Wednesday, 14th May 2025

ಸುಂದರಬನದಲ್ಲಿ ನಿರ್ಮಿತ ಹೋಟೆಲ್ ಧ್ವಂಸಕ್ಕೆ ಎನ್‌ಜಿಟಿ ನಿರ್ದೇಶನ

ವದೆಹಲಿ: ಪರಿಸರ ನಿಯಮಗಳನ್ನು ಉಲ್ಲಂಘಿಸಿ ಸುಂದರಬನದಲ್ಲಿ ನಿರ್ಮಿಸಿರುವ ಹೋಟೆಲ್ ಅನ್ನು ಧ್ವಂಸ ಗೊಳಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಪಶ್ಚಿಮ ಬಂಗಾಳದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಸುಂದರಬನದಲ್ಲಿ ಹೋಟೆಲ್‌ ನಿರ್ಮಿಸಲು ಅನುಮತಿ ನೀಡಿರುವುದಕ್ಕೆ ಪಶ್ಚಿಮ ಬಂಗಾಳ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರವು (ಡಬ್ಲ್ಯುಬಿಸಿಜೆಡ್‌ಎಂಎ) ಆಕ್ಷೇಪ ವ್ಯಕ್ತಪಡಿಸಿತ್ತು.

ಸುಂದರಬನವು ಕರಾವಳಿ ಪ್ರದೇಶವಾಗಿದ್ದು, ಅಲ್ಲಿ ಯಾವುದೇ ನಿರ್ಮಾಣಗಳಿಗೆ ಅನುಮತಿ ನೀಡಲಾಗದು ಎಂದು ನ್ಯಾಯಮೂರ್ತಿ ಎ.ಕೆ. ಗೋಯಲ್‌ ಅಧ್ಯಕ್ಷತೆಯ ನ್ಯಾಯಪೀಠವು ಹೇಳಿದೆ.

ಡಬ್ಲ್ಯುಬಿಸಿಜೆಡ್‌ಎಂಎ ಮತ್ತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನೊಳಗೊಂಡ ಜಂಟಿ ಸಮಿತಿಯು ಮೂರು ತಿಂಗಳೊಳಗೆ ಅಕ್ರಮ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಈ ಪ್ರದೇಶದಲ್ಲಿರುವ ಕಾಂಡ್ಲಾ ಕಾಡಿಗೆ ಬಲವಾದ ಗಾಳಿ ಮತ್ತು ಭಾರಿ ಅಲೆಗಳನ್ನು ತಡೆಯುವ ಶಕ್ತಿ ಇದೆ ಎಂದು ಹೇಳಿದೆ.