Thursday, 15th May 2025

ಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 20 ಕೋಟಿ ರೂ. ಬಿಡುಗಡೆ

ಚಂಡೀಗಢ: ಪಂಜಾಬ್ ಗಡಿ ಗ್ರಾಮಗಳಲ್ಲಿ ಹೆಗ್ಗಿಲ್ಲದೆ ನಡೆಯುತ್ತಿರುವ ಡ್ರೋಣ್ ಹಾಗೂ ಕಳ್ಳಸಾಗಾಣಿಕೆದಾರರ ಚಲನವಲನ ಗಳ ಮೇಲೆ ಹದ್ದಿನ ಕಣ್ಣಿಡುವ ಉದ್ಧೇಶದಿಂದ ಗಡಿಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಲು ಭಗವಂತ್ ಮಾನ್ ನೇತೃತ್ವದ ಸರ್ಕಾರ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಡ್ರೋನ್‍ಗಳು ಮತ್ತು ಕಳ್ಳಸಾಗಣೆದಾರರ ಚಲನವಲನದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಗಡಿ ಗ್ರಾಮಗಳ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ 20 ಕೋಟಿ ಮಂಜೂರು ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ ಅವರು, ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಶಸ್ತ್ರಾಸ್ತ್ರಗಳು ಅಥವಾ ಮಾದಕ ದ್ರವ್ಯಗಳ ಪತ್ತೆಗೆ ಕಾರಣವಾಗುವ ಡ್ರೋನ್ ಚಲನೆಯ ಬಗ್ಗೆ ಮಾಹಿತಿ ನೀಡಿದ ವರಿಗೆ 1 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ ಎಂದು ಹೇಳಿದರು.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಂಜಾಬ್ ಪೊಲೀಸ್‍ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಕಳ್ಳಸಾಗಣೆ ತಡೆಯಲು ಗಡಿ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಲಾಗಿದೆ.