Wednesday, 14th May 2025

ವಿಗ್ರಹ ವಿಸರ್ಜನೆಯ ವೇಳೆ ಕಲ್ಲು ತೂರಾಟ: ಆರು ಮಂದಿಗೆ ಗಾಯ

ಸಾಹಿಬ್‍ಗಂಜ್: ಜಾರ್ಖಂಡ್‍ನ ಸಾಹಿಬ್‍ಗಂಜ್ ಜಿಲ್ಲೆಯಲ್ಲಿ ವಿಗ್ರಹ ವಿಸರ್ಜನೆಯ ವೇಳೆ ನಡೆದ ಕಲ್ಲು ತೂರಾಟ ದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ ಎರಡು ಕೋಮುಗಳ ನಡುವಿನ ಘರ್ಷಣೆಯಲ್ಲಿ ಹಲವಾರು ಅಂಗಡಿಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ.

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 400 ಕಿಮೀ ದೂರದಲ್ಲಿರುವ ಸಾಹಿಬ್‍ಗಂಜ್ ಪಟ್ಟಣದಲ್ಲಿ ದುರ್ಗಾ ವಿಗ್ರಹ ನಿಮಜ್ಜನ ಮೆರವಣಿಗೆ ನಡೆಸಿದಾಗ ಈ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಯಾದವ್ ತಿಳಿಸಿದ್ದಾರೆ.

ಕುಳಿಪಾರ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಇಟ್ಟಿಗೆಗಳನ್ನು ಎಸೆಯಲಾಗಿದೆ. ಸಾಹಿಬ್‍ಗಂಜ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಜೇಂದ್ರ ಕುಮಾರ್ ದುಬೆ ಅವರ ತಲೆಗೆ ಗಾಯಗಳಾಗಿವೆ.

ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮತ್ತಷ್ಟು ಘರ್ಷಣೆಗಳನ್ನು ತಡೆಯಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಯಾದವ್ ತಿಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಕಾರ್ಯಾಚರಣೆ ನಡೆಸಲಾಗಿದೆ.