Monday, 12th May 2025

ಬದುಕು ಕಟ್ಟಿಕೊಂಡ ಮೇಲೆ ಪವಿತ್ರ- ಅಪವಿತ್ರವೆಂಬ ಹಂಗೇಕೆ ?

ಯಶೋ ಬೆಳಗು

yashomathy@gmail.com

ಗೌರವಕ್ಕೆ ಹಲವು ಹೆಸರು….

ಹೆಣ್ಣು ಗೌರವದ ಕನಿಷ್ಠ ಮತ್ತು ಗರಿಷ್ಠ ಸೂಚಿ ಹೆಣ್ಣೆ! ನೀನು ಹೆರುವೆ ಹೆದರಿಕೆಯ ಸಂತಾನ ಅದಕ್ಕೆಂತಲೇ ನಿನಗಿಲ್ಲ ಯಾವುದೇ ಜನಾಂಗ ಮರುಳು ಗೊಳಿಸಲಾಯಿತು ನಿನ್ನ ಇಡೀ ಇರುವಿಕೆಯನ್ನು ಸುಂದರವಾಗಿ ನಿನ್ನ ತುಟಿಗಂಟಿಸಲಾಯಿತು ಕೃತಕ ಮುಗುಳ್ನಗೆ ಶತಮಾನಗಳ ಕಾಲ ನಗಲಿಲ್ಲ ನೀನು ಅಳಲೂ ಇಲ್ಲ ನೀನು ಆಗಲಾರದು ತಾಯಿತನ ಸಹ ನಿನ್ನ ಗೋರಿಯ ಅಲಂಕಾರದ ಹಿನ್ನೆಲೆ ಏನರ್ಥ ನಿನ್ನ ನಿಷ್ಠೆಗೆ…..

ಅಸಹನೀಯ ಗೌರವದ ಹೊರೆಯನ್ನು ಹೊತ್ತುಕೊಂಡು ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಕುಬ್ಜರು ಮತ್ತು ನವಯುಗದ ವಿದೂಷಕರಿಂದ ಈ ಲೋಕ ತುಂಬಿ ತುಳುಕುತ್ತಿದೆ. ಅಂತಹವರು ಮಾತ್ರ ತಮ್ಮ ವ್ಯಕ್ತಿತ್ವಕ್ಕಿಂತ ಕಿರಿದಾದ ಮನಸ್ಸಾಕ್ಷಿ ಹೊಂದಿರುತ್ತಾರೆ. ಇದುವೇ ಮೇಲ್ವರ್ಗದ ಆಷಾಢ ಭೂತಿಗಳ ಬದುಕಿನ ಶೈಲಿ….

***

ಹೊರಗೆ ಜಿಟಿಜಿಟಿ ಮಳೆ. ಜೊತೆಗೆ ಆಷಾಢ ಮಾಸದ ಪ್ರತೀಕವಾಗಿ ನೆಲ-ಮುಗಿಲ ಸಂತಾನಗಳಾದ ಮೋಡಗಳ ಹಾರಾಟ. ನೆಲದ ಮೇಲೆ ಕಾಲಿಡಲೂ ಆಗದಂತೆ ಕೊರೆವ ಚಳಿಯಲ್ಲಿ ಬಿಸಿ ಬಿಸಿ ಚಹಾ ಹೀರುತ್ತಾ ಒಂದಷ್ಟು ಸಾಹಿರ್ ಲುಧಿಯಾನ್ವಿ ಸಾಹಿತ್ಯವಿರುವ ಹಾಡುಗಳನ್ನು ಕೇಳುತ್ತಾ ಕುಳಿತಿರು ವಾಗ ನೆನಪಾದವಳು ಸುಪ್ರಸಿದ್ಧ ಪಂಜಾಬಿ ಕವಯಿತ್ರಿ ಅಮೃತಾ…. ವಿವಾಹಿತಳಾಗಿ ಎರಡು ಮಕ್ಕಳ ತಾಯಿಯಾಗಿದ್ದೂ, ಸಾಹಿರ್ ರನ್ನು ಹುಚ್ಚಳಂತೆ ಪ್ರೀತಿಸಿದವಳು ಕವಯಿತ್ರಿ ಅಮೃತಾ ಪ್ರೀತಮ.

ತನಗಿಂತ ಹತ್ತು ವರುಷ ಕಿರಿಯನಾದ ಕಲಾವಿದ ಇಮ್ರೋಜ್ ಜೊತೆಗೆ ಮದುವೆಯೆಂಬ ಬಂಧನವಿಲ್ಲದೆ, ಆಣೆ-ಪ್ರಮಾಣಗಳ ಗೊಡವೆಗಳಿಲ್ಲದೆ, ಪ್ರಶ್ನೆ-ಉತ್ತರಗಳ ನೆರಳಿಲ್ಲದೆ, ಕೊಂಕು ಮಾತುಗಳ ಸುಳಿಯಿಲ್ಲದೆ ಪರಸ್ಪರ ನಂಬಿಕೆ, ಮೆಚ್ಚುಗೆ, ಗೌರವಗಳ ಆತ್ಮ ಸಾಂಗತ್ಯದ ತೃಪ್ತಿಯಲ್ಲಿ ಪ್ರೀತಿಯೆಂಬ ಸುಂದರ ಹೂವರಳಿ ಘಮಘಮಿಸಿದ್ದು ಅನನ್ಯ. ಬಹಳ ಚಿಕ್ಕವಯಸ್ಸಿನ ಲಾಹೋರಿನ ಜವಳಿ ವ್ಯಾಪಾರಿಯನ್ನು ಮದುವೆಯಾಗಿದ್ದ ಅಮೃತಾ, ಭಾರತ-ಪಾಕಿಸ್ತಾನದ ವಿಭಜನೆಯ ನಂತರ ಕುಟುಂಬದೊಂದಿಗೆ ದಿಲ್ಲಿಗೆ ಬಂದು ನೆಲೆಸುತ್ತಾರೆ.

ಆಲ್ಇಂಡಿಯಾ ರೇಡಿಯೋಗಾಗಿ ಕಾರ್ಯಕ್ರಮವನ್ನು ನೀಡುವ ಪ್ರಯುಕ್ತ ಅವರು ಪ್ರತಿದಿನ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿರುತ್ತದೆ. ಇದನ್ನು ಪ್ರತಿದಿನ ತಮ್ಮ ಮನೆಯ ತಾರಸಿಯಿಂದ ನೋಡುತ್ತಿದ್ದ ಇಮ್ರೋಜ್ ಬಳಿ ಆಗ ಕೇವಲ ಒಂದು ಬೈಸಿಕಲ್ ಮಾತ್ರ ಇರುತ್ತದೆ. ಒಂದಷ್ಟು ಹಣ ಕೂಡಿಟ್ಟು ಕೆಲ ಸಮಯದ ನಂತರ ಅವರೊಂದು ಸ್ಕೂಟರ್ ಖರೀದಿಸುತ್ತಾರೆ. ಆನಂತರ ಅಮೃತಾರನ್ನು ಭೇಟಿಯಾಗಿ ನೀವಿನ್ನು ಬಸ್ಸಿನಲ್ಲಿ ಓಡಾಡುವುದು ಬೇಡ. ನಾನೇ ನಿಮ್ಮನ್ನು ಸುರಕ್ಷಿತವಾಗಿ ತಲುಪಿಸಿ, ಕರೆತರುತ್ತೇನೆ. ಎಂದಾಗ ನೀವ್ಯಾಕೆ ನನಗೆ ಇಷ್ಟು ತಡವಾಗಿ ಸಿಕ್ಕಿರಿ? ಎಂದು ಹೇಳಿ, ಸಂಜೆಯ ಹೂವು(ಶಾಮ್ ಕಾ ಫಲ) ಅನ್ನುವ ಕವಿತೆಯನ್ನು ಅವರಿಗಾಗಿ ಬರೆಯುತ್ತಾರೆ. ಆನಂತರ ಅಮೃತಾರ ಇಬ್ಬರು ಮಕ್ಕಳನ್ನು ಶಾಲೆಗೆ ಬಿಟ್ಟು, ಕರೆದುಕೊಂಡು ಬರುವ ಜವಾಬ್ದಾರಿಯನ್ನೂ ಹೊರುತ್ತಾರೆ.

ಸ್ಕೂಟರಿನಲ್ಲಿ ಒಟ್ಟಿಗೇ ಮೂರು ಜನ ಪ್ರಯಾಣಿಸುವುದು ಕಷ್ಟವೆನಿಸಿದಾಗ ಕಾರನ್ನು ಕೊಳ್ಳುತ್ತಾರೆ. ಇದೆಲ್ಲದರ ನಡುವೆ ಅಮೃತಾರ ಪತಿಯೊಂದಿಗೂ ಸ್ನೇಹದೊಂದಿಗಿರುತ್ತಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಅಮೃತಾರ ಪತಿ ಒಮ್ಮೆ ಇಮ್ರೋಜ್‌ಗೆ ಹೇಳುತ್ತಾರೆ. ನಿನಗೆ ನಾನು ಆಭಾರಿಯಾಗಿರಬೇಕು ಇಮ್ರೋಜ …. ನೀನು ಸಿಕ್ಕಿದ ನಂತರ ನನ್ನ ಹೆಂಡತಿ ತನಗಾಗಿ ಅಡುಗೆ ಮಾಡಿಕೊಳ್ಳುವುದನ್ನು ಕಲಿತಿದ್ದಾಳೆ. ಮೊದಲೆಲ್ಲ ಅಡುಗೆ ಮನೆಯ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ ಎಂದು.

ವೈಚಾರಿಕ ಭಿನ್ನತೆಗಳಿಂದಾಗಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ ತನ್ನ ಪತಿಯಿಂದ ದೂರಾದಾಗ ಇಮ್ರೋಜ್‌ಗೆ ನೀವು ನನ್ನ ನೆರಳಾಗದೆ, ಹೊರ ಜಗತ್ತಿನಲ್ಲಿ ಸ್ವತಂತ್ರವಾಗಿ ನಿಮ್ಮ ಹೊಸ ಬದುಕನ್ನು ರೂಪಿಸಿಕೊಳ್ಳಿ. ಆನಂತರವೂ ನಿಮಗೆ ನನ್ನ ಸಾಂಗತ್ಯ ಬೇಕೆನ್ನಿಸಿದರೆ ಮಾತ್ರ ಹಿಂತಿರುಗಿ ಎಂದು ಹೇಳಿದಾಗ ಇಮ್ರೋಜ್ ಅಮೃತಾರ ಸುತ್ತಲೇ ಏಳು ಪ್ರದಕ್ಷಿಣೆ ಹಾಕಿ ನಾನೀಗ ಏಳು ಲೋಕಗಳನ್ನೂ ಸುತ್ತಿಬಂದು ನಿನ್ನೆದುರಿಗೆ ನಿಂತಿದ್ದೇನೆ ಎಂದು
ಮುಗುಳ್ನಕ್ಕಾಗ ಯಾವುದೇ ಬಂಧನದ ಅಗತ್ಯವಿಲ್ಲದೆ ಕಲೆಯೊಡನೆ ಕವಿತೆ ಒಂದಾಗುತ್ತದೆ. ಮನೆಯ ತುಂಬ ಇಮ್ರೋಜ್‌ರ ಪೇಂಟಿಂಗುಗಳಿಗೆ ಅಮೃತಾರ ಕವಿತೆಯ ಸಾಲುಗಳು ಅರ್ಥ ಕಲ್ಪಿಸುತ್ತವೆ.

ಒಂದೇ ಮನೆಯಲ್ಲಿದ್ದರೂ ಸಹ ಪ್ರತ್ಯೇಕ ಕೋಣೆಗಳಲ್ಲಿ ತಮ್ಮ ತಮ್ಮ ಸ್ವಾತಂತ್ರ್ಯಗಳಿಗೆ ಧಕ್ಕೆ ಬರದಂತೆ ಒಟ್ಟಿಗೆ ಜೀವಿಸಿದ ಕತೆಯನ್ನು ಮತ್ತೊಮ್ಮೆ
ಓದಬೇಕೆನಿಸಿತ್ತು. ಅದಕ್ಕಾಗಿ ಪುಸ್ತಕದ ಕಪಾಟುಗಳೆಲ್ಲವನ್ನೂ ಜಾಲಾಡುತ್ತಿದ್ದೆ. ಆಗ ಕಣ್ಣಿಗೆ ಬಿದ್ದ ಪುಸ್ತಕವೇ ಕನ್ನಡಕ್ಕೆ ಅನುವಾದಗೊಂಡ ಅಮೃತಾ ಪ್ರೀತಮ್ ಬರೆದ ಪಾಕಿಸ್ತಾನಿ ಕವಯಿತ್ರಿ ಸಾರಾ ಶಗು-ರ ಜೀವನ ಮತ್ತು ಕಾವ್ಯ ಅನ್ನುವ ಪುಸ್ತಕ. ಕೈಗೆ ಸಿಕ್ಕ ಪುಸ್ತಕವನ್ನು ಹಿಡಿದು ಅದರಲ್ಲಿ  ಅಯಾಚಿತ ವಾಗಿ ತೆರೆದುಕೊಂಡ ಒಂದು ಪುಟದ ಮೇಲೆ ಕಣ್ಣಾಡಿಸಿದಾಗ ಒಂದು ಕ್ಷಣ ದಿಗ್ಭ್ರಮೆಯಾಯ್ತು. ತಮ್ಮ ಮನದಾಳದ ನೋವುಗಳೆಲ್ಲವನ್ನೂ ಮಾತಿನ ಮೂಲಕ, ಕವಿತೆಯ ಮೂಲಕ ಅಮೃತಾರೊಂದಿಗೆ ಪತ್ರದ ಮೂಲಕ ಹಂಚಿಕೊಂಡ ಪಾಕಿಸ್ತಾನದ ಬಲು ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ಕವಯಿತ್ರಿ ಸಾರಾ ಶಗು-ರ ಜೀವನ ಅದೆಷ್ಟು ಧಾರುಣವಾಗಿತ್ತು. ಈ ಬದುಕು ಅವರನ್ನು ಅದೆಷ್ಟು ನಿರ್ದಯತೆಯಿಂದ ನಡೆಸಿಕೊಂಡಿತ್ತು ಅನ್ನುವುದನ್ನೆಲ್ಲ ಓದುತ್ತಿ
ದ್ದರೆ ತಣ್ಣನೆಯ ಸೂಜಿಯ ಮೊನೆಯಿಂದ ನಿರಂತರ ತಿವಿಯುತ್ತಿದ್ದಂತೆ ಭಾಸವಾಯಿತು.

ಅದೆಲ್ಲದರ ನಡುವೆ ನಾವೆಷ್ಟು ಸುಖಿಗಳು ಮತ್ತು ಸುದೈವಿಗಳು ಎಂಬುದು ಅನುಭವಕ್ಕೆ ಬಂತು. ಒಂದು ವೇಳೆ ಅವರ ವೇದನೆ ತುಂಬಿದ ಪತ್ರಗಳು ಹೀಗೆ ಪುಸ್ತಕ ರೂಪ ಪಡೆಯದೇ ಹೋಗಿದ್ದರೆ ಸಾರಾ ಶಗು- ಎನ್ನುವ ಜೀವ ಈ ಧರೆಯ ಮೇಲೆ ಅದೆಲ್ಲ ನೋವುಗಳನ್ನು ಅನುಭವಿಸಿದ್ದಕ್ಕೆ ಯಾವುದೇ ಸಾಕ್ಷಿ ಗಳಿಲ್ಲದಂತೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿತ್ತಲ್ಲ? ಅಂದುಕೊಳ್ಳುವಾಗ ಪುಸ್ತಕದ ಮಹತ್ವವೇನೆಂಬುದು ಅರಿವಿಗೆ ಬಂತು.

ಕೌಟುಂಬಿಕ ದೌರ್ಜನ್ಯ ಉಳಿದ ದೌರ್ಜನ್ಯಗಳಂತಲೂ ಹೀನಾಯ. ಹಿಂಸೆಯ ಪ್ರತಿ ನಡೆಯೂ ಹೆಣ್ಣಿನ ಆತ್ಮ ವಿಶ್ವಾಸ, ಆತ್ಮಗೌರವವನ್ನೇ ನಾಶ ಮಾಡುತ್ತದೆ. ಅವಳ ವ್ಯಕ್ತಿತ್ವವನ್ನು ಛಿದ್ರಗೊಳಿಸುತ್ತದೆ. ಮುಕ್ಕಾಲು ಪಾಲು ಮಹಿಳೆಯರು ತಮ್ಮ ವಿಧಿ ಹಳಿಯುತ್ತಾ ಬದುಕಿದರೆ ಕೆಲವರಷ್ಟೇ ಹೊರದಾರಿ ಗಳನ್ನು ಕಂಡುಕೊಂಡಿದ್ದಾರೆ. ಬರವಣಿಗೆಯನ್ನು ಎದೆಯ ಗಾಯಗಳ ಮಾಯಿಸುವ ಮುಲಾಮಾಗಿ, ಅತ್ಮರಕ್ಷಣೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ.

ಆದರೆ ಅದು ಕೆಲವರಿಗಷ್ಟೇ ಸಾಧ್ಯವಾಗುತ್ತದೆ. ಬರೆಯತೊಡಗಿದ ಮೇಲೂ ತೀವ್ರ ಮನೋಕ್ಲೇಶದಿಂದ ಹೊರಬರಲಾರದೆ, ಮರಳಿ ಬಾರದ ಕಡಲೊಳಗೆ ಆಳಾಳ ಇಳಿದು ಕಣ್ಮರೆಯಾದವರು, ಎಳೆಯ ವಯಸಿಗೆ ಆತ್ಮಹತ್ಯೆಗೆ ಶರಣಾದವರೆಷ್ಟೋ? ಮಾನಸಿಕ ಖಿನ್ನತೆ ಆತ್ಮಹತ್ಯೆಯ ಕಾರಣ ಎನ್ನಲಾಗುತ್ತದೆ. ಆದರೆ ಹಾಗೊಂದು ಮನಸ್ಥಿತಿ ಯನ್ನು ರೂಪಿಸಿದ ಸಮಾಜವೂ ಅವರ ಅಕಾಲಿಕ ಮರಣಗಳಿಗೆ ಕಾರಣವಾಗಿದೆ. ಅಂಥ ಒಂದು ಜೀವ ಪಾಕಿಸ್ತಾನದ ಕವಯಿತ್ರಿ ಸಾರಾ ಶಗು-. ೧೯೫೪ರಲ್ಲಿ ಪಾಕಿಸ್ತಾನದಲ್ಲಿ ಹುಟ್ಟಿದ ಸಾರಾ ಬಹಳ ಬಡತನದ ಹಿನ್ನೆಲೆಯಿಂದ ಬಂದವಳು. ಬಾಲ್ಯದಲ್ಲಿ ತನ್ನ ತಾಯಿ ಏಕಾಂಗಿಯಾಗಿ ಎದುರಿಸಿದ ಸಂಕಷ್ಟಗಳನ್ನೆಲ್ಲ ತೀವ್ರವಾಗಿ ಗ್ರಹಿಸಿದಳು.

ಬದುಕು ದೂಡುವುದು ಕಷ್ಟವಾದ ಕಾಲದಲ್ಲಿ ತಾಯಿಯೊಡನೆ ಹೂ ಕಟ್ಟಿ ಬದುಕಿದಳು. ಅವಳಿಗೆ ೧೬ನೇ ವಯಸ್ಸಿಗೆ ಮೊದಲ ಮದುವೆಯಾಯಿತು.
ಗಂಡನ ಸ್ವಭಾವ ಅವಳಿಗೆ ಸರಿ ಹೋಗದೇ ಆ ವಿವಾಹ ಮುರಿದುಬಿದ್ದು ನಂತರ ಎರಡನೆ ಮದುವೆಯಾಯಿತು. ತಮ್ಮ ಮೊದಲ ಮಗು ಹುಟ್ಟಿದ ಕೂಡಲೇ ತೀರಿಕೊಂಡರೂ ಎರಡನೆಯ ಗಂಡ ತೋರಿಸುವ ನಿರ್ಭಾವುಕ ಪ್ರತಿಕ್ರಿಯೆ, ನಿರ್ಲಕ್ಷ್ಯದಿಂದ ಎಳೆಯ ಬಾಣಂತಿಗೆ ಮನೋವಿಕಲ್ಪ
ಉಂಟಾಗುತ್ತದೆ. ನಂತರ ಒಂದಾದ ಮೇಲೊಂದು ಮೂರು ಮಕ್ಕಳಾಗುತ್ತವೆ. ಆದರೆ ಆ ಗಂಡನೊಂದಿಗೆ ಬಾಳುವುದು ಅಸಾಧ್ಯವೆನ್ನುವಷ್ಟು ದೌರ್ಜನ್ಯ ಮಿತಿ ಮೀರತ್ತದೆ.

ಪ್ರಕ್ಷುಬ್ಧ ಮನಸು, ಪ್ರಕ್ಷುಬ್ಧ ಸಂಸಾರ. ಅವನಿಂದ ಬಿಡುಗಡೆ ಬಯಸುತ್ತಾಳೆ, ಆದರೆ ಮಕ್ಕಳನ್ನು ತನಗೇ ಕೊಡಬೇಕೆಂದು ಕೇಳುತ್ತಾಳೆ. ಪಾಕಿಸ್ತಾನದ ಇಸ್ಲಾಮೀ ಕಾನೂನಿನಂತೆ ಮಕ್ಕಳ ಕಸ್ಟಡಿ ತಂದೆಗೆ ಸೇರಿದ್ದು. ಅವನು ಮಕ್ಕಳನ್ನೂ ಕೊಡುವುದಿಲ್ಲ. ಹಣವನ್ನೂ ನೀಡುವುದಿಲ್ಲ. ಮನಸ್ಸು ಮತ್ತಷ್ಟು ಕದಡಿ ಹೋಗುತ್ತದೆ. ಮಕ್ಕಳ ಕಸ್ಟಡಿ ಪಡೆಯಬಹುದೆಂದು, ಗಂಡ ಹೇಳಿಕೊಟ್ಟಂತೆ ತಾನು ವ್ಯಭಿಚಾರ ಎಸಗಿದ್ದಾನೆಂದು ಕೋರ್ಟಿನಲ್ಲಿ ಸುಳ್ಳು ಹೇಳುತ್ತಾಳೆ.

ಕೊನೆಗೂ ಮಕ್ಕಳು ಅವಳಿಗೆ ಸಿಗದೆ ಹೋಗುತ್ತವೆ. ಕೊನೆಮೊದಲಿಲ್ಲದೆ ಹೋರಾಟ ನಡೆಸಿದರೂ ನೆಮ್ಮದಿಯೂ ಇಲ್ಲ. ಜೀವನಾಂಶವೂ ದೊರೆಯು ವುದಿಲ್ಲ. ಮೂರನೆಯ ಮದುವೆಯಾಗುತ್ತಾಳೆ. ಅದೂ ಬಹಳ ದಿನ ಬಾಳದೇ ಹೋಗುತ್ತದೆ. ‘ಬಡವರ ಮನೆಯ ಹೆಂಗಸರೇ ಹಾಗೆ, ಸಡಿಲ
ನಡತೆ ಯವರು’ ಎಂದು ಸಮಾಜ ಅವಳ ನಡತೆಗೊಂದು ಕಾರಣ ಹುಡುಕಿ, ಅನೈತಿಕ ಪಟ್ಟಕಟ್ಟಿ ಸುಮ್ಮನಾಗುತ್ತದೆ. ಪದೇಪದೆ ಮದುವೆ, ಪದೇಪದೆ ದಾಂಪತ್ಯ ಬಿರುಕು, ವಿಚ್ಛೇದನ, ಮಕ್ಕಳ ಸಾವು, ಸಿಗದ ಮಕ್ಕಳ ಒಡನಾಟಕ್ಕೆ ಕ್ರುದ್ಧಗೊಳ್ಳುವ ತಾಯಿ ಮನಸು… ಇಂಥ ಭಾವ ತೀವ್ರತೆಯ ಘಟನೆಗಳ ನಡುವೆ ಸಾರಾ ಬದುಕು ಸವೆಯುತ್ತದೆ. ಇಷ್ಟೇ ಆಗಿದ್ದರೆ ನಾವಿವತ್ತು ಅವಳನ್ನು ನೆನೆಯುತ್ತಿರಲಿಲ್ಲ.

ಇದೆಲ್ಲದರ ನಡುವೆಯೇ ಅದ್ಭುತ ಎನ್ನುವಂತಹ ಕವಿತೆಗಳನ್ನು ಬರೆದು ಹೆಸರಾಂತ ಕವಿಯಾಗುತ್ತಾಳೆ. ಒಂದೆಡೆ ಕುಟುಂಬ ಮತ್ತು ಬದುಕು ತೋರಿಸುವ ಅನಾದರ: ಮತ್ತೊಂದೆಡೆ ಖ್ಯಾತ ಕವಯಿತ್ರಿಯೆಂದು ಜನ ತೋರಿಸುವ ಜನಾದರ; ಒಂದುಕಡೆ ಸೂಕ್ಷ್ಮ ಸಂವೇದನೆಹುಟ್ಟಿಸುವ ಕಾವ್ಯ ಮತ್ತೊಂದೆಡೆ ಅದೇ ಅತಿ ಸೂಕ್ಷ್ಮತೆಗೆ ಬಲಿ ಯಾದ ಬದುಕು… ಈ ವೈರುಧ್ಯಗಳು ಮನಸನ್ನು ಮತ್ತು ಬದುಕನ್ನು ಅರಾಜಕತೆಯೆಡೆ ತಳ್ಳುತ್ತವೆ. ಎಲ್ಲ ಅಸ್ತವ್ಯಸ್ತ ಗೊಳ್ಳುತ್ತದೆ. ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ.

ಹಲವು ಬಾರಿ ಹುಚ್ಚಾಸ್ಪತ್ರೆ ಸೇರಿ ಹೊರಬರುತ್ತಾಳೆ. ಅವಳನ್ನು ಜನ ಹುಚ್ಚಿಯೆಂದರು. ಅತಿಕಾಮಿಯೆಂದರು. ವ್ಯಭಿಚಾರಿಯೆಂದರು. ಚಂಚಲೆಯೆಂದರು. ಒಳ್ಳೆಯ ಕವಿ ಆದರೆ ದುಪಟ್ಟಾ ಹೊದೆಯಲು ಬರುವುದಿಲ್ಲ ಎಂದರು. ಕೊನೆಗೆ ಸಾರಾ ತನ್ನನ್ನು ತಾನೇ ವ್ಯಭಿಚಾರಿ ಎಂದೂ
ಕರೆದುಕೊಂಡಳು. ಆದರೆ ನಿಜಕ್ಕೂ ಸಾರಾ ಏನಾಗಿದ್ದಳು? ಎಲ್ಲವೂ ಆಗಿದ್ದಳು. ಅವಳು ಕವಿಯಾಗಿದ್ದಳು. ಅದಕ್ಕೇ ಹುಚ್ಚಿಯಾಗಿದ್ದಳು. ಅದಕ್ಕೇ ಲೋಕದ ಎಲ್ಲ ಎಗಳ ಮೀರಿ ಬದುಕಿದಳು….. ಅನ್ನುವ ಸಾಲುಗಳನ್ನು ಓದುತ್ತಾ ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟ ಅಮೃತಾ ಪ್ರೀತಮ್‌ರಿಗೂ, ಅಷ್ಟೇ ಪರಿಣಾಮಕಾರಿಯಾಗಿ ಕನ್ನಡಕ್ಕೆ ತಂದ ಹಸನ್ ನಯೀಮ್ ಅವರಿಗೂ ಮನದ ಕೃತಜ್ಞತೆಗಳನ್ನು ಅರ್ಪಿಸುತ್ತಾ ಸಂಬಂಧಗಳ ಸಂಕೀರ್ಣತೆಯ
ನಡುವಿರುವ ಸೂಕ್ಷ್ಮ ಎಳೆಗಳನ್ನು ಗ್ರಹಿಸುತ್ತಾ, ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅಳೆಯಲು ಸಾಧ್ಯವಿಲ್ಲವೆಂದುಕೊಳ್ಳುತ್ತಾ ಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ತೊಯ್ಯುತ್ತಾ ಧಗಧಗಿಸುತ್ತಿದ್ದ ಮನವನ್ನು ತಣಿಸುತ್ತಾ ನಾನೂ ತಂಪಾದೆ.