ವರ್ತಮಾನ
maapala@gmail.com
ಚುನಾವಣೆ ನಡೆಸುವುದು ಹೇಗೆ ? ಚುನಾವಣೆ ಎದುರಿಸುವುದು ಹೇಗೆ ಎಂಬ ಬಗ್ಗೆ ಬಿಜೆಪಿಯನ್ನು ನೋಡಿ ಕಲಿಯಬೇಕು
ಎಂದು ಈ ಹಿಂದೆ ಬರೆದಿದ್ದೆ. ಇದನ್ನು ಈ ಹಿಂದೆ ನಡೆದಿದ್ದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸಾಬೀತು ಪಡಿಸಿದ್ದ ಬಿಜೆಪಿ ಸದ್ಯದಲ್ಲೇ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲೂ ಸಾಧಿಸಿ ತೋರಿಸುವ ಲಕ್ಷಣ ಕಾಣಿಸಿಕೊಳ್ಳಲಾ ರಂಭಿಸಿದೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಬಿಜೆಪಿ ನಡೆಸಿದ್ದ ಆಂತರಿಕ ಸಮೀಕ್ಷೆ ಯಲ್ಲಿ ಪಕ್ಷ ಎರಡನೇ ಸ್ಥಾನದಲ್ಲಿತ್ತು. ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಲಕ್ಷಣವಿತ್ತು. ಆದರೆ, ಇದೀಗ ಹೊರಬಂದಿರುವ ಆಂತರಿಕ ಸಮೀಕ್ಷೆಯಲ್ಲಿ ಅತಂತ್ರ ವಿಧಾನ ಸಭೆಯ ಭೀತಿ ದೂರವಾಗಿಲ್ಲವಾದರೂ ಬಿಜೆಪಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ವರದಿ ಬಂದಿದೆ. ಇದು ನಟ ಕಿಚ್ಚ ಸುದೀಪ್ ಬಿಜೆಪಿಯನ್ನು ಬೆಂಬಲಿಸುವ ಮೊದಲು ಸಿದ್ಧವಾಗಿದ್ದ ಸಮೀಕ್ಷೆ.
ಇದೀಗ ಕಿಚ್ಚ ಸುದೀಪ್ ಬೆಂಬಲದಿಂದಾಗಿ ಬಿಜೆಪಿ ಇನ್ನೂ ಒಂದು ಹೆಜ್ಜೆ ಮೇಲಕ್ಕೇರಿದ ಸಂಭ್ರಮದಲ್ಲಿದೆ. ಇದುವರೇ ಹೇಗಾ ದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕು ಎಂದು ಕಳೆದ ಒಂದೂಕಾಲು ವರ್ಷಗಳಿಂದ ಸತತ ಪ್ರಯತ್ನ ಮಾಡಿಕೊಂಡು ಬಂದಿರುವ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ತಲೆ ನೋವಾಗಿರುವ ಅಂಶ. ಹೌದು, 2022ರ ಫೆಬ್ರವರಿ, ಮಾರ್ಚ್ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆ ಯಾಗಿ ಅಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಖಾತರಿ ಯಾಗುತ್ತಿದ್ದಂತೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ಆರಂಭಿಸಿತ್ತು. ಬಿಜೆಪಿ ಸರಕಾರದ ವಿರುದ್ಧ ಒಂದೊಂದೇ ಹಗರಣಗಳನ್ನು ಬಿಚ್ಚಿಡುತ್ತಾ ನಿಧಾನವಾಗಿ ಆಡಳಿತ ವಿರೋಧಿ ಅಲೆ ಹೆಚ್ಚಿಸುವ ಪ್ರಯತ್ನ ಶುರುಹಚ್ಚಿಕೊಂಡಿತ್ತು.
ಇದರ ಜತೆಗೆ ಪಿಎಸ್ಐ ನೇಮಕ ಹಗರಣ, ಉಪನ್ಯಾಸಕರ ನೇಮಕದಲ್ಲಿ ನಡೆದಿದೆ ಎನ್ನಲಾದ ಹಗರಣಗಳೂ ಸೇರಿ ಕೊಂಡವು. ಇದಕ್ಕೆ ಬೆಂಬಲವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ 40 ಪರ್ಸೆಂಟ್ ಕಮಿಷನ್
ಆರೋಪವೂ ಕಾಂಗ್ರೆಸ್ಗೆ ಬಹುದೊಡ್ಡ ಅಸ ಒದಗಿಸಿತ್ತು. ಇದನ್ನು ಬಳಸಿಕೊಂಡು ರಾಜ್ಯಾದ್ಯಂತ ಪೇ ಸಿಎಂ ಎಂಬ
ದೊಡ್ಡ ಅಭಿಯಾನವನ್ನೇ ನಡೆಸಿತು. ಇದೆಲ್ಲದರ ಪರಿಣಾಮ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಂಗ್ರೆಸ್ನ ಗ್ರಾಫ್
ಮೇಲೇರುತ್ತಾ ಹೋಯಿತು. ತನ್ನನ್ನು ಸಮರ್ಥಿಸಿಕೊಳ್ಳಲೂ ಬಿಜೆಪಿ ಸರಕಾರಕ್ಕೆ ಸರಿಯಾದ ಮಾರ್ಗ ಸಿಕ್ಕಿರಲಿಲ್ಲ.
ಹಿಂದಿನ ಕಾಂಗ್ರೆಸ್ ಸರಕಾರದ ಅಕ್ರಮಗಳನ್ನೇ ಪ್ರಸ್ತಾಪಿಸಿ ಮುಖ ಒರಸಿಕೊಳ್ಳುವ ಪ್ರಯತ್ನ ಮಾಡಿತ್ತಾದರೂ ಅದರಿಂದ ಹೆಚ್ಚಿನ ಪ್ರಯೋಜನ ಸಿಗಲಿಲ್ಲ. ಆದರೆ, ಕಳೆದ ಕೆಲವು ತಿಂಗಳಿಂಗಳಿಂದ ಸರಕಾರದ ಮಟ್ಟದಲ್ಲಿ ಆದ ಬೆಳವಣಿಗೆಗಳು ಮತ್ತೆ ಅಧಿಕಾರಕ್ಕೆ ಬರುವ ಬಿಜೆಪಿಯ ಆಶಾಭಾವನೆಗಳಿಗೆ ಮತ್ತಷ್ಟು ಶಕ್ತಿ ನೀಡಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲನ್ನು ಶೇ.6ರಷ್ಟು ಹೆಚ್ಚಿಸಿ, ಅದರಿಂದ ಒಟ್ಟಾರೆ ಮೀಸಲು ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿ ಶೇ.56ಕ್ಕೆ ಏರಿರುವು ದರಿಂದ ಅದಕ್ಕೆ ಅನುಕೂಲವಾಗುವಂತೆ ಹೆಚ್ಚಿಸಿದ ಮೀಸಲನ್ನು ಸಂವಿಧಾನದ ೯ನೇ ಶೆಡ್ಯೂಲ್ಗೆ ಸೇರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವುದು, ಒಕ್ಕಲಿಗರು, ಲಿಂಗಾಯತರಿಗೆ ಮೀಸಲು ಹೆಚ್ಚಳ, ಜನಸಂಖೆಯಲ್ಲಿ ಹೆಚ್ಚಿದ್ದರೂ ಅನ್ಯಾಯಕ್ಕೊಳಗಾಗಿದ್ದ ದಲಿತ ಎಡಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲು ಕಲ್ಪಿಸುವ ಒಳಮೀಸಲು ವ್ಯವಸ್ಥೆ
ಜಾರಿಗೊಳಿಸುವ ನಿರ್ಧಾರಗಳು ಬಿಜೆಪಿಯ ಬಗ್ಗೆ ಈ ಸಮುದಾಯಗಳಿಗೆ ಇದ್ದ ಕೆಲವೊಂದು ಅನುಮಾನಗಳು ದೂರ ವಾಗುವಂತೆ ಮಾಡಿವೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲು ಹೆಚ್ಚಿಸುವ ನಿರ್ಧಾರ ಸಹಜವಾಗಿಯೇ ಬಿಜೆಪಿ ಮೇಲ್ವರ್ಗದವರ ಪರ, ದಲಿತ
ವಿರೋಧಿ ಎಂಬ ಭಾವನೆ ಸ್ವಲ್ಪ ಮಟ್ಟಿಗಾದರೂ ದೂರವಾಗಿದೆ. ಅದೇ ರೀತಿ ಲಿಂಗಾಯತರ ಮೀಸಲನ್ನು ಶೇ.2ರಷ್ಟು ಹೆಚ್ಚಿಸಿ ರುವುದು ಆ ಸಮುದಾಯ ಇನ್ನಷ್ಟು ಗಟ್ಟಿಯಾಗಿ ಬಿಜೆಪಿ ಜತೆ ಇರಲು ದಾರಿ ಮಾಡಿಕೊಟ್ಟರೆ, ಒಕ್ಕಲಿಗರ ಮೀಸಲು ಹೆಚ್ಚಳ ಇದುವರೆಗೆ ಬಿಜೆಪಿಯಿಂದ ದೂರವಿದ್ದ ಬಹುಸಂಖ್ಯಾತ ಒಕ್ಕಲಿಗರು ಸಮೀಪ ಬರಲು ಸಹಾಯ ಮಾಡಿದೆ. ಒಳಮೀಸಲು ನಿರ್ಧಾರ ಹೆಚ್ಚು ಸಂಖ್ಯೆಯಲ್ಲಿದ್ದ ದಲಿತ ಎಡಗೈ ಸಮುದಾಯ ಬಿಜೆಪಿಯ ಬಗ್ಗೆ ಇದುವರೆಗೆ ಇದ್ದ ವಿರೋಧಿ ಭಾವನೆಯನ್ನು ಕಡಿಮೆ ಮಾಡಿದೆ. ಇವೆಲ್ಲವೂ ಬಿಜೆಪಿಯ ಬದ್ಧತೆಯೋ? ಚುನಾವಣಾ ಗಿಮಿಕ್ಕೋ? ಒಟ್ಟಿನಲ್ಲಿ ಕೆಲವು ಸಮುದಾಯಗಳಿಗಂತೂ
ಅನುಕೂಲವಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಇದ್ದ ಅಲ್ಪಸಂಖ್ಯಾತರ ಶೇ4ರ ಮೀಸಲನ್ನು ರದ್ದುಗೊಳಿಸಿ, ಅವರನ್ನು ಆರ್ಥಿಕವಾಗಿ ಹಿಂದುಳಿದವಗ ವರ್ಗಕ್ಕೆ ಸೇರಿಸಿರುವುದು. ಇದರಿಂದ ಹಿಂದೂಪರ ಮತಗಳು ಕ್ರೋಢೀಕರಣ ವಾಗಬಹುದು. ಈ ವಿಚಾರಗಳಲ್ಲಿ ಕಾಂಗ್ರೆಸ್ ಏನೇ ಟೀಕೆ, ಆರೋಪಗಳನ್ನು ಮಾಡಿದರೂ ಅದರಿಂದ ಬಿಜೆಪಿಗೆ ಹೆಚ್ಚು ಲಾಭವೇ ಹೊರತು ಕಾಂಗ್ರೆಸ್ಗಲ್ಲ. ಏಕೆಂದರೆ, ಇದುವರೆಗೆ ಕಾಂಗ್ರೆಸ್ ಮುಸ್ಲಿಮರನ್ನು ಹೊರತುಪಡಿಸಿ ಇತರೆ ಸಮುದಾಯ ಗಳಿಗೆ ಮೀಸಲು ಹೆಚ್ಚಿಸುವ ಕೆಲಸ ಮಾಡಲೇ ಇಲ್ಲ. ಹೀಗಾಗಿ ಈ ನಿರ್ಧಾರಗಳು ಚುನಾವಣೆ ಸಮಯದಲ್ಲಿ ಸ್ವಲ್ಪ ಮಟ್ಟಿಗಾ ದರೂ ಬಿಜೆಪಿಗೆ ಮತಗಳ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ಬಿಜೆಪಿಯ ನಿರೀಕ್ಷೆ.
ಈ ಆಘಾತದಿಂದ ಕಾಂಗ್ರೆಸ್ ಚೇತರಿಸಿಕೊಳ್ಳುವ ಮೊದಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ
ಘೋಷಿಸಿದ್ದಾರೆ. ಇದರಿಂದ ಸಹಜವಾಗಿಯೇ ಸುಮಲತಾ ಅವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತ ಚಿತ್ರನಟರು ನೇರವಾಗಿ ಬಿಜೆಪಿಗೆ ಬೆಂಬಲಿಸದಿದ್ದರೂ ಅವರು ಬೇರೆ ಪಕ್ಷಗಳತ್ತ ವಾಲದೇ ಇದ್ದರೆ ಪರೋಕ್ಷವಾಗಿ ಬಿಜೆಪಿಗೆ ಲಾಭವಾಗುತ್ತದೆ. ಇದರಿಂದಾಗಿ ಮಂಡ್ಯ ಭಾಗದಲ್ಲಿ ಮಾತ್ರವಲ್ಲದೆ, ಅಂಬರೀಶ್ ಅಭಿಮಾನಿಗಳು ಬಿಜೆಪಿಯತ್ತ ಸ್ವಲ್ಪ ಮಟ್ಟಿಗೆ ವಾಲುತ್ತಾರೆ. ಮತ್ತೊಂದೆಡೆ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರಣದಿಂದಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ನಿರ್ಧರಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ನಾಯಕ ಸಮುದಾಯದವರಾಗಿರುವ ಸುದೀಪ್ ಕಾರಣದಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಲಾಭವಾಗುವುದರಲ್ಲಿ ಎರಡು ಮಾತಿಲ್ಲ. ಮೇಲಾಗಿ ಅವರು ರಾಜ್ಯಾದ್ಯಂತ ಸಾಕಷ್ಟು ಅಭಿಮಾನಗಳನ್ನು ಹೊಂದಿರುವುದು ಕೂಡ ಬಿಜೆಪಿ ಪಾಲಿಗೆ ಆಶಾದಾಯಕವಾಗಿದೆ. ಈಗಾಗಲೇ ಕೇಂದ್ರ ಸರಕಾರ ಮಹದಾಯಿ ಯೋಜನೆಯ
ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ. ತುಂಗಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಒದಗಿಸಿದೆ.
ಸಾಮಾನ್ಯವಾಗಿ ನೀರಾವರಿ ವಿಚಾರದಲ್ಲಿ ನೀಡಿದ ನೆರವನ್ನು ಆ ಭಾಗದ ಜನ ನೆನಪಿಸಿಕೊಳ್ಳುತ್ತಾರೆ. ಈ ಎಲ್ಲದರ ಮೂಲಕ
ಪಕ್ಷಕ್ಕೆ ಪೂರಕ ವೇದಿಕೆ ರೂಪಿಸಿಕೊಂಡಿರುವ ಬಿಜೆಪಿ ಮುಂದಿನದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಬಿಟ್ಟಿದೆ. 2023ರಲ್ಲಿ ಆಗಾಗಲೇ ಏಳು ಬಾರಿ ರಾಜ್ಯಕ್ಕೆ ಬಂದು ಹೋಗಿರುವ ಪ್ರಧಾನಿ ನರೇಂದ್ರ
ಮೋದಿ ಬಿಜೆಪಿ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.
ಇನ್ನೂ ಒಂದು ಬಾರಿ ಭೇಟಿ ನೀಡಲಿರುವ ಅವರು, ಚುನಾವಣೆ ವೇಳೆ ಸುಮಾರು 20 ಪ್ರಚಾರಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯಕ್ಕೆ ಬಂದಾಗೆಲ್ಲಾ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿದ್ದ ಪ್ರಧಾನಿ ಚುನಾವಣಾ ಪ್ರಚಾರದಲ್ಲಿ ಇನ್ನಷ್ಟು ವಿಭಿನ್ನ ರೀತಿಯಲ್ಲಿ ಜನರನ್ನು ಬಿಜೆಪಿಗೆ ಆಕರ್ಶಿಸಲು ಮುಂದಾಗುವುದು ಸ್ಪಷ್ಟ. ಅದರಲ್ಲೂ ಸುಮಾರು 20 ಕಡೆಗಳಲ್ಲಿ ಅವರು ಪ್ರಚಾರಸಭೆಗಳಲ್ಲಿ ಪಾಲ್ಗೊಂಡರೆ ಅದರ ಬಿಸಿ ನೇರವಾಗಿ ಕಾಂಗ್ರೆಸ್ಗೆ ತಟ್ಟುತ್ತದೆ.
ಮತ್ತೊಂದೆಡೆ ಚುನಾವಣಾ ಚಾಣಕ್ಯ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಕೊನೇ ಕ್ಷಣಗಳಲ್ಲಿ ಯಾವ ರೀತಿಯ ಪ್ರಚಾರ
ತಂತ್ರಗಳನ್ನು ಹೆಣೆಯುತ್ತಾರೆ ಎಂಬುದನ್ನು ಊಹಿಸುವುದೂ ಪ್ರತಿಪಕ್ಷಗಳಿಗೆ ಕಷ್ಟ. ಚುನಾವಣೆಗೆ ಬಿಜೆಪಿ ಹೇಗೆ ಸಿದ್ಧವಾಗು ತ್ತದೆ? ಹೇಗೆ ಚುನಾವಣೆ ಎದುರಿಸುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್ ಕಳೆದ
ಒಂದೂಕಾಲು ವರ್ಷದಿಂದ ನಡೆಸಿಕೊಂಡು ಬಂದಿರುವ ಹೋರಾಟದಿಂದ ಆಗಿರುವ ಲಾಭವನ್ನು ಕೊನೇ ಕ್ಷಣದಲ್ಲಿ ಬಿಜೆಪಿ ಕಿತ್ತುಕೊಳ್ಳುವಂತೆ ಕಾಣುತ್ತಿದೆ. ಇಷ್ಟರ ಮಧ್ಯೆಯೂ ರಾಜ್ಯದಲ್ಲಿ ಇದುವರೆಗೆ ಮೂಡಿಸಿದ ಜನಾಭಿಪ್ರಾಯ ಮತ್ತು ಚುನಾವಣೆ ವೇಳೆ ಘೋಷಿಸಿರುವ ಗ್ಯಾರಂಟಿ ಭರವಸೆಗಳು ಕಾಂಗ್ರೆಸ್ನ ಕೈಹಿಡಿಯಬಹುದು.
ಆದರೆ, ಕೊನೆಯ ಕ್ಷಣಗಳಲ್ಲಿ ಕಾಂಗ್ರೆಸ್ ಚುನಾವಣೆಯನ್ನು ಯಾವ ರೀತಿ ಎದುರಿಸುತ್ತದೆ? ಬಿಜೆಪಿಯ ಇತ್ತೀಚಿನ ಕೊಡುಗೆ ಗಳಿಗೆ ಯಾವ ರೀತಿ ತಿರುಗೇಟು ಕೊಡುತ್ತದೆ ಎಂಬುದರ ಮೇಲೆ ಫಲಿತಾಂಶ ಅವಲಂಬಿಸಿದೆ.
ಲಾಸ್ಟ್ ಸಿಪ್: ಮತದಾರರ ನೆನಪಿನ ಶಕ್ತಿ ಕಡಿಮೆ ಎಂಬುದನ್ನು ಬಿಜೆಪಿಯವರಷ್ಟು ಚೆನ್ನಾಗಿ ಬೇರೆ ಯಾವ ಪಕ್ಷದವರೂ
ತಿಳಿದುಕೊಂಡಿಲ್ಲ