Wednesday, 14th May 2025

ಕರ್ನಾಟಕದಿಂದ ಕಾಂಗ್ರೆಸ್ ಓಡಿಸುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರು : ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬಸವರಾಜ ಬೊಮ್ಮಾಯಿ  ಪ್ರಚಾರ ನಡೆಸಿದರು.
ನಗರದ ಎಸ್ ಐಟಿ ಕಾಲೇಜು ಮುಂಭಾಗ ಸಿಎಂರನ್ನು ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಹಾಗೂ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ನಂತರ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಸಿಎಂ ಬಿಜೆಪಿ ಅಭ್ಯರ್ಥಿ ಗೆ ಮತ ನೀಡುವಂತೆ ಮನವಿ ಮಾಡಿದರು.
ರೋಡ್ ಶೋನಲ್ಲಿ  ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಸಿಎಂಗೆ ಜಯಕಾರ ಕೂಗು ತ್ತಿದ್ದರು. ಎಸ್‌ಐಟಿಯಿಂದ ಗಂಗೋತ್ರಿ ನಗರ, ಎಸ್ .ಎಸ್. ಪುರಂ ವರೆಗೆ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ, ತುಮಕೂರು ನಗರ ಕ್ಷೇತ್ರದಲ್ಲಿ ಜ್ಯೋತಿ ಗಣೇಶ್ ಗೆದ್ದೆ ಗೆಲ್ತಾರೆ, ಸ್ಮಾರ್ಟ್ ಸಿಟಿ ಯೋಜನೆಯ ಕೆಲಸಗಳು ಆಗಿದೆ ಅಂದರೆ ಅದಕ್ಕೆ ಕಾರಣ ಜ್ಯೋತಿ ಗಣೇಶ್ ಕಾರಣ. ನಮ್ಮ ಡಬಲ್ ಇಂಜಿನ್ ಸರ್ಕಾರ, ನರೇಂದ್ರ ಮೋದಿ ನೇತೃತ್ವದಲ್ಲಿ ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಕೊಟ್ಟಿದೆ ಎಂದರು.
ನಾವು ಜನ ಪರ  ರಾಜಕಾರಣ ಮಾಡಿದ್ದೇವೆ, ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಓಡಿಸುತ್ತೇವೆ. ಜೆಡಿಎಸ್, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ರಾಜ್ಯದ ಅಭಿವೃದ್ಧಿ ಮಾಡ್ತಿದ್ದೇವೆ, ವಿದ್ಯಾನಿಧಿ, ಎಸ್ ಸಿ ಎಸ್ ಟಿ ಯೋಜನೆ ಕೊಟ್ಟಿದ್ದೇವೆ, ಜನರ ಮನಗೆದ್ದು ಕರ್ನಾಟಕದಲ್ಲಿ ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದೆ ಬರ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಿ.ಎಸ್.ಬಸವರಾಜು, ಎಂಎಲ್‌ಸಿ ಚಿದಾನಂದ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮುಖಂಡ ಚಿದಾನಂದ್ ಇನ್ನಿತರರು ಹಾಜರಿದ್ದರು.
ಮಠಕ್ಕೆ ಭೇಟಿ
ತುಮಕೂರು ನಗರದ ಬಿಜೆಪಿ ರೋಡ್ ಶೋ ಕಾರ್ಯಕ್ಕಾಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದು, ನಂತರ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ನೂತನ ಉತ್ತರಾಧಿಕಾರಿ ಶಿವ ಸಿದ್ಧೇಶ್ವರ ಶ್ರೀಗಳಿಗೆ ಶುಭ ಕೋರಿದರು. ಸಂಸದ ಬಸವರಾಜು, ಎಂಎಲ್‌ಸಿ ಚಿದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಸ್ಪೂರ್ತಿ ಚಿದಾನಂದ್ ಇದ್ದರು.
ಜನರಿಲ್ಲದೆ ಬಿಕೋ ಎಂದ ರೋಡ್ ಶೋ
ತುಮಕೂರು ನಗರದ ಬಿಜೆಪಿ ರೋಡ್ ಶೋ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಮಕೂರು ನಗರದ ಎಸ್.ಐಟಿ ಮುಖ್ಯರಸ್ತೆಯಲ್ಲಿ ನಡೆಸಬೇಕಿದ್ದ ರೋಡ್ ಶೋ ನಡೆಯದೆ ಪ್ಲಾಪ್ ಆಯಿತು. ಜನರ ಹಾಜರಾತಿ ಕೊರತೆ ರೋಡ್ ಶೋ ರದ್ದುಪಡಿಸಲು ಕಾರಣ ಎಂದು ಹೇಳಲಾಗುತ್ತಿದೆ. ಏ. ೨೩ ರಂದು ತುಮಕೂರಿನಲ್ಲಿ ಮುಖ್ಯಮಂತ್ರಿ ರೋಡ್ ಶೋ ನಡೆಸುವ ಕಾರ್ಯಕ್ರಮ ನಿಗದಿ ಯಾಗಿತ್ತು. ಎಸ್.ಐ.ಟಿ ಮತ್ತು ಸೋಮೇಶ್ವರಪುರಂ ಬಡಾವಣೆಗಳಲ್ಲಿ ಹೆಚ್ಚಾಗಿ ಇದ್ದರೂ ಬಿಸಿಲಿನ ಝಳಕ್ಕೆ ರಸ್ತೆಯ ಕಡೆ ಮುಖ ಹಾಕಲಿಲ್ಲ. ಇದರಿಂದ ರಸ್ತೆಯಲ್ಲಿ ಜನ ಸಂಚಾರ ಮತ್ತು ವಾಹನ ಸಂಚಾರ ವಿಲ್ಲದೆ ಸೋಮೇಶ್ವರ ಮತ್ತು ಎಸ್‌ಐಟಿ ಮುಖ್ಯರಸ್ತೆ ಬಿಕೋ ಎನ್ನುತ್ತಿತ್ತು.