ವರ್ತಮಾನ
maapala@gmail.com
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅತಂತ್ರ ವಿಧಾನಸಭೆ ಸೃಷ್ಟಿ ಯಾಗುವ ಮಾತು ದಟ್ಟವಾಗಿದೆ. ಒಂದೊಮ್ಮೆ ಅದು ನಿಜವಾದರೆ ರಾಜ್ಯ ಮತ್ತೊಮ್ಮೆ ಮೈತ್ರಿ ಸರಕಾರವನ್ನು ಕಾಣಬೇಕಾಗುತ್ತದೆ. ಇಲ್ಲಿಯವರೆಗೆ ಮೈತ್ರಿ ಸರಕಾರಗಳಿಂದ ರಾಜ್ಯ ಅದೆಷ್ಟು ಸಮಸ್ಯೆಗೆ ತುತ್ತಾಗಿದೆ ಎಂಬುದು ಬಹಿರಂಗ ಸತ್ಯ.
ಕಳೆದ ಒಂದು ತಿಂಗಳಿನಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಬಂದಾಗಲೆಲ್ಲ ಹೇಳುತ್ತಿರುವ ಪ್ರಮುಖ ಮಾತು, ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರಬಾರದು ಎಂಬುದು. ರಾಜ್ಯದ ಪ್ರಗತಿಗೆ ಮಾರಕವಾಗುವ ಮೈತ್ರಿ ಸರಕಾರ ಬೇಡ. ಅವಕಾಶವಾದಿ, ಸ್ವಾರ್ಥ ಮೈತ್ರಿಯ ಸರಕಾರ ಗಳನ್ನು ಅನೇಕ ಬಾರಿ ನೋಡಿದ್ದೇವೆ.
ಇಂಥ ಮೈತ್ರಿ ಸರಕಾರದಲ್ಲಿ ರಾಜ್ಯಕ್ಕೆ ಯಾವ ರೀತಿಯ ಕೆಟ್ಟ ಪರಿಸ್ಥಿತಿ ಬರುತ್ತದೆ ಎಂಬುದನ್ನು ಗಮನಿಸಿದ್ದೇವೆ. ಹೀಗಾಗಿಯೇ ಬಿಜೆಪಿಯ ಸ್ಥಿರ ಸರಕಾರ ಅಧಿಕಾರಕ್ಕೆ ಬರಲು ಆಶೀರ್ವಾದ ಮಾಡಿ ಎಂದು ಪದೇ ಪದೆ ಹೇಳುತ್ತಿದ್ದಾರೆ. ಆಡಳಿತಾರೂಢ ಪಕ್ಷವಾಗಿ ಬಿಜೆಪಿಯ ವರಿಷ್ಠರು ಈ ರೀತಿ ಹೇಳುತ್ತಿರುವುದೇಕೆ? ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವು ದಿಲ್ಲವೇ ಎಂಬ ಪ್ರಶ್ನೆ ಎದುರಾಗಿತ್ತು.
ಆದರೆ, ಕಳೆದ 2-3 ದಿನಗಳಿಂದ ಹೊರಬರುತ್ತಿರುವ ಸಮೀಕ್ಷಾ ವರದಿಗಳನ್ನು ಗಮನಿಸಿದಾಗ ಬಿಜೆಪಿ ವರಿಷ್ಠರ ಮಾತುಗಳಿಗೆ ಕಾರಣ ಸಿಕ್ಕಿದೆ. ಒಂದು ಸಂಸ್ಥೆ ಹೊರತುಪಡಿಸಿ ಉಳಿದೆಲ್ಲಾ ಸಂಸ್ಥೆಗಳ ಸಮೀಕ್ಷಾ ವರದಿಗಳು ಅತಂತ್ರ ಸರಕಾರದ ಭವಿಷ್ಯ ನುಡಿದಿವೆ. ಈ ಸಮೀಕ್ಷಾ ವರದಿಗಳಿಂದಾಗಿ ಜೆಡಿಎಸ್‌ನಲ್ಲಿ ಆಶಾಭಾವನೆ ಹೆಚ್ಚಿದೆ. ಯಾರೇ ಸರಕಾರ ರಚಿಸುವುದಿದ್ದರೂ ನಮ್ಮ ಬೆಂಬಲ ಬೇಕು ಎಂಬ ಮಾತು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ.
ಹೌದು, ಮೈತ್ರಿ ಸರಕಾರದಿಂದಾಗಿ ರಾಜ್ಯ ಯಾವೆಲ್ಲ ಸಮಸ್ಯೆಗಳನ್ನು ಎದುರಿಸಿದೆ ಎಂಬುದು ಗೊತ್ತಿದೆ. ಉತ್ತಮ ಆಡಳಿತ ನೀಡುವ ಮನಸ್ಸಿದ್ದರೂ, ಅತ್ಯುತ್ತಮ ಯೋಜನೆಗಳನ್ನು ಪ್ರಕಟಿಸಿದರೂ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದೆ ಮೈತ್ರಿ ಮಾಡಿಕೊಂಡ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಾ ಸರಕಾರವನ್ನೇ ಉರುಳಿಸಿದ ಉದಾಹರಣೆಗಳು ರಾಜ್ಯದಲ್ಲಿ ಹಲವು ಬಾರಿ ಸಿಕ್ಕಿವೆ. ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಸ್ಥಳೀಯ ಪಕ್ಷದ ನಡುವಿನ ಪೈಪೋಟಿ, ಒಬ್ಬರನ್ನು ಅಧಿಕಾರದಿಂದ ದೂರವಿಡಲು ಇನ್ನಿಬ್ಬರು ಮಾಡಿಕೊಳ್ಳುವ ಅಪವಿತ್ರ ಮೈತ್ರಿಯಿಂದಾಗಿ ಆಡಳಿತ ಹದಗೆಟ್ಟಿದ್ದನ್ನು ರಾಜ್ಯದ ಜನರು ಕಣ್ಣಾರೆ ಕಂಡಿದ್ದಾರೆ. ಈ ಅಪವಿತ್ರ ಮೈತ್ರಿಯಿಂದಾಗಿಯೇ ರಾಜ್ಯದಲ್ಲಿ ಯಾವುದೇ ಸಮ್ಮಿಶ್ರ ಸರಕಾರ ಪೂರ್ಣ ಪ್ರಮಾಣದ ಅಧಿಕಾರ ನಡೆಸಿಲ್ಲ.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಐದು ವರ್ಷ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಹತ್ತು ವರ್ಷ ಪೂರ್ಣ ಅಧಿಕಾರ ಅನುಭವಿಸಿದ್ದನ್ನು ಹೊರತುಪಡಿಸಿ ಇನ್ಯಾವುದೇ ಮೈತ್ರಿ ಸರಕಾರ ಅವಽ ಪೂರೈಸಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಯುಗ ಆರಂಭವಾಗಿದ್ದು 1983ರಲ್ಲಿ. ಅದುವರೆಗೆ ಕಾಂಗ್ರೆಸ್ ಮಾತ್ರ ಅಧಿಕಾರ ನಡೆಸಿತ್ತು. 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ 9 ಸ್ಥಾನ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಬಹುಮತ ಸಿಗಲಿಲ್ಲ. ಹೀಗಾಗಿ ಜನತಾ ಪಕ್ಷಕ್ಕೆ 18 ಸ್ಥಾನ ಗಳಿಸಿದ್ದ ಬಿಜೆಪಿ ಬಾಹ್ಯ ಬೆಂಬಲ ಘೋಷಿಸಿತ್ತು. ಇದರ ಜತೆಗೆ ಎಡಪಕ್ಷಗಳು ಹಾಗೂ 16 ಪಕ್ಷೇತರರು ಕೂಡ ಸರಕಾರ ರಚಿಸಲು ಬೆಂಬಲ ಸೂಚಿಸಿ ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದವು.
ಆದರೆ, 1984ರ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಹೀನಾಯ ಸೋಲು ಅನುಭವಿಸಿದ್ದರಿಂದ ರಾಮಕೃಷ್ಣ ಹೆಗಡೆ ವಿಧಾನಸಭೆ ವಿಸರ್ಜಿಸಿದರು. ಇದರಿಂದ ಸಮ್ಮಿಶ್ರ ಸರಕಾರದ ಪತನಗೊಂಡಿತು. ಸರಕಾರ ಎರಡು ವರ್ಷ ಪೂರೈಸಲು ಇನ್ನೂ 11 ದಿನ ಇರುವಾಗಲೇ ಮೈತ್ರಿ ಮುರಿದು ಬಿತ್ತು. ನಂತರ 2004ರವರೆಗೆ ಸ್ಥಿರ ಸರಕಾರ ಅಧಿಕಾರದಲ್ಲಿತ್ತು. ಆ
ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಮತ್ತಿತರರ ಹೋರಾಟದಿಂದಾಗಿ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿ ಕೊಂಡಿತ್ತು. ಆ ಪಕ್ಷಕ್ಕೆ ಇನ್ನಷ್ಟು ಸಮಯ ನೀಡಿದರೆ ಅಧಿಕಾರಕ್ಕೂ ಬರಬಹುದು ಎಂಬ ಕಾರಣಕ್ಕೆ 2004ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣ ಅವರು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಅತಿಯಾದ ಆತ್ಮ
ವಿಶ್ವಾಸದೊಂದಿಗೆ ಐದು ತಿಂಗಳ ಮೊದಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಅವಕಾಶ ಮಾಡಿಕೊಟ್ಟರು.
ಆದರೆ, ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. 79 ಸ್ಥಾನಗಳೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಕಾಂಗ್ರೆಸ್‌ಗೆ 65 ಮತ್ತು ಜೆಡಿಎಸ್‌ಗೆ ೫೮ ಸ್ಥಾನಗಳು ಲಭಿಸಿದವು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಲಾಯಿತು. ಆದರೆ, ಸರಕಾರ ರಚನೆಯಾಗುತ್ತಲೇ ಅಸಮಾಧಾನವೂ ಶುರುವಾಗಿತ್ತು.
ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿ ದರು ಎಂಬುದು ಇದಕ್ಕೆ ಕಾರಣ. ಇದು ಜೆಡಿಎಸ್ ವಿಭಜನೆಗೂ ಕಾರಣವಾಯಿತು. 2006ರಲ್ಲಿ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ನ ದೊಡ್ಡ ಗುಂಪು ಸರಕಾರದಿಂದ ಹೊರಬಂದು ಸಮ್ಮಿಶ್ರ ಸರಕಾರ ಉರುಳಿಸಿತು. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಜತೆ ಸೇರಿ ಜೆಡಿಎಸ್ ಸರಕಾರ ರಚನೆ ಮಾಡಿತ್ತು. ಎರಡೂ ಪಕ್ಷಗಳಿಗೆ ತಲಾ 20 ತಿಂಗಳು ಅಧಿಕಾರ ಹಂಚಿಕೆಯ ಒಪ್ಪಂದವಾಗಿತ್ತು.
ಆದರೆ, 20 ತಿಂಗಳ ನಂತರ ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡಲು ಒಪ್ಪದ ಕಾರಣ ಮೈತ್ರಿ ಸರಕಾರಕ್ಕೂ ೨೦೦೮ರಲ್ಲಿ ತೆರೆ ಬಿದ್ದು ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿಲ್ಲ. 110 ಸ್ಥಾನಗಳನ್ನು ಗೆದ್ದು ಬಳಿಕ ಪಕ್ಷೇತರರನ್ನು ಸೇರಿಸಿಕೊಂಡು ಸರಕಾರ ರಚನೆ ಮಾಡಿತು. ಬಿಜೆಪಿ ಸರಕಾರ 5 ವರ್ಷ ಪೂರ್ಣಗೊಳಿಸಿತಾದರೂ ಮೂವರು ಮುಖ್ಯಮಂತ್ರಿಗಳನ್ನು ಕಂಡಿತು. ಅಧಿಕಾರ ಉಳಿಸಿಕೊಳ್ಳಲು ಬ್ಲ್ಯಾಕ್‌ಮೇಲ್‌ಗೆ ಬೆದರಿ ಭ್ರಷ್ಟಾಚಾರದ ಕುರಿತು ಮೌನಕ್ಕೆ ಶರಣಾಗಿದ್ದೇ ಇಷ್ಟಕ್ಕೆಲ್ಲ ಕಾರಣ ವಾಯಿತು. ಇದರ ಪರಿಣಾಮ ೨೦೧೩ರಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ರಹದಾರಿ ಸಿಕ್ಕಿದಂತಾಯಿತು.
ಇನ್ನು 2018ರಲ್ಲೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತು. ಆದರೆ, ಇದು ಜೆಡಿಎಸ್ ಪಾಲಿಗೆ 2006ರಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಷ್ಟು ಸುಲಭದ ಮಾತಾಗಿರಲಿಲ್ಲ. ಆರಂಭದಿಂದಲೂ ಕಾಂಗ್ರೆಸ್ ಒಂದಲ್ಲಾ ಒಂದು ಕಾರಣಕ್ಕೆ ಸಮಸ್ಯೆ ಒಡ್ಡುತ್ತಲೇ ಇತ್ತು. ಕೊನೆಗೆ ಜೆಡಿಎಸ್‌ನ ಇಬ್ಬರೊಂದಿಗೆ ಕಾಂಗ್ರೆಸ್‌ನ 17 ಶಾಸಕರು ಸರಕಾರದಿಂದ ಹೊರಬಂದು ಬಿಜೆಪಿ ಸೇರಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ತಂದರು.
ಅಂದರೆ, ರಾಜ್ಯದಲ್ಲಿ ಇದುವರೆಗೆ ನಾಲ್ಕು ಬಾರಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ಎರಡು ಬಾರಿ ಜೆಡಿಎಸ್ -ಕಾಂಗ್ರೆಸ್, ತಲಾ ಒಂದು ಬಾರಿ ಜನತಾ ಪಕ್ಷ-ಬಿಜೆಪಿ ಮತ್ತು ಜೆಡಿಎಸ್-ಬಿಜೆಪಿ ಸೇರಿ ಸರಕಾರ ರಚಿಸಿದವು. ಬಿಜೆಪಿ ಜತೆ ಸೇರಿ ಜನತಾ ಪಕ್ಷ ಅಥವಾ ಜೆಡಿಎಸ್ ಸರಕಾರ ರಚಿಸಿದಾಗ ಮಿತ್ರಪಕ್ಷ ಬಿಜೆಪಿಯಿಂದ ಸರಕಾರಕ್ಕೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಜೆಡಿಎಸ್ ನ ಸ್ವಯಂಕೃತಾಪರಾಧದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆದರೆ, ಕಾಂಗ್ರೆಸ್ ಜತೆ ಸೇರಿ ಜೆಡಿಎಸ್ ಸರಕಾರ ರಚಿಸಿದಾಗ ಎರಡು ಪಕ್ಷಗಳ ಮಧ್ಯೆ ಆರಂಭದಿಂದಲೂ ಹೊಂದಾಣಿಕೆ ಇರಲಿಲ್ಲ.
2004ರಲ್ಲಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೂ ಜೆಡಿಎಸ್ ಬ್ಲ್ಯಾಕ್‌ಮೇಲ್ ಮುಂದುವರಿಸಿತ್ತು. ಹೀಗಾಗಿ ಜೆಡಿಎಸ್ ಒಡೆದು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿದ್ದರಿಂದ ಪಕ್ಷ ಉಳಿಸಿಕೊಳ್ಳಲು ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಲೇ ಬೇಕಾದ ಪರಿಸ್ಥಿತಿ ಜೆಡಿಎಸ್‌ಗೆ ಬಂದಿತ್ತು. 2018ರ ಮೈತ್ರಿ ವೇಳೆ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇದ್ದುದರಿಂದ ಹಲವು ಶಾಸಕರು ಬಂಡೆದ್ದು ಸರಕಾರದಿಂದ ಹೊರಬಂದಿದ್ದರು.
ಈ ಚುನಾವಣೆಯಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಸರಕಾರ ರಚಿಸಲು ಜೆಡಿಎಸ್ ಅನಿವಾರ್ಯ. ಇಂತಹ ಪರಿಸ್ಥಿತಿ ಎದುರಾದರೆ ಜೆಡಿಎಸ್ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಿಲ್ಲ. ಬಿಟ್ಟು ಕೊಟ್ಟರೂ ಮೈತ್ರಿ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿ ವರಿಷ್ಠರು ಪ್ರತಿ ಬಾರಿಯೂ ಮೈತ್ರಿ ಸರಕಾರ ಬೇಡ ಎನ್ನುತ್ತಿರುವುದು. ಆದರೆ, ರಾಜ್ಯದ ಮತದಾರರು ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
ಲಾಸ್ಟ್ ಸಿಪ್: ಮೈತ್ರಿ ಸರಕಾರದ ಮತ್ತೊಂದು ಹೆಸರೇ ಬ್ಲ್ಯಾಕ್‌ಮೇಲ್ ರಾಜಕಾರಣ.