Tuesday, 13th May 2025

ಮುಂಬೈ ಇಂಡಿಯನ್ಸ್ – ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪಂದ್ಯ: ವನೀಂದು ಹಸರಂಗ ಅಲಭ್ಯ

ಬೆಂಗಳೂರು: ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲು ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗಣ್ಯ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಶ್ರೀಲಂಕಾದ ಆಲ್‌ರೌಂಡರ್ ವನೀಂದು ಹಸರಂಗ ಏಪ್ರಿಲ್ 9ರ ಬಳಿಕ ಲಭ್ಯವಾಗಲಿದ್ದಾರೆ ಎಂದು ಮುಖ್ಯ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.

ಭಾನುವಾರ ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಹಸರಂಗ ಕಳೆದ ಸೀಸನ್‌ನಲ್ಲಿ ಮುಂಚೂಣಿ ಬೌಲರ್ ಆಗಿದ್ದರು. 16 ಪಂದ್ಯಗಳಲ್ಲಿ 16.53 ಸರಾಸರಿಯೊಂದಿಗೆ 26 ವಿಕೆಟ್ ಕಿತ್ತಿದ್ದ ಅವರು ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳಲ್ಲಿ ಎರಡನೇ ಸ್ಥಾನದಲ್ಲಿದ್ದರು. ಹಸರಂಗ ಈ ತಿಂಗಳ 9ರ ಬಳಿಕವಷ್ಟೇ ಲಭ್ಯವಾಗಲಿದ್ದಾರೆ.

ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಸಲ್‌ವುಡ್ ಕೂಡಾ ಟೂರ್ನಿಯ ಮೊದಲರ್ಧದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಹಿಮ್ಮಡಿ ನೋವಿನಿಂದಾಗಿ ರಜತ್ ಪಾಟಿದಾರ್ ಕೂಡಾ ಮೊದಲ ಅರ್ಧದಷ್ಟು ಪಂದ್ಯಗಳಲ್ಲಿ ಆಡುವುದು ಅಸಾಧ್ಯ ಎಂದು ವಿವರಿಸಿದರು.