Wednesday, 14th May 2025

ರಸ್ತೆ ವಿಭಜಕಕ್ಕೆ ಆಟೋ ರಿಕ್ಷಾ ಡಿಕ್ಕಿ: ಬೆಂಕಿ ಹೊತ್ತಿ ಮಹಿಳೆ ಸಜೀವ ದಹನ

ಥಾಣೆ: ಥಾಣೆ ನಗರದಲ್ಲಿ ರಸ್ತೆ ವಿಭಜಕಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆ ಸಜೀವ ದಹನಗೊಂಡಿದ್ದಾರೆ.

ಘೋಡ್‍ಬಂದರ್ ರಸ್ತೆಯ ಗೈಮುಖ್ ಪ್ರದೇಶದಲ್ಲಿ ದುರ್ಘಟನೆ ನಡೆದಿದ್ದು, ಆಟೋ ಚಾಲಕನಿಗೂ ತೀವ್ರ ಸುಟ್ಟ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋ ಥಾಣೆ ನಗರದಿಂದ ಭಾಯಂದರ್ ಕಡೆಗೆ ಸಾಗುತ್ತಿತ್ತು. ಈ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಕ್ಕೀಡಾಗಿದೆ. ಆ ಸಂದರ್ಭದಲ್ಲಿ ಏಕಾಏಕಿ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಪ್ರಯಾಣಿಕ ಮಹಿಳೆ ಸುಟ್ಟ ಗಾಯಗಳಾಗಿ ಪಾರಾಗಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

ಮಹಿಳೆಯ ಗುರುತು ಗೊತ್ತಾಗಿಲ್ಲ. ಬೆಂಕಿಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಘಟನೆ ವರದಿಯಾದ ಕೆಲವೇ ಕ್ಷಣದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಆರ್‍ಡಿಎಂಸಿ ತಂಡವು ಸ್ಥಳಕ್ಕೆ ಧಾವಿಸಿ ಅರ್ಧ ಗಂಟೆಯೊಳಗೆ ಬೆಂಕಿಯನ್ನು ನಂದಿಸಿತು ಆದರೆ ವಾಹನ ಬೂದಿಯಾಗಿದೆ.

ಚಾಲಕ ರಾಜೇಶ್ ಕುಮಾರ್ (45)ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.