Wednesday, 14th May 2025

ಅಶೋಕವನದ ಮೇಲೆ ಸಿಂಧ್ಯಾ ದಾಳಿ ?

R Ashok

ಮೂರ್ತಿ ಪೂಜೆ

ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ ಅವರ ನಿವಾಸಕ್ಕೆ ಹೋದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದಿಂದ ಸಿಂಧ್ಯಾ ಅವರನ್ನು ಕಣಕ್ಕಿಳಿಸಬೇಕು ಎಂಬುದು ಅವರ ಯೋಚನೆ. ಅಂದ ಹಾಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಬಿಜೆಪಿ ನಾಯಕ ಆರ್.ಅಶೋಕ್.

ಇಲ್ಲಿಂದ ನಿರಾಯಾಸವಾಗಿ ಗೆಲ್ಲುತ್ತಾ ಬಂದಿರುವ ಅವರು ಈಗಾಗಲೇ ತಮ್ಮ ಕ್ಷೇತ್ರವನ್ನು ಭದ್ರಕೋಟೆಯನ್ನಾಗಿ ಮಾರ್ಪಡಿಸಿ ದ್ದಾರೆ. ಅವರು ಕಟ್ಟಿಕೊಂಡಿ ರುವ ಈ ಕೋಟೆಯನ್ನು ಭೇದಿಸಬೇಕು ಅಂತ ಕಾಂಗ್ರೆಸ್ ಪಕ್ಷದ ವರಿಷ್ಠರು ಈಗ ಡಿಕೆಶಿಗೆ ಸುಪಾರಿ ನೀಡಿದ್ದಾರೆ.

ರಣದೀಪ್ ಸಿಂಗ್ ಸುರ್ಜೇವಾಲಾ ಇತ್ತೀಚೆಗೆ ಡಿಕೆಶಿ ಜತೆ ಮಾತನಾಡುತ್ತಾ: ಬಿಜೆಪಿ ನಾಯಕ ಆರ್. ಅಶೋಕ್ ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪಕ್ಷಕ್ಕೇಕೆ ಸಾಧ್ಯವಾಗುತ್ತಿಲ್ಲ? ಎಂದು ಕೇಳಿದರಂತೆ. ಅಶೋಕ್ ತಮ್ಮ ಕ್ಷೇತ್ರದ ಸುತ್ತ ಕೋಟೆ ಕಟ್ಟಿಕೊಂಡಿರುವುದಷ್ಟೇ ಅಲ್ಲ, ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಶಕ್ತಿ ತುಂಬುತ್ತಿದ್ದಾರೆ. ಅವರು ಸ್ವಯಂ ಆಗಿ ಗೆಲ್ಲುವುದಲ್ಲದೆ, ಈ ಪ್ರಮಾಣದಲ್ಲಿ ಬೇರೆಯವರು ಗೆಲ್ಲಲು ನೆರವು ಕೊಡು ತ್ತಿದ್ದಾರೆ ಎಂದರೆ ಸ್ವಕ್ಷೇತ್ರದಲ್ಲಿ ಅವರು ನೆಮ್ಮದಿಯಾಗಿರಲು ವಿರೋಧ ಪಕ್ಷಗಳು ಬಿಟ್ಟಿವೆ ಎಂದರ್ಥ.

ಅವರು ಎಲ್ಲಿಯ ತನಕ ನೆಮ್ಮದಿಯಿಂದಿರುತ್ತಾರೋ? ಅಲ್ಲಿಯ ತನಕ ಅವರ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಿರಲಿ, ಇನ್ನೂ
ಹತ್ತಾರು ಕ್ಷೇತ್ರಗಳಲ್ಲಿ ನಾವು ಹೆಚ್ಚಿನ ಪೈಪೋಟಿ ಎದುರಿಸಬೇಕಾಗುತ್ತದೆ. ಇದು ತಪ್ಪಬೇಕು ಎಂದರೆ ಪದ್ಮನಾಭನಗರ
ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು, ಅಶೋಕ್ ತಮ್ಮ ಗೆಲುವಿಗಾಗಿ ಪರದಾಡುವಂತೆ ಮಾಡಬೇಕು.
ತಮ್ಮ ಗೆಲುವು ಕಷ್ಟ ಎಂಬ ಭಾವನೆ ಅವರಿಗೆ ಬರುತ್ತದೋ? ಆಗ ಅವರು ಇತರ ಕ್ಷೇತ್ರಗಳಿಗೆ ನುಗ್ಗಿ ಪ್ರಭಾವ ಬೀರಲು
ಸಮಯ ಇಲ್ಲದಂತಾಗುತ್ತದೆ ಎಂದು ಸುರ್ಜೇವಾಲಾ ಹೇಳಿದಾಗ ಡಿಕೆಶಿ ಅದನ್ನು ಒಪ್ಪಿಕೊಂಡರಂತೆ.

ಅಂದ ಹಾಗೆ ಪದ್ಮನಾಭನಗರ ಕ್ಷೇತ್ರದಲ್ಲಿ ಆರ್. ಅಶೋಕ್ ಅವರ ವಿರುದ್ಧ ಕಣಕ್ಕಿಳಿಸಲು ರಘುನಾಥ ನಾಯ್ಡು ಎಂಬುವವ ರನ್ನು ಡಿಕೆಶಿ ರೆಡಿ ಮಾಡಿಕೊಂಡಿದ್ದರು. ಆದರೆ ರಘುನಾಥ ನಾಯ್ಡು ಅವರು ಹೆವಿ ವೇಯ್ಟ್ ಕ್ಯಾಂಡಿಡೇಟ್ ಅಲ್ಲ ಅಂತ ಅವರಿಗೇ ಅನ್ನಿಸಿದೆ. ಈ ಮಧ್ಯೆ ಖುದ್ದು ಆರ್. ಅಶೋಕ್ ಅವರಿಗೆ ಹತ್ತಿರದವರಾದ ಆಂಜನಪ್ಪ ಮತ್ತು ಎಲ್. ಶ್ರೀನಿವಾಸ್ ಅವರನ್ನು ಸೆಳೆ
ಯಲು ಡಿಕೆಶಿ ಯತ್ನಿಸಿದ್ದಾರಾದರೂ ಅದು ಸಫಲವಾಗಿಲ್ಲ. ಈ ಮಧ್ಯೆ ಅಶೋಕ್ ಅವರನ್ನು ನಿಶ್ಚಿತವಾಗಿ ಸೋಲಿಸುತ್ತೇನೆ
ಅಂತ ಪ್ರಬಲ ಕಮ್ಮ ಸಮುದಾಯದ ಗುರಪ್ಪ ನಾಯ್ಡು ಹೇಳುತ್ತಿದ್ದರೂ ಡಿಕೆಶಿಗೆ ಅವರ ಬಗ್ಗೆ ಒಲವಿಲ್ಲ ೨೦೧೩ ರಲ್ಲಿ ಅವರು ಯುದ್ಧಕ್ಕೆ ಸಜ್ಜಾದರೆ ಶಿವರಾಮೇಗೌಡರ ಮಗನಿಗೆ ಟಿಕೆಟ್ ಕೊಡಲಾಗಿತ್ತು.

೨೦೧೮ ರಲ್ಲಿ ಚುನಾವಣಾ ಪ್ರಚಾರಕ್ಕಿಳಿಯುವಂತೆ ಗುರಪ್ಪ ನಾಯ್ಡು ಅವರಿಗೆ ಹೇಳಿ, ಮರುದಿನವೇ ಬಿಜೆಪಿಯಿಂದ ಹೆಸರೇ ಇಲ್ಲದ ವ್ಯಕ್ತಿಯೊಬ್ಬರನ್ನು ತಂದು ಅಶೋಕ್ ಅವರ ವಿರುದ್ಧ ಕಣಕ್ಕಿಳಿಸಲಾಯಿತು. ಹೀಗಾಗಿ ಈ ಸಲ ಗುರಪ್ಪ ನಾಯ್ಡು ಟಿಕೆಟ್‌ಗಾಗಿ ಯತ್ನಿಸುತ್ತಿದ್ದರೂ ಡಿಕೆಶಿಗೆ ಮಾತ್ರ ಅಶೋಕ್ ಅವರನ್ನು ಮಣಿಸಲು ಹೆವಿ ವೇಯ್ಟ್ ನಾಯಕರೊಬ್ಬರು ಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಅವರು ಪಿಜಿಆರ್ ಸಿಂಧ್ಯಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಅಶೋಕ್ ಅವರ ವಿರುದ್ಧ ನೀವು
ನಿಲ್ಲಿ, ಇಲ್ಲವೇ ನಿಮ್ಮ ಪುತ್ರಿಯನ್ನು ಕಣಕ್ಕಿಳಿಸಿ, ನಿಶ್ಚಿತವಾಗಿ ನೀವು ಗೆಲ್ಲುತ್ತೀರಿ ಎಂದು ಡಿಕೆಶಿ ಹೇಳಿದಾಗ,ಯೋಚಿಸಿ ಹೇಳುತ್ತೇನೆ ಎಂದು ಸಿಂಧ್ಯಾ ಹೇಳಿದ್ದಾರಾದರೂ ಅವರು ಸ್ಪರ್ಧಿಸುವ ಸಾಧ್ಯತೆ ಜಾಸ್ತಿ.

ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಪಿಜಿಆರ್ ಸಿಂಧ್ಯಾ ಅವರಿಗೆ ನಿಶ್ಚಿತವಾಗಿ ದೊಡ್ಡ ಹೆಸರಿದೆ. ಒಂದು ಕಾಲದಲ್ಲಿ ಕನಕಪುರ ಸಾಮ್ರಾಜ್ಯವನ್ನು ಆಳಿದ್ದ ಸಿಂಧ್ಯಾ ಇತ್ತೀಚಿನ ದಿನಗಳಲ್ಲಿ ಹಿಂದೆ ಸರಿದಿದ್ದರಾದರೂ ಈಗಲೂ ರಥ ಹತ್ತಿ ಬಂದರೆ ಎದುರಾಳಿಗಳನ್ನು ನಡುಗಿಸುವ ಪವರ್ ಅವರಿಗಿದೆ. ಸಿಂಧ್ಯಾ ಅವರನ್ನೇ ಕಣಕ್ಕಿಳಿಸಬೇಕು ಅಂತ ಡಿಕೆಶಿ ಬಯಸಲು ಹಲವು ಕಾರಣಗಳಿವೆ.ಈ ಪೈಕಿ ಕ್ಷೇತ್ರ ದಲ್ಲಿರುವ ಒಕ್ಕಲಿಗ ಮತಗಳ ಪೈಕಿ ಅರ್ಧದಷ್ಟ ನ್ನಾದರೂ ಸೆಳೆಯಬಹುದು ಎಂಬ ವಿಶ್ವಾಸ.

ಎಷ್ಟಾದರೂ ಡಿಕೆಶಿ ಕಾಂಗ್ರೆಸ್ ಪಕ್ಷದ ಸಿಎಂ ಕ್ಯಾಂಡಿಡೇಟು. ಇನ್ನು ಕ್ಷೇತ್ರದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಮತಗಳಿವೆ. ಸಾಂಪ್ರದಾಯಿಕವಾಗಿ ಈ ಮತಗಳು ಬಿಜೆಪಿಗೆ ದಕ್ಕುತ್ತಿದ್ದವಾದರೂ ಈ ಬಾರಿ ಚಿತ್ರ ಬದಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕ ದುರ್ಬಲರಿಗೆ ನೀಡುವ ಮೀಸಲಾತಿಯಲ್ಲಿ ದೊಡ್ಡ ಪಾಲು ಕಿತ್ತು ಬೇರೆಯವರಿಗೆ ಹಂಚಿರುವ ಬಿಜೆಪಿ ಸರಕಾರದ ಕ್ರಮ ಬ್ರಾಹ್ಮಣರ ಆಕ್ರೋಶಕ್ಕೆ ಗುರಿಯಾಗಿದೆ. ಈ ಮಧ್ಯೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬ್ರಾಹ್ಮ ಣರು ಬಿಜೆಪಿ ವಿರುದ್ಧ ನಿಲ್ಲುವ ಸೂಚನೆಗಳು ಕಾಣುತ್ತಿದ್ದು, ಇದಕ್ಕೆ ಸ್ಥಳೀಯ ಅಂಶಗಳು ಕಾರಣವಾದರೂ ಒಟ್ಟಾರೆಯಾಗಿ ಇಡೀ ರಾಜ್ಯದಲ್ಲಿ ಅದರ ಬಿಸಿ ಶುರುವಾಗಿದೆ. ಮತ್ತು ಈ ಅಂಶವೇ ಬಿಜೆಪಿಗೆ ಒಂದು ಮಟ್ಟದಲ್ಲಿ ಹೊಡೆತ ಕೊಡಲಿದೆ.

ಉಳಿದಂತೆ ಮುಸ್ಲಿಮರು, ಪರಿಶಿಷ್ಟರು ಸೇರಿದಂತೆ ಕ್ಷೇತ್ರದಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಅಹಿಂದ ವರ್ಗಗಳ ಮತದಾರರಿದ್ದಾರೆ. ಇದು ಕೂಡ ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಆಗಿ ಬಿಜೆಪಿಯ ಆರ್. ಅಶೋಕ್ ಅವರಿಗೆ ಟೈಟ್ ಆಗಲಿದೆ ಎಂಬುದು ಡಿಕೆಶಿ ಲೆಕ್ಕಾಚಾರ. ಯಾವಾಗ ಅಶೋಕ್ ತಮ್ಮ ಕ್ಷೇತ್ರದಲ್ಲೇ ಪ್ರಬಲ ಪೈಪೋಟಿಯನ್ನು ಎದುರಿಸುತ್ತಾರೋ?ಆಗ ಸಹಜವಾಗಿಯೇ ಅವರು ತಮ್ಮ ಗಮನವನ್ನು ಇಲ್ಲಿ ಕೇಂದ್ರೀಕರಿಸುತ್ತಾರೆ. ಆ ಮೂಲಕ ಬೇರೆ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಅವರ ಶಕ್ತಿ ಉಡುಗುತ್ತದೆ ಎಂಬುದು ಡಿಕೆಶಿ ಯೋಚನೆ.

ಅರ್ಥಾತ್, ಕಳೆದ ಮೂರು ದಶಕಗಳಿಂದ ನಿರುಮ್ಮಳವಾಗಿ ಗೆದ್ದು ಬರುತ್ತಿರುವ ಆರ್. ಅಶೋಕ್ ಇದೇ ಮೊದಲ ಬಾರಿ ಪ್ರಬಲ
ಪೈಪೋಟಿ ಎದುರಿಸುವುದು ನಿಶ್ಚಿತ. ಅಂದ ಹಾಗೆ ರಾಜಕಾರಣದಲ್ಲಿ ಪಾಳೇಕರ್ ಅವರ ಶೂನ್ಯ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಂಡವರು ಸಿಂಧ್ಯಾ. ಅರ್ಥಾತ್, ಬೆನ್ನ ಹಿಂದೆ ನಿರ್ದಿಷ್ಟ ಜಾತಿಯ ಬೆಂಬಲವಿಲ್ಲದೆ ಬೆಳೆದು ನಿಂತವರು. ೧೯೮೩ ರ ವಿಧಾನಸಭಾ ಚುನಾವಣೆ ಎದುರಾದಾಗ ಎಸ್.ಆರ್. ಬೊಮ್ಮಾಯಿ ಅವರು ಸಿಂಧ್ಯಾ ಅವರನ್ನು ಕರೆಸಿ, ಕನಕಪುರ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಿಷ್ಠವಾಗಿಲ್ಲ. ಅಲ್ಲಿ ಶ್ರೀನಿವಾಸಮೂರ್ತಿ ಇದ್ದರೂ ಪ್ರಯೋಜನವಾಗುತ್ತಿಲ್ಲ.

ಹೀಗಾಗಿ ನೀವೇ ಅಲ್ಲಿಂದ ಸ್ಪಽಸಿ ಎಂದು ಹೇಳಿದ್ದರಂತೆ. ಅಷ್ಟೊತ್ತಿಗಾಗಲೇ ಸಿಂಧ್ಯಾ ಅವರು ಕ್ಷೇತ್ರದಿಂದ ದೂರವಾಗಿ ಹದಿನೈದು ವರ್ಷ ಕಳೆದಿತ್ತು.ಆದರೂ ಪಟ್ಟು ಹಿಡಿದ ಸಿಂಧ್ಯಾ ಹಗಲು-ರಾತ್ರಿ ದುಡಿದು ಪಕ್ಷ ಕಟ್ಟಿದರು. ಚುನಾವಣೆಯಲ್ಲಿ
ಗೆಲುವು ಸಾಧಿಸಿದರು. ನಂತರ ಅಧಿಕಾರಕ್ಕೆ ಬಂದ ಜನತಾರಂಗ ಸರಕಾರದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ
ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟು ಗೆಲ್ಲಿಸಿಯೂ ಬಿಟ್ಟರು. ಮುಂದೆ ಡಿಕೆಶಿ ಯುಗ ಪ್ರಾರಂಭವಾಗುವವರೆಗೆ ಕನಕಪುರ ಸಾಮ್ರಾಜ್ಯ
ವನ್ನು ಅಕ್ಷರಶಃ ಆಳಿದವರು ಸಿಂಧ್ಯಾ. ಈಗ ಪುನ: ಅವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಅವರು ಕಣಕ್ಕಿಳಿದರೆ ಅಶೋಕವನ ಅಸ್ತವ್ಯಸ್ತವಾಗುವುದು ಗ್ಯಾರಂಟಿ.

ಬಿಜೆಪಿ ಕೋಟೆಯಲ್ಲಿ ಕಂದಕ
ಈ ಮಧ್ಯೆ ಪದೇ ಪದೇ ಮೋದಿ-ಅಮಿತ್ ಷಾ ಜೋಡಿ ಕೊಡುತ್ತಿರುವ ಟಾನಿಕ್ ಕುಡಿದು ಬಿಜೆಪಿ ನಾಯಕರು ಎದೆ ಉಬ್ಬಿಸು ತ್ತಿದ್ದರೂ, ಬಿಜೆಪಿ ಕೋಟೆಯ ಎರಡು ಭಾಗಗಳಲ್ಲಿ ದೊಡ್ಡ ಕಂದಕ ಕಾಣುತ್ತಿದೆಯಂತೆ. ಈ ಪೈಕಿ ಮೊದಲನೆಯ ಕಂದಕ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಕಾಣುತ್ತಿದ್ದರೆ, ಮತ್ತೊಂದು ಕಂದಕ ಮುಂಬಯಿ-ಕರ್ನಾಟಕ ಭಾಗದಲ್ಲಿ ಕಾಣುತ್ತಿದೆ. ಇತ್ತೀಚೆಗೆ ಹೈದ್ರಾಬಾದ್-ಕರ್ನಾಟಕದ ಜಿಲ್ಲೆಗಳಲ್ಲಿ ಬಿಜೆಪಿಯ ಶಕ್ತಿ ಏರಿದಂತೆ ಕಾಣುತ್ತಿತ್ತಾದರೂ ಇದೀಗ ಇದ್ದಕ್ಕಿದ್ದಂತೆ ಆ ಭಾಗದ ಹಲ ಪರಿಶಿಷ್ಟ ನಾಯಕರು ಕಾಂಗ್ರೆಸ್ ಕಡೆ ವಲಸೆ ಹೋಗುತ್ತಿದ್ದಾರೆ.

ಅರ್ಥಾತ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜಾದೂ ಆ ಭಾಗದಲ್ಲಿ ಶುರುವಾಗಿದೆ. ತಾವು ಎಐಸಿಸಿ ಅಧ್ಯಕ್ಷರಾಗಿ
ರುವಾಗ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ತಾವು ಶಕ್ತರಲ್ಲ ಎಂದು ತಾನೇ? ಹಾಗಂತ ಯೋಚಿಸಿ ರುವ ಖರ್ಗೆ ಆ ಭಾಗದ ರಾಜಕೀಯದ ಮೇಲೆ ಅತೀವ ಗಮನ ಕೇಂದ್ರೀಕರಿ ಸಿದ್ದಾರೆ. ಈ ಮಧ್ಯೆ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದ್ದೇವೆ. ಒಳಮೀಸಲಾತಿ ಕೊಟ್ಟಿದ್ದೇವೆ. ಹೀಗಾಗಿ ನಮಗೆ ದಲಿತ ಮತಬ್ಯಾಂಕಿನ ಮೇಜರ್ ಷೇರು ಬರುತ್ತದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದರೂ, ಅದೇ ಪಕ್ಷದ ಆಂತರ್ಯದಲ್ಲಿ ಒಡಕಿನ ಧ್ವನಿ ಕೇಳುತ್ತಿದೆ.

ಮೀಸಲಾತಿ ಹೆಚ್ಚಳ ಮಾಡುವ, ಒಳಮೀಸಲಾತಿ ನೀಡುವ ಕ್ರಮಗಳಿಂದ ದಲಿತರಿಗೆ ತಕ್ಷಣ ಲಾಭವಾಗುವುದಿಲ್ಲ. ಅದರ
ಎಫೆಕ್ಟ್ ಏನಿದ್ದರೂ ಮುಂದಿನ ವರ್ಷಗಳಲ್ಲಿ ಕಾಣುತ್ತದೆ. ಹೀಗಾಗಿ ತಕ್ಷಣವೇ ಇಂತಹ ನಿರ್ಧಾರಗಳು ಲಾಭ ತಂದು ಕೊಡುತ್ತವೆ ಎಂಬುದು ಭ್ರಮೆ ಎಂಬುದು ಕಮಲ ಪಾಳೆಯದ ಅನುಭವಿ ನಾಯಕರೊಬ್ಬರ ಮಾತು. ಇದೇ ರೀತಿ ಮುಂಬಯಿ-ಕರ್ನಾಟಕ ಭಾಗದಲ್ಲೂ ಬಿಜೆಪಿಗೆ ಹಾನಿಯಾಗುವ ಸಾಧ್ಯತೆ ಜಾಸ್ತಿ. ಯಾಕೆಂದರೆ ಬಿಜೆಪಿಯ ಬಗ್ಗೆ ಲಿಂಗಾಯತ ಸಮುದಾಯದಲ್ಲಿ ಆಕ್ರೋಶ ಶುರುವಾಗಿದೆ.

ಇಂತಹ ಆಕ್ರೋಶವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಎಷ್ಟು ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದರೆ ಈ ಬಾರಿ ಆ ಭಾಗದ ಬಹುತೇಕ
ಕ್ಷೇತ್ರಗಳಲ್ಲಿ ಲಿಂಗಾಯತರು ಸ್ಥಳೀಯ ಅಗತ್ಯಕ್ಕನುಗುಣವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ. ಅರ್ಥಾತ್, ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಲಿಂಗಾಯತ ಮತ ಬ್ಯಾಂಕಿನ ಮೇಜರ್ ಷೇರು ಕಾಂಗ್ರೆಸ್ ಪಕ್ಷದ ಪಾಲಾಗಲಿದೆ ಎಂಬುದು ಸ್ವತಃ ಬಿಜೆಪಿ ಪಾಳೆಯದ ಮಾತು.

ಅಮಿತ್ ಷಾ ೯೦+೩೫ ಸೂತ್ರ ಈ ಮಧ್ಯೆ ರಾಜ್ಯ ಬಿಜೆಪಿಯ ಬಹುತೇಕ ನಾಯಕರು ಇದ್ದಕ್ಕಿದ್ದಂತೆ ಜೆಡಿಎಸ್ ವಿರುದ್ಧ ಕೂಗಾಡುವುದನ್ನು ನಿಲ್ಲಿಸಿ ದ್ದಾರೆ.ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರಣ. ಮೊನ್ನೆ ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ, ಚುನಾವಣೆಯ ನಂತರ ಯಾರೊಬ್ಬರೂ ಸ್ವಯಂಬಲದ ಮೇಲೆ ಸರ್ಕಾರ ರಚಿಸುವುದು ಕಷ್ಟವಾಗಬಹುದು. ಹೀಗಾಗಿ ಫಲಿತಾಂಶ ಬಂದ ನಂತರ ಎದುರಾಗುವ ಸನ್ನಿವೇಶವನ್ನು ನಿಭಾಯಿಸಬೇಕೆಂದರೆ ಜೆಡಿಎಸ್ ನಾಯಕರ ಬಗ್ಗೆ ಟೀಕಿಸುವು ದನ್ನು ಬಿಡಿ ಎಂದು ಹೇಳಿದ್ದಾರಂತೆ.

ಇದೇ ರೀತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಲ್ಲಿ ಜೆಡಿಎಸ್ ಪಕ್ಷವೇ ನೇರ ಎದುರಾಳಿಯೋ? ಅಲ್ಲೆಲ್ಲ ಜೆಡಿಎಸ್ ಪಕ್ಷವನ್ನು ನಾವು ಬೆಂಬಲಿಸುವುದೇ ಬೆಟರ್ ಎಂದಿದ್ದಾರಂತೆ. ಅರ್ಥಾತ್, ಕಾಂಗ್ರೆಸ್-ಜೆಡಿಎಸ್ ಮಧ್ಯೆ ಪೈಪೋಟಿ ಇರುವ ಜಾಗಗಳಲ್ಲಿ ನಾವು ಹೆಚ್ಚುಗಾರಿಕೆ ತೋರಲು ಹೋದರೆ ಅದು ಕಾಂಗ್ರೆಸ್‌ಗೇ ಲಾಭವಾಗಬಹುದು. ಹೀಗೆ ಕಾಂಗ್ರೆಸ್‌ಗೆ ಲಾಭ ಮಾಡಿಕೊಡುವುದಕ್ಕಿಂತ ಜೆಡಿಎಸ್ ಪಕ್ಷಕ್ಕೆ ಲಾಭ ಮಾಡಿ ಕೊಡುವುದು ಒಳ್ಳೆಯದು ಎಂಬುದು ಅಮಿತ್ ಷಾ ಇಂಗಿತ.

ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಯ ನಂತರ ಮೈತ್ರಿ ಸರ್ಕಾರ ಮಾಡಿಕೊಳ್ಳುವುದು ಬೇಡ ಅಂತ ಅಮಿತ್ ಷಾ ಅವರೇ ಯೋಚಿಸಿದ್ದರು. ಆದರೆ ಈಗ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವುದು ಕಷ್ಟ ಅನ್ನಿಸುತ್ತಾ ಹೋದಂತೆಲ್ಲ, ಕುರುಡುಗಣ್ಣಿಗಿಂತ ಮೆಳ್ಳುಗಣ್ಣೇ ವಾಸಿ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ.
ಇದೇ ಮೂಲಗಳ ಪ್ರಕಾರ, ನಾಲ್ಕನೇ ಹಂತದ ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಅಮಿತ್ ಷಾ ಅವರು, ಬಿಜೆಪಿಗೆ ತೊಂಬತ್ತು, ಜೆಡಿಎಸ್ ಪಕ್ಷಕ್ಕೆ ಮೂವತ್ತೈದು ಸೀಟು ಬರಬಹುದು ಅಂತ ಲೆಕ್ಕ ಹಾಕಿದ್ದಾರಂತೆ.