Sunday, 11th May 2025

ವಿಷಾನಿಲದಿಂದ ಯುವಕರ ಸಾವು

ಪಾಲಿ: ರಾಜಸ್ಥಾನದ ಪಾಲಿಯಲ್ಲಿ ಮದುವೆ ಹಾಲ್​ವೊಂದರ ಒಳಚರಂಡಿ ಚೇಂಬರ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಯುವಕರು ಮೃತಪಟ್ಟಿದ್ದಾರೆ.

ಸ್ವಚ್ಛ ಮಾಡುತ್ತಿದ್ದ ವೇಳೆ ವಿಷಾನಿಲದಿಂದ ಯುವಕರು ಮೃತಪಟ್ಟಿದ್ದಾರೆ ಎಂದು ಪೊಲೀಸ​ರು ತಿಳಿಸಿದ್ದಾರೆ.

ಪಾಲಿ ನಗರದ ಸೆಂಚುರಿಯನ್ ಮ್ಯಾರೇಜ್ ಗಾರ್ಡನ್‌ನಲ್ಲಿ ತ್ಯಾಜ್ಯ ಸುರಿಯಲು ಬಸ್ ನಿಲ್ದಾಣದ ಬಳಿ ಒಳಚರಂಡಿ ಚೇಂಬರ್ (ತೊಟ್ಟಿ) ನಿರ್ಮಿಸಲಾಗಿದೆ. ಅದು ಭರ್ತಿ ಯಾಗಿದ್ದು ಶುಕ್ರವಾರ ರಾತ್ರಿ ಮದುವೆ ಹಾಲ್ ನಿರ್ವಾಹಕರು ಸುರಕ್ಷತಾ ಪರಿಕರಗಳಿಲ್ಲದೆ ನಾಲ್ವರು ಕಾರ್ಮಿಕರನ್ನು ಕರೆಯಿಸಿಕೊಂಡು ಸ್ವಚ್ಛ ಮಾಡಲು ತಿಳಿಸಿದ್ದಾರೆ ಎನ್ನಲಾಗಿದೆ.

ಕಾರ್ಮಿಕರು ತೊಟ್ಟಿಗೆ ಇಳಿದು ಸ್ಚಚ್ಛತೆಗೆ ಇಳಿದಾಗ ಒಳಚರಂಡಿ ಚೇಂಬರ್‌ನಲ್ಲಿ ತ್ಯಾಜ್ಯ ದಿಂದ ಉತ್ಪತ್ತಿಯಾದ ವಿಷಕಾರಿ ಅನಿಲದಿಂದ ದುರಂತ ಸಂಭವಿಸಿದೆ. ಉಸಿರಾಟದ ತೊಂದರೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಸಿಒ ಸಿಟಿ ಅನಿಲ್ ಸರಣ್, ಕೊತ್ವಾಲ್ ರವೀಂದ್ರ ಸಿಂಗ್, ಕೈಗಾರಿಕಾ ಠಾಣೆ ಪ್ರಭಾರಿ ಹಿಂಗ್ಲಾಜ್ ದಾನ್ ಚರಣ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ತಜ್ಞರ ನೆರವಿನೊಂದಿಗೆ ಪೊಲೀಸರು ಮೂವರ ಮೃತದೇಹಗಳನ್ನು ಹೊರತೆಗೆದು ಬಂಗಾರ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.