿತಾಗ ಸೋನಿಯಾ ಗಾಂಽ ಅವರ ಮಾತಿಗೆ ಒಪ್ಪಿ ಕೆಪಿಸಿಸಿ ಅಧ್ಯಕ್ಷ ರಾಗಿ ಶಿವಕುಮಾರ್ ಪದಗ್ರಹಣ ಮಾಡಿದ್ದರು.
ಪ್ರಸ್ತುತ ಕಾಂಗ್ರೆಸ್ ಗೆಲ್ಲುವಿನಲ್ಲಿ ಸಿದ್ದರಾಮಯ್ಯ ಅವರಷ್ಟೇ ಪಾತ್ರ ಡಿ.ಕೆ.ಶಿವಕುಮಾರ್ ಅವರದ್ದೂ ಇದೆ. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ತಾವು ಸುಮ್ಮನೆ ಕುಳಿತರೆ ೨೦೧೩ರಲ್ಲಿ ಆದ ಪರಿಸ್ಥಿತಿಯೇ ಮತ್ತೆ ಬರುತ್ತದೆ ಎಂಬುದು ಡಿ.ಕೆ.ಶಿವಕುಮಾರ್ಗೆ ಗೊತ್ತಿತ್ತು. ಸಿದ್ದರಾಮಯ್ಯ ಅವರಿಗೆ ತಮಗಿಂತ ಹೆಚ್ಚು ಶಾಸಕರ ಬೆಂಬಲ ವಿರುವುದು, ಹೈಕಮಾಂಡ್ ಕೂಡ ಅವರ ಪರವಾಗಿಯೇ ಇರುವುದೂ ತಿಳಿದಿತ್ತು. ಹೀಗಾಗಿ ಸಿದ್ದರಾಮಯ್ಯ ಅವರನ್ನು ಸುಲಭವಾಗಿ ಒಪ್ಪಿಕೊಂಡರೆ ಮತ್ತೆ ತಾನು ಬದಿಗೆ ಸರಿಯಬೇಕಾಗುತ್ತದೆ.
ಹೈಕಮಾಂಡ್ ಕೂಡ ತನ್ನನ್ನು ಟೇಕನ್ ಫಾರ್ ಗ್ರಾಂಟೆಡ್ ಆಗಿಯೇ ಪರಿಗಣಿಸುತ್ತದೆ ಎಂಬುದು ಮನದಟ್ಟಾಗಿತ್ತು. ಹೀಗಾಗಿ ತಮ್ಮನ್ನು ನಿರ್ಲಕ್ಷಿಸುತ್ತಿರುವ ಸಿದ್ದರಾಮಯ್ಯ ಅವರ ಜತೆಗೆ ಹೈಕಮಾಂಡ್ಗೂ ಬಿಸಿ ಮುಟ್ಟಿಸಬೇಕು ಎಂದು ನಿರ್ಧರಿಸಿದ್ದರು. ಆ ಕಾರಣಕ್ಕಾಗಿಯೇ ಕೊನೆಯ ಕ್ಷಣದವರೆಗೆ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದರು. ಖರ್ಗೆ, ರಾಹುಲ್ ಸೇರಿದಂತೆ ಎಲ್ಲಾ ನಾಯಕರು ಸಮಾಧಾನಪಡಿಸಲು ಯತ್ನಿಸಿದರಾದರೂ, ಸೂಕ್ತ ಸ್ಥಾನಮಾನದ ಭರವಸೆ ನೀಡಿದರಾದರೂ ಒಪ್ಪಿಕೊಳ್ಳಲಿಲ್ಲ.
ಏಕೆಂದರೆ, ಸುಲಭವಾಗಿ ಒಪ್ಪಿಕೊಂಡರೆ ಹೈಕಮಾಂಡ್ ಹೇಳಿದ ಕೂಡಲೇ ಡಿ.ಕೆ.ಶಿವಕುಮಾರ್ ಸುಮ್ಮನಾಗುತ್ತಾರೆ. ಹೀಗಾಗಿ
ಮುಂದೆ ಅವರಿಂದ ಏನಾದರೂ ಸಮಸ್ಯೆ ಬಂದರೆ ಹೈಕಮಾಂಡ್ ಕಡೆಯಿಂದ ಸೂಚನೆ ಕೊಡಿಸಿ ಸುಮ್ಮನಾಗಬಹುದು
ಎಂದು ಸಿದ್ದರಾಮಯ್ಯ ಆದಿಯಾಗಿ ರಾಜ್ಯ ಕಾಂಗ್ರೆಸ್ಸಿಗರೂ ನಿರ್ಧಾರಕ್ಕೆ ಬರುತ್ತಾರೆ. ತಮಗೆ ಕಿಮ್ಮತ್ತು ಸಿಗುವುದಿಲ್ಲ. ಸೋನಿಯಾ ಗಾಂಧಿ ನೇರವಾಗಿ ಮಧ್ಯೆ ಪ್ರವೇಶಿಸಿದರೆ ಮಾತ್ರ ತಮಗೆ ರಾಜಕೀಯವಾಗಿ ಲಾಭವಾಗಬಹುದು ಎಂಬುದು
ಅವರಿಗೆ ಅರ್ಥವಾಗಿತ್ತು. ಕೊನೆಗೆ ಸೋನಿಯಾ ಮಾತಿಗೆ ಮಣಿದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಪಟ್ಟು
ಸಡಿಲಿಸಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
ಈ ಸಂದರ್ಭದಲ್ಲೂ ಅವರು ಷರತ್ತಿನ ಒಪ್ಪಿಗೆ ನೀಡುವ ಮೂಲಕ ತಮ್ಮನ್ನು ಇನ್ನುಮುಂದೆ ಟೇಕನ್ ಫಾರ್ ಗ್ರಾಂಟೆಡ್ ಎಂದಷ್ಟೇ ಪರಿಗಣಿಸುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ಅವರು ಹೈಕಮಾಂಡ್ಗೆ ನೀಡಿದರು. ಅಷ್ಟರ ಮಟ್ಟಿಗೆ
ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ತಾನು ಅನಿವಾರ್ಯ ಎಂಬುದನ್ನು ಸಾಬೀತುಪಡಿಸಿದರು.
ಲಾಸ್ಟ್ ಸಿಪ್: ದೊಡ್ಡವರು ಹೇಳಿದ್ದಕ್ಕೆಲ್ಲಾ ಗೋಣಾಡಿಸಿ ಕೈ ಖಾಲಿ ಮಾಡಿಕೊಳ್ಳುವ ಬದಲು ಸಿಗುವುದಿಲ್ಲ ಎಂದು ಗೊತ್ತಿದ್ದರೂ ಅದಕ್ಕಾಗಿ ಪಟ್ಟು ಹಿಡಿದರೆ ಸ್ವಲ್ಪವಾದರೂ ಲಾಭವಾಗುತ್ತದೆ.