Wednesday, 14th May 2025

ಅರಣ್ಯವಾಸಿಗಳಿಂದ ಸಿಎಂ ಕಾರ್ಯಕ್ರಮಕ್ಕೆ ಹಾನಿ, ಬೆಂಕಿ ಹಚ್ಚಿ ದಾಂಧಲೆ

ಇಂಫಾಲ: ಮೀಸಲು ಮತ್ತು ಸಂರಕ್ಷಿತ ಅರಣ್ಯ ಹಾಗೂ ಜೌಗು ಪ್ರದೇಶಗಳನ್ನು ಗುರುತಿಸಲು ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಮುಖ್ಯಮಂತ್ರಿ ಬೀರೇನ್‍ಸಿಂಗ್ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ದಂಗೆಕೋರರು ಧ್ವಂಸಗೊಳಿಸಿ ಕಂಡ ಕಂಡಲ್ಲಿ ಬೆಂಕಿ ಹಚ್ಚಿ, ಅರಣ್ಯವಾಸಿಗಳು ದಂಗೆ ಎದ್ದಿದ್ದಾರೆ.

ದಂಗೆ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ ಎಂಬ ವರದಿಯನ್ನಾಧರಿಸಿ ಚುರಾಚಂದ್‍ ಪುರ ಜಿಲ್ಲೆಯಲ್ಲಿ ದೊಡ್ಡ ಸಭೆಗಳು ಹಾಗೂ ಅಂತರ್ಜಾಲ ಸೌಲಭ್ಯವನ್ನು ನಿಷೇಧಿಸ ಲಾಗಿದೆ.

ಜಿಲ್ಲೆಯಲ್ಲಿ ಶಾಂತಿ ಭಂಗ, ಸಾರ್ವಜನಿಕ ನೆಮ್ಮದಿಗೆ ಭಂಗ ಮತ್ತು ಮಾನವ ಜೀವ ಮತ್ತು ಆಸ್ತಿಗಳಿಗೆ ಗಂಭೀರ ಅಪಾಯ ಎಂಬ ಪೊಲೀಸ್ ವರದಿಯನ್ನು ಉಲ್ಲೇಖಿಸಿ ದೊಡ್ಡ ಸಭೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚುರಾಚಂದ್‍ಪುರ ಜಿಲ್ಲೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರು ಇಂದು ಜಿಮ್ ಮತ್ತು ಕ್ರೀಡಾ ಸೌಲಭ್ಯವನ್ನು ಉದ್ಘಾಟಿಸಬೇಕಿತ್ತು. ಆದರೆ, ಸಿಎಂ ಭಾಗವಹಿಸುವ ಸಭಾಂಗಣಕ್ಕೆ ನುಗ್ಗಿದ ಜನ ಸಮೂಹ ಕುರ್ಚಿಗಳನ್ನು ಎಸೆದು ಷಾಮಿ ಯಾನಕ್ಕೆ ಹಾಗೂ ಕ್ರೀಡಾ ಸಾಮಗ್ರಿಗಳಿಗೆ ಬೆಂಕಿ ಇಟ್ಟಿದೆ.