Tuesday, 13th May 2025

ನೋಟು ರಹಿತ ಮತದಾನದ ಜಾಗೃತಿ ಮೂಡಲಿ

ಅಭಿಮತ

ರಮಾನಂದ ಶರ್ಮಾ

ನೋಟಿಗಾಗಿ ವೋಟನ್ನು ಮಾರಿದರೆ ಪ್ರಜಾಪ್ರಭುತ್ವ ಉಳಿಯಬಹುದೇ ಎನ್ನುವ ವಿಚಾರ ಚುನಾವಣಾ ಸಮಯದಲ್ಲಿ ಮೇಲ್ಮೆಗೆ ಬಂದು ಸಾಕಷ್ಟು ಚರ್ಚೆಯಾಗಿ, ಇನ್ನೊಂದು ಚುನಾವಣೆ ಬರುವವರೆಗೂ ಇರುತ್ತದೆ. ವಾಸ್ತವದಲ್ಲಿ ಇದು ಅರ್ಥವನ್ನು ಕಳೆದು ಕೊಂಡಿರುವುದು ಈಗ ಇತಿಹಾಸ. ಅದು ದಿಗ್ಭ್ರಮೆ ಮತ್ತು ಹತಾಶೆಯನ್ನುಉಂಟು ಮಾಡುವ ಬೆಳವಣಿಗೆ ಆಗಿಯೂ ಉಳಿದಿಲ್ಲ.

ಸ್ವಾತಂತ್ರ್ಯಾ ನಂತದ ಒಂದೆರಡು ಚುನಾವಣೆಗಳಲ್ಲಿ ಇದು ಇದ್ದಿರಲಿಲ್ಲ. ಜನರು ತಾವೇ ಸ್ವಪ್ರೇರಣೆಯಿಂದ ಮತ ಗಟ್ಟೆಗೆ ಬಂದು ವೋಟ್ ಹಾಕುತ್ತಿದ್ದರು. ಮತಗಟ್ಟೆಗಳು ದೂರ ಇದೆಯೆಂದೋ, ಮತದಾರರಿಗೆ ಅಷ್ಟು ದೂರವನ್ನು ಕಾಲು ನಡಿಗೆಯಲ್ಲಿ ಕ್ರಮಿಸಲು ಸಾಧ್ಯವಿಲ್ಲ ಎಂದೋ, ಮತ ದಾರರನ್ನು ಹೆಚ್ಚು ಪ್ರಮಾಣದಲ್ಲಿ ಮತಗಟ್ಟೆಗೆ ಕರೆತರುವ ಉದ್ದೇಶದಿಂದಲೋ ಕ್ರಮೇಣ ಮತದಾರರನ್ನು ಪಕ್ಷಗಳು ಮತ್ತು ಅಭ್ಯರ್ಥಿಗಳು ವಾಹನ ಗಳಲ್ಲಿ ಮತಗಟ್ಟೆಯ ಬಳಿ ಕರೆತಂದು ‘ತಮ್ಮವರಿಗೆ’ ವೋಟನ್ನು ಹಾಕಿಸುವ ಪ್ರಕ್ರಿಯೆ ಆರಂಭವಾಯಿತು.

ಇದನ್ನು ಆ ಕಾಲದಲ್ಲಿ ಮಹಾ ಚುನಾವಣಾ ಭ್ರಷ್ಟಾಚಾರ ಎಂದು ಭಾರೀ ಕೋಲಾಹಲ  ವನ್ನೇ ಎಬ್ಬಿಸಲಾಗಿತ್ತು. ಹಾಗೆ ಬಂದವರಿಗೆ ಒಂದು ಕಪ್ ಚಹಾ- ಕಾಫಿ ಅಥವಾ ತಂಪು ಪಾನೀಯ ನೀಡತೊಡಗಿದರು. ಇದು ಕ್ರಮೇಣ ತಿಂಡಿ ಮತ್ತು ಊಟಕ್ಕೆ ವಿಸ್ತರಿಸಿತು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯಲ್ಲಿ ಸಾರಾಯಿಯೂ ನುಸುಳಿಕೊಂಡಿತು. ಇಂಥ ವ್ಯವಸ್ಥೆಯಲ್ಲಿ ಹೊಸ ಆಯಾಮಗಳು ಸೇರ್ಪಡೆಯಾಗುತ್ತವೆ ವಿನಾ ಕಡಿಮೆ ಯಾಗುವುದಿಲ್ಲ. ಇದು ಕಾಲಘಟ್ಟದಲ್ಲಿ ಹೀಗೆ ಬಂದವರಿಗೆ ಸಣ್ಣ ಭಕ್ಷೀಸು ನೀಡುವ ಹಂತಕ್ಕೆ ತಿರುಗಿತು. ಈ ಭಕ್ಷೀಸು ಕಾಲ ಕ್ರಮೇಣ ಉಚಿತ ಕಾಣಿಕೆ ಮತ್ತು ‘ನೋಟಿಗಾಗಿ ವೋಟು’ ಆಗಿ ಉನ್ನತೀಕರಣಗೊಂಡಿತು.

ನೋಟಿಗಾಗಿ ವೋಟು ದಿಢೀರ ಎಂದು ಆರಂಭವಾಗದೇ ಅದರ ಹಿಂದೆ ಈ ರೀತಿ ಪ್ರಕ್ರಿಯೆಗಳು ಇರುವುದು ಬಹುಜನರಿಗೆ ತಿಳಿಯದು. ತಮ್ಮ ದೊಡ್ಡಸ್ತನವನ್ನು ತೋರಿಸಲು ಉಳ್ಳವರು ಹೋಟೆಲ್‌ಗಳಲ್ಲಿ ಸರ್ವರ್‌ಗಳಿಗೆ ಸಣ್ಣ ಸಣ್ಣ ಚಿಲ್ಲರೆಯನ್ನು ನೀಡುವುದು ಈಗ ಇತಿಹಾಸ. ದೊಡ್ಡವರ ಈ ಶೋ ಆಫ್ ಇತ್ತೀಚೆಗೆ ಅಗೋಚರವಾಗಿ ಕಡ್ಡಾಯವಾಗು ತ್ತಿದ್ದು ಮಧ್ಯಮ ವರ್ಗ ದವರ ಪರ್ಸ್‌ಗೆ ಹಿಂಸೆ ನೀಡುತ್ತಿದೆ.

ಹಾಗೆ ಕೊಡದಿದ್ದವನನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ಅದೇ ರೀತಿ ‘ನೋಟಿಗಾಗಿ ವೋಟು’ ಕೂಡ ಅನಿವಾರ್ಯ ವ್ಯವಸ್ಥೆಯಾಗುತ್ತಿದೆ. ಆರಂಭದ ದಿನಗಳಲ್ಲಿ ಮತದಾನವನ್ನು ಪ್ರತಿಯೊಬ್ಬ ಮತದಾರರೂ ತಮ್ಮ ಪವಿತ್ರ ಕರ್ತವ್ಯಎಂದು ತಿಳಿಯುತ್ತಿದ್ದರು. ಪಂಚಾಯತ, ಜಿಲ್ಲಾ, ವಿಧಾನಸಭೆ ಅಥವಾ ಸಂಸತ್ತಿಗೆ, ಹೀಗೆ ಚುನಾವಣೆ ಯಾವುದೇ ಇರಲಿ ತಪ್ಪದೇ
ಮತದಾನ ಮಾಡಿ ಒಂದು ಜನಪ್ರಿಯ, ಭ್ರ ಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು  ಮತ್ತು ಇದರಲ್ಲಿ ಏನೋ ಸಾರ್ಥಕತೆಯನ್ನು ಕಾಣುತ್ತಿದ್ದರು. ಆದರೆ, ದಿನಗಳು ಕಳೆದಂತೆ ತಮ್ಮ ಆಶಯ ಈಡೇರದಿರಲು ಮತದಾನದ ಪ್ರಕ್ರಿಯೆಯಿಂದ ಸಾವಕಾಶವಾಗಿ ವಿಮುಖ ರಾಗತೊಡಗಿದರು. ಮತದಾರರನ್ನು ಮತಗಟ್ಟೆಗೆ ಸೆಳೆಯಲು ಏನಾ ದರೂ ಆಮಿಷ ನೀಡುವ ಅನಿವಾರ್ಯತೆ ಸೃಷ್ಟಿಯಾಯಿತು.

ಯಾರು ಆಯ್ಕೆಯಾದರೆ ಏನು, ನಮಗೆ ರಾಗಿ ಬೀಸುವುದು ತಪ್ಪದು ಎನ್ನುವ ಹಳೆಯ ಮಾತು ದೊಡ್ಡ ಪ್ರಮಾಣದಲ್ಲಿ ಅನಾವರಣವಾಗುತ್ತಿರಲು, ಅಭ್ಯರ್ಥಿಗಳು ನೋಟಿನ ಆಮಿಷವನ್ನು ದೊಡ್ಡ ಪ್ರಮಾಣ ದಲ್ಲಿ ನೀಡತೊಡಗಿದರು. ಮತದಾನ ಕರ್ತವ್ಯವಾಗದೇ ಸೇವೆಯಾಗಿ, ಆ ಸೇವೆಯನ್ನು ಪಡೆಯಲು ಅಭ್ಯರ್ಥಿಗಳು ಮಾರುಕಟ್ಟೆಯಲ್ಲಿ ಹಣಕೊಟ್ಟು ಸಾಮಾನುಗಳನ್ನು ಖರೀದಿಸಿದಂತೆ, ಮತದಾರಿಗೆ ನೋಟು ನೀಡಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು.

ಇದರಲ್ಲಿ ಮತದಾರರು ತಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಿಕೊಳ್ಳುತ್ತಾರೆ. ಹಣ ಪಡೆದು ವೋಟ್ ನೀಡುವುದನ್ನು ತಪ್ಪು ಎನ್ನಲಾಗದು. ಇದನ್ನು ಹಣಕೊಟ್ಟು ಖರೀದಿಸುತ್ತಾರೆ ಎನ್ನಬಹುದೇನೋ? ವೈಷಿಷ್ಟ್ಯವೆಂದರೆ, ಇಲ್ಲಿ ನೋಟಿಗಾಗಿ ಬೇಡಿಕೆ ಇರುವುದಿಲ್ಲ. ಇದು ಬಹುತೇಕ ಸಂದರ್ಭಗಳಲ್ಲಿ ತಾನಾಗಿಯೇ ಬಂದು ಬೀಳುತ್ತದೆ. ಇಲ್ಲಿ ನೋಟನ್ನು ನೀಡಿ ಮತದಾರರನ್ನು ಒಂದು ರೀತಿಯ ‘ಭಿಡೆ’ಯಲ್ಲಿ ಸಿಲುಕಿಸುತ್ತಾರೆ. ಡಿಮಾಂಡ್ ಮಾಡಿಯೋ ಅಥವಾ ಮಾಡದೆಯೋ ನೋಟು ಪಡೆದವರು ನೈತಿಕ
ಅಥವಾ ಹಂಗಿನ ಬಂಧನದ-ಇಕ್ಕಟ್ಟಿಗೆ ಒಳಗಾಗಿ ಕೈಕಟ್ಟಿಸಿಕೊಳ್ಳುತ್ತಾರೆ. ನೋಟು ಪಡೆದೇ ವೋಟು ನೀಡುವವರು ಇಲ್ಲದಿಲ್ಲ. ಇವರ ಸಂಖ್ಯೆ ಗಮನಾರ್ಹವಾಗಿ ಇಲ್ಲದಿರಬಹುದು. ಹಾಗೆಯೇ ನೋಟು ಪಡೆದವರೆಲ್ಲ ನೋಟು ನೀಡಿದವರಿಗೇ ವೋಟು ನೀಡುತ್ತಾರೆ ಎನ್ನಲಾಗದು. ಇದು ತನ್ನ ವಿವೇಚನೆಗೆ ಅಥವಾ ಮರ್ಜಿಗೆ ಬಿಟ್ಟದ್ದು ಎನ್ನುವ ತರ್ಕಕ್ಕೆ ಜೋತು ಬೀಳುವ ಪ್ರಮೇಯ ಗಳು ಇರುತ್ತವೆ.

ಇದು ಒಂದು ರೀತಿಯಲ್ಲಿ ಚುನಾವಣಾ ಪ್ರಚಾರ ಸಭೆಗೆ ಸೇರಿದ ಜನದಟ್ಟನೆಯಂತೆ. ತಮ್ಮ ಸಭೆಗೆ ಸೇರುತ್ತಿದ್ದ ಅಪಾರ ಜನಸಂದಣಿ ಯನ್ನು ನೋಡಿದ ಅಟಲ ಬಿಹಾರಿ ವಾಜಪೇಯಿಯವರ ‘ಇಲ್ಲಿ ಬರುವಂಥ ಜನರಲ್ಲಿ ಕನಿಷ್ಠ ೫೦% ಜನರಾದರೂ ನನಗೆ ಮತ ಹಾಕಿದ್ದರೆ, ನಾನು ದಶಕಗಳ ಹಿಂದ ಈ ದೇಶದ ಪ್ರಧಾನಿಯಾಗಿರುತ್ತಿದ್ದೆ.’ ಈ ಮಾತು ‘ನೋಟಿಗಾಗಿ ವೋಟು’ಗೆ ಕೂಡ ಅನ್ವಯ ವಾಗಬಹುದು. ಭಾರತವು ಒಂದು ಪವಿತ್ರ ಸಂಸ್ಕೃತಿ ಆಧಾರಿತ ದೇಶವಾಗಿರುವುದರಿಂದ, ಹಣ ಪಡೆದ ಮೇಲೆ ಅದರ ಹಿಂದಿನ ಉದ್ದೇಶಕ್ಕೆ ಚ್ಯುತಿ ಮಾಡದಿರುವ ಮನೋಸ್ಥಿತಿಯಲ್ಲಿರುವುದರಿಂದ ಫಲಾನುಭವಿಗಳು ಮೋಸ ಮಾಡುವುದಿಲ್ಲ ಎನ್ನುವ ದೃಢ ವಿಶ್ವಾಸವನ್ನು ಅಭ್ಯರ್ಥಿಗಳು ಹೊಂದಿರುತ್ತಾರೆ.

ಯಾವುದೇ ಒಂದು ಸೌಲಭ್ಯವನ್ನು, ಅದರಲ್ಲೂ ಮುಖ್ಯವಾಗಿ ಉಚಿತ ಸೌಲಭ್ಯವನ್ನು ಒಮ್ಮೆ ನೀಡಿ, ನಂತರದ ದಿನಗಳಲ್ಲಿ ಯಾವು ದಾದರೂ ಕಾರಣವನ್ನು ಮುಂದೆ ಮಾಡಿ ನಿಲ್ಲಿಸಲು ನಮ್ಮ ಇಂದಿನ ಸಮಾಜ ವ್ಯವಸ್ಥೆಯಲ್ಲಿ ಮತ್ತು ಜನರ ಮನೋ ಸ್ಥಿತಿಯಲ್ಲಿ ಸಾಧ್ಯವಿಲ್ಲ. ನೋಟಿಗಾಗಿ ವೋಟು, ಅದು ಸರಿ ಅಥವಾ ತಪ್ಪು ಎನ್ನುವುದು ಬೇರೆ ಮಾತು. ಇದನ್ನುನಿಲ್ಲಿಸಲು ಸಾಧ್ಯವಿಲ್ಲ. ಮತದಾರರಲ್ಲಿ ಒಂದಿಷ್ಟು ಜನರು ‘ನೋಟಿಗಾಗಿ ವೋಟು’ಗೆ ಅಡಿಕ್ಟ್ ಆಗಿದ್ದು, ಅದನ್ನು ತಪ್ಪಿಸುವುದು ಅಸಾಧ್ಯ. ಅವರು ಈ ವ್ಯವಸ್ಥೆಗೆ ಹೊಂದಿ ಕೊಂಡಿದ್ದು, ಅದರಿಂದ ಹೊರಬರಲು ಕಷ್ಟ ಪಡುತ್ತಾರೆ, ಅಂತೆಯೇ ಅದನ್ನು ವಿರೋಧಿಸುತ್ತಾರೆ
ಕೂಡ.

ಇದು ಒಂದು ರೀತಿಯಲ್ಲಿ ಒಂದು ರೈಲಿಗೆ ಒಂದು ಊರಿನಲ್ಲಿ ನಿಲುಗಡೆ ನೀಡಿ, ಕೆಲವು ದಿನಗಳ ನಂತರ ಆ ನಿಲುಗಡೆಯನ್ನು ರದ್ದು ಪಡಿಸುವ ಪ್ರಯತ್ನದಂತೆ. ಇದನ್ನು ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಇದು ಲಂಚದಂತೆ ರಸೀತಿ ಇಲ್ಲದ ವ್ಯವಹಾರವಾಗಿದ್ದು ನ್ಯಾಯಾಲಯಗಲ್ಲಿ ದೃಢೀಕರಿಸುವುದು ಕಷ್ಟ. ದಾಖಲೆ ಪುರಾವೆಗಳಿದ್ದ ಪ್ರಕರಣಗಳೇ ನ್ಯಾಯಾಲಯದಲ್ಲಿ ಬಿದ್ದು ಹೋಗುವ ಪ್ರಮೇಯಗಳು ಇರುವಾಗ, ಹಿಂದಿನ ಬಾಗಿಲಗಳ ಮೂಲಕ, ಕದ್ದು ಮುಚ್ಚಿ ನಡೆಯುವ ಈ ವ್ಯವಹಾರವನ್ನು
ನಿಲ್ಲಿಸಲಾದೀತೇ? ಇಂದು ರಾಜಕಾರಣಿಗಳ ಬಗೆಗೆ ಒಳ್ಳೆಯ ಮಾತುಗಳು ಕೇಳುವುದು ಕಡಿಮೆ. ಜನರು ಎಲ್ಲಾ ರಾಜಕಾರಣಿಗಳನ್ನು
ಒಂದೇ ತಕ್ಕಡಿಯಲ್ಲಿ ತೂಗುತ್ತಾರೆ.

ತಮ್ಮ ಸ್ಥಾನವನ್ನು ಸಮಾಜ ಹಿತಕ್ಕಿಂತ ಸ್ವಹಿತಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದು ಸಮಾಜದಲ್ಲಿ ಕೇಳಿ ಬರುವ ಸಾಮಾನ್ಯ ಟೀಕೆ. ಅದರಲ್ಲೂ ೪೦% ಕಮೀಷನ್ ಹಗರಣದ ನಂತರ ಪ್ರತಿಯೊಬ್ಬ ರಾಜಕಾರಣಿಯನ್ನು ನೋಡುವ ದೃಷ್ಟಿ ಬದಲಾಗಿದೆ. ಜನಸಾಮಾನ್ಯರು ರಾಜಕಾರಣಿಗಳನ್ನು ಉದ್ದೇಶಿಸಿ , ‘ಈ ನನ್ಮಕ್ಕಳು ಒಮ್ಮೆ ಆರಿಸಿ ಬಂದರೆ ಕೋಟ್ಯಂತರ ಮಾಡ್ಕೋತಾರೆ, ಸ್ವಲ್ಪ ನಮಗೂ ಅದರಿಂದ ಉದುರಿಸಲಿ’ ಎನ್ನುವ ಮಾತು ಕೇಳಿ ಬರುತ್ತದೆ. ಅವರ ಮಾತಿನ ಸತ್ಯಾಸತ್ಯತೆ ಬೇರೆ ಮಾತು. ಆದರೆ, ಅವರು ಸಮಾಜ ಸೇವೆ ಮಾಡುವುದು ಅಷ್ಟರಲ್ಲೇ ಇರುತ್ತದೆ. ಅವರೇನು ತಮ್ಮ ಬೆವರು ಸುರಿಸಿ ಗಳಿಸಿದ ಹಣವನ್ನೇನೂ ನೀಡುತ್ತಿಲ್ಲ ಎಂದು ಹೀನಾಯವಾಗಿ ಛೇಡಿಸುತ್ತಾರೆ.

ಈ ಭ್ರಷ್ಟಾಚಾರದಲ್ಲಿ, ರಾಜಕಾರಣಿಗಳು ಮತ್ತು ಮತದಾರರು ಇಬ್ಬರೂ ಸಮಪಾಲುದಾರರು. ಅಲ್ಲಲ್ಲಿ ತೂಕದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು.ಇದನ್ನು ಜಾಯಿಂಟ್ ಆಪರೇಷನ್ ಎನ್ನಬಹುದು. ಕೊಡುವರು ಇರುವವರೆಗೆ ತೆಗೆದುಕೊಳ್ಳುವರು ಇರುತ್ತಾರೆ. ತೆಗದುಕೊಳ್ಳುವವರು ಇರುವವರೆಗೆ ತಮ್ಮ ಲಾಭಕ್ಕೆ ಕೊಡುವವರು ಇರುತ್ತಾರೆ. ಯಾರನ್ನೂ, ಮುಖ್ಯವಾಗಿ ರಾಜಕಾರಣಿಗಳನ್ನು ದೂಷಿಸಲಾಗದು. ತಮ್ಮ ಗುರಿ ಸಾಧನೆಗೆ ಯಾವುದೇ ಮಾರ್ಗವನ್ನು ತುಳಿಯುತ್ತಾರೆ. ಯುದ್ಧದಲ್ಲಿ ಮತ್ತು ಪ್ರೇಮದಲ್ಲಿ ಯಾವುದೂ ತಪ್ಪಿಲ್ಲ ಎನ್ನುವಂತೆ, ಚುನಾವಣೆ ಗೆಲ್ಲುವ ತಂತ್ರಗಾರಿಕೆಯಲ್ಲೂ ಯಾವುದು ತಪ್ಪಿಲ್ಲ ಎನ್ನುವುದು
ಲಾಗಾಯ್ತನಿಂದ ರಾಜಕಾರಣಿಗಳು ಅಳವಡಿಸಿಕೊಂಡಿರುವ ಸೂತ್ರವಾಗಿದ್ದು, ನೋಟು ನೀಡಿ ವೋಟು ಪಡೆಯುವುದರಲ್ಲಿ ಅಪರಾಧ ಕಾಣವುದಿಲ್ಲ.

ಏಕಲವ್ಯನಿಗೆ ಪಕ್ಷಿಯ ಕಣ್ಣು ಮಾತ್ರ ಕಾಣುತ್ತಿದ್ದು ಉಳಿದೆಲ್ಲವೂ ಗೌಣ ಎನ್ನುವಂತೆ, ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಗೆಲುವು ಒಂದೇ ಕಾಣುತ್ತಿದ್ದು, ಅದು ಹೇಗೆ ಬರುತ್ತದೆ ಎನ್ನುವುದು ಅವರಿಗೆ ಮುಖ್ಯವಲ್ಲ. ಅಂತೆಯೇ ಈ ನಿಟ್ಟಿನಲ್ಲಿ ಮತದಾರರ
ಹೊಣೆಗಾರಿಕೆ ಮತ್ತು ಜವಾಬ್ದಾರಿ ಹೆಚ್ಚು ಇರುತ್ತದೆ. ಹಣ ಪಡೆದು ವೋಟ್ ಮಾಡಿದವರು ತಮ್ಮ ಜನಪ್ರತಿನಿಧಿಯೊಂದಿಗೆ ಅಭಿವೃದ್ಧಿಗಾಗಿ ಮತ್ತು ಸಾಧನೆಗಾಗಿ ಹಕ್ಕೊತ್ತಾಯ ಮಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ, ಅಭಿವೃದ್ಧಿಯನ್ನು ಮರೆಯಬೇಕಾಗುತ್ತದೆ. ಇದನ್ನು ಕೇವಲ ಜನ ಜಾಗೃತಿಯಿಂದ ತಡೆಯಲು ಮಾತ್ರ ಸಾಧ್ಯ.