Monday, 12th May 2025

ಬ್ಲಾಕ್ ಅಂಡ್ ವೈಟ್ ಟಿವಿಯಿಂದ ಬಣ್ಣದ ಕಾರಿನವರೆಗೆ

ಯಶೋ ಬೆಳಗು

yashomathy@gmail.com

ಹಣವನ್ನೆಲ್ಲ ಜೊತೆಗೂಡಿಸಿ, ಕಷ್ಟಪಟ್ಟು ರವಿಯಿಂದ ಒಪ್ಪಿಗೆ ಪಡೆದು ಮೊಟ್ಟಮೊದಲ ಬಾರಿಗೆ ಅವರ ಅಮ್ಮನ ಜನ್ಮದಿನವಾದ ವರಮಹಾಲಕ್ಷ್ಮಿಯ ಹಬ್ಬದಂದು ಜಿ೧೦ ಅನ್ನುವ ಕಪ್ಪುಬಣ್ಣದ ಕಾರನ್ನು ಕಂತಿನ ಮೇಲೆಯೇ ಕೊಂಡು ಕೊಂಡೆ. Congrats ಹೇಳಿ ಸಿಹಿ ತಿಂದರಾದರೂ ನನ್ನ ಕಾರಿನಲ್ಲಿ ಕೂರುವ ಧೈರ್ಯ ಮಾಡಲಿಲ್ಲ.

ಬಾಲ್ಯದಲ್ಲಿ ಗಣೇಶೋತ್ಸವಗಳಲ್ಲಿ ಪರದೆ ಕಟ್ಟಿ ಸಿನೆಮಾ ತೋರಿಸುತ್ತಿದ್ದ ದಿನಗಳಲ್ಲಿ ನೆರೆಹೊರೆಯ ಗೆಳತಿಯರೊಂದಿಗೆ ತಮ್ಮ-ತಂಗಿಯರ ಜೊತೆಗೆ ನೋಡಿದ ನಿಜ ಹೇಳಲೇನು, ನನ್ನ ಜೀವ ನೀನು… ಎಂದು ಹಾಡುತ್ತಾ ಬಜಾಜ್ ಸ್ಕೂಟರ್ ಮೇಲೆ ಬರುವ ಡಾ. ರಾಜ್ ಚಿತ್ರ ಇಂದಿಗೂ ನನ್ನ ಮನದಂಗಳದಲ್ಲಿ ಅಚ್ಚಳಿಯದೆ ನಿಂತುಬಿಟ್ಟಿದೆ.

ಕನಸಿನ ಹುಡುಗನೆಂದರೆ ಹಿರಿಯರನ್ನು ಗೌರವಿಸುವ, ಚಟಗಳಿಲ್ಲದ, ಪ್ರೀತಿ, ಹಾಸ್ಯ, ಗಾಂಭೀರ್ಯ ಹಾಗೂ ಸಂಸ್ಕಾರದಿಂದ ಕೂಡಿದ ರಾಜಕುಮಾರ್ ಥರಾ ಇರಬೇಕು ಅನ್ನುವ ಕಲ್ಪನೆ ಕಟ್ಟಿಕೊಟ್ಟಿತ್ತು. ಇನ್ನು ಅಮ್ಮ ತರಕಾರಿ ತರಲು ಕಳಿಸಿದಾಗ ಮೆಲ್ಲಗೆ ಅಲ್ಲಿ ಕೆಲವೇ ಮನೆಗಳಲ್ಲಿದ್ದ ಟಿವಿ ನೊಡುತ್ತಿದ್ದವರ ನಡುವೆ ಇಣುಕುತ್ತಾ ಚಿತ್ರಮಂಜರಿಯ ತುಣುಕು ಗಳನ್ನು ನೋಡಿ ಬರು ತ್ತಿದ್ದುದು, ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಕನ್ನಡ ಚಿತ್ರಗಳನ್ನು ನೋಡಲು ಪಕ್ಕದ ಮನೆಗೆ ಸಿಂಗರಿಸಿಕೊಂಡು ಹೋಗು ತ್ತಿದ್ದುದು ಕಂಡು ಅಪ್ಪ ನಮ್ಮ ಮನೆಗೆ ಕಪ್ಪು-ಬಿಳುಪಿನ ದೊಡ್ಡ ಟಿವಿ ತಂದಾಗ ಆದ ಸಂತೋಷಕ್ಕೆ ಕೊನೆಯೇ ಇರಲಿಲ್ಲ.

ಕುಟುಂಬದ ಅಗತ್ಯಗಳನ್ನು ಪೂರೈಸಲು ಒಂದು ಸೂರು ಬೇಕಷ್ಟೆ ಅನ್ನುವುದು ಅಪ್ಪನ ಕಾನ್ಸೆ ಆದರೆ ಇರುವ ಮನೆ ಪುಟ್ಟದಿರಲಿ, ದೊಡ್ಡದಿರಲಿ ಚೆಂದಗಿರಬೇಕು ಅನ್ನುವುದು ನನ್ನ ಕಾನ್ಸೆ. ಆ ವೈರುಧ್ಯಗಳ ನಡುವೆ ಕೊನೆತನಕ ಇಬ್ಬರೂ ಕಾಂಪ್ರಮೈಸ್ ಆಗದೇ ಉಳಿದುಹೋದೆವು. ನನ್ನ ಜೀವನ ನನಗೆ ಬೇಕಾದ ಹಾಗೆ ಕಟ್ಟಿಕೊಂಡಿದ್ದೇನೆ. ಯಾರ ಹಂಗಿಗೂ ಬೀಳದೆ… ಅನ್ನುವ ಅವರ ನಿಷ್ಠುರದ ಸ್ವಭಾವವನ್ನು ಬದಲಿಸುವ ಧೈರ್ಯ ಯಾರಿಗೂ ಆಗಲಿಲ್ಲ.

ಹೀಗಾಗಿ ಅವರ ಪಾಡಿಗೆ ಅವರನ್ನು ಬಿಟ್ಟು ನಾನು ನನ್ನ ನಿಲುವುಗಳೊಂದಿಗೆ ಹೆಜ್ಜೆ ಮುಂದಿಡುತ್ತಾ ಹೋದೆ. ನಾನು ದುಡಿಯ ಲಾರಂಭಿಸಿದ ನಂತರ ಮನೆಗೆ ಕಂತಿನ ಮೂಲಕ ಕಲರ್ ಟಿವಿ ತಂದೆ. ಕೂರಲು ಹೊಸ ಫರ್ನಿಚರ್ ತಂದೆ. ಆದರೆ ಅಪ್ಪ ಒಂದು ದಿನಕ್ಕೂ ಅದರ ಮೇಲೆ ಕೂರಲಿಲ್ಲ. ಆದರೆ ಅವರಿಗೆ ಪಾರ್ಶ್ವವಾಯುವಾದಾಗ ಅನಿವಾರ್ಯವಾಗಿ ಅದರ ಮೇಲೆ ಕೂರು ವಂತಾಯ್ತು.

ಬಾಲ್ಯದಲ್ಲಿ ಸೈಕಲ್ ಕೂಡ ಕಲಿತಿರದ ನಾನು ಒಂದೇ ದಿನದಲ್ಲಿ two wheeler ಕಲಿತು ನನ್ನದೇ ಸ್ವಂತ ದುಡಿಮೆಯ ಹಣದಲ್ಲಿ ಮೊದಲ ಬಾರಿಗೆ ಸ್ಕೂಟಿ ಕೊಂಡೆ. ಅದನ್ನು ಶೋರೂಮಿನಲ್ಲಿ ರಿಜಿಸ್ಟರ್ ಮಾಡಿಸುವಾಗ ಜೊತೆಯಲ್ಲಿ ರವಿ ಇದ್ದರು. ಅದಕ್ಕೆ ಶೂರಿಟಿ ಹಾಕಿದವರೂ ಅವರೇ. ಆನಂತರ ಅದರಲ್ಲಿ ಎರಡ್ಮೂರು ಆಕ್ಸಿಡೆಂಟುಗಳಾದಾಗ ಸ್ವಲ್ಪ ಸ್ಟೆಬಿಲಿಟಿ ಇದ್ದಂಥಾ ಆಗ ತಾನೇ ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ಹೊಂಡಾ ಡಿಯೋ ಕೊಂಡೆ.

Car driving ಕಲಿಯುತ್ತೇನೆಂದಾಗ ರವಿ ಬಿಲ್ ಕುಲ್ ಒಪ್ಪಲಿಲ್ಲ. ಕಾರುಗಳಿವೆ, ಡ್ರೈವರ್ ಇದ್ದಾನೆ, ಎಲ್ಲಿಗೆ ಹೋಗಬೇಕೋ ನಿರಾ ತಂಕವಾಗಿ ಹೋಗಿ ಬಾ. ನಿನಗಿಂತ ನನಗೆ ರಸ್ತೆಯ ಮೇಲೆ ಹೋಗುವವರ ಮೇಲೆ ಹೆಚ್ಚಿನ ಕಾಳಜಿ ಮಾರಾಯ್ತಿ ಎಂದು ಹಾಸ್ಯ ಮಾಡುತ್ತಲೇ ತಳ್ಳಿಹಾಕಿದರು. ಆದರೆ ಒಮ್ಮೆ ಮನಸಿಗೆ ಬಂದರೆ ಅದನ್ನು ಸಾಧಿಸುವವರೆಗೂ ಕಣ್ಣಿಗೆ ನಿದ್ರೆಯಿಲ್ಲ. ಅದಕ್ಕೆ ಸರಿಯಾಗಿ ಅವರು ಒಮ್ಮೆ ಪುಟ್ಟ GETZ ಕಾರನ್ನು ಕೊಂಡರು. ಬಹಳ ವಿನಂತಿಸಿ ಅವರಿಗೆ ತಿಳಿಸಿಯೇ ಒಂದು ಡ್ರೈವಿಂಗ್ ಶಾಲೆಗೆ ಸೇರಿ ಕೇವಲ ಹದಿನೈದು ದಿನಗಳಲ್ಲಿ ಕಾರು ಕಲಿತು ಡ್ರೈವಿಂಗ್ ಲೈಸೆನ್ಸ್ ಕೂಡ ಕೈಗೆ ಬಂದುಬಿಟ್ಟಿತು. ಆದರೆ ಲೈಸೆನ್ಸ್ ತೆಗೆದು ಕೊಳ್ಳುವ ದಿನ ಟೆಸ್ಟ್ ಡ್ರೈವಿಂಗ್‌ಗೆ ಹೋಗಬೇಕಾಗುತ್ತದೆಂಬ ವಿಷಯವನ್ನು ಹಿಂದಿನ ದಿನವಷ್ಟೇ ತಿಳಿಸಿದಾಗ ರವಿ ಊರಲ್ಲಿರ ಲಿಲ್ಲ.

ಸಾಮಾನ್ಯವಾಗಿ ಪರ ಊರಿಗೆ ಹೋದಾಗ ಅವರಾಗೇ call ಮಾಡದ ಹೊರತು ನಾನಾಗೇ ಎಂದೂ Zಮಾಡುತ್ತಿರಲಿಲ್ಲ. ವಿಷಯ ತಿಳಿಸಲು ಅವರ callಗಾಗಿ ದಾರಿ ಕಾಯುತ್ತಿದ್ದೆ. ಬೆಳಗ್ಗೆ ಆರುಗಂಟೆಗೆ ಟೆಸ್ಟ್ ಡ್ರೈವಿಂಗ್ ಇರತ್ತೆ. ಒಂಭತ್ತರಿಂದ ಹನ್ನೆರಡು ಗಂಟೆಯೊಳಗೆ ಜಯ ನಗರದ ಆರ್‌ಟಿಓ ಕಚೇರಿಯಲ್ಲಿ ಲೈಸೆನ್ಸ್ ಕೊಟ್ಟುಬಿ ಡ್ತಾರೆ ಅಂದರು. ಸರಿ ಎಂದು ಧೈರ್ಯ ಮಾಡಿ ಮೊದಲ ಬಾರಿಗೆ ನಾನೇ ಕಾರು ಡ್ರೈವ್ ಮಾಡುತ್ತಾ ಹೋಗಿ ಟೆಸ್ಟ್ ಡ್ರೈವ್ ಅಟೆಂಡ್ ಮಾಡಿಬಂದು ಜಯನಗರಕ್ಕೆ ಇನ್ನೇನು ಹೊರಡ ಬೇಕೆಂದುಕೊಳ್ಳುವಷ್ಟರಲ್ಲಿ ಫೋನು ರಿಂಗಣಿಸತೊಡಗಿತು.

ನಾನು ಆಫೀಸಲ್ಲಿದ್ದೀನಿ. ಬಂದುಹೋಗು ಅಂದರು ರವಿ. ಏನು ಮಾಡುವುದು? ಈಗ ಹೊರಡದಿದ್ದರೆ ಲೈಸೆನ್ಸ್ ಸಿಗುವುದಿಲ್ಲ. ಅಲ್ಲಿ ಕೇವಲ ನಾನೊಬ್ಬಳೇ ಅಲ್ಲ ನನ್ನೊಂದಿಗೆ ಕಲಿತ ಇನ್ನೂ ಹಲವಾರು ಜನರಿzರೆ. ಅವರಿಗೆ ಏನೆಂದು ಹೇಳುವುದು? ಈಗ ಈ ವಿಷಯವನ್ನು ರವಿಗೆ ವಿವರಿಸಲು ಹೋದರೆ ಖಂಡಿತಾ ಸಿಟ್ಟಾಗುತ್ತಾರೆ. ಸರಿ ಒಂದರ್ಧ ಗಂಟೆ ಹೋಗಿ ಮಾತಾಡಿಸಿ ಬಂದು ಬಿಡೋಣ ಅಂದುಕೊಂಡರೆ ರವಿ ಮಾತಿಗೆ ಕೂತರೆ ಅದನ್ನು ನಡುವೆ ತುಂಡರಿಸಿ ಎದ್ದು ಬರುವುದು ಕಷ್ಟ…. ಎನ್ನುವ ಆಲೋಚನೆಗಳ ನಡುವೆ ಸಮಯ ಓಡುತ್ತಲೇ ಇತ್ತು.

ಅಷ್ಟರ ಅಫೀಸಿನಿಂದ ಮತ್ತೊಂದು ಫೋನ್ ಬಂತು. ಬಾಸ್ ಈಗ ಮಲಗ್ತಿದ್ದಾರೆ. ಅವರು ಎದ್ದ ನಂತರ ಫೋನು ಮಾಡ್ತೀವಿ ನೀವು ಆಗ ಬರುವಿರಂತೆ ಎಂದು…. ಸದ್ಯ ಬದುಕಿದೆಯಾ ಬಡ ಜೀವವೇ! ಅಂದುಕೊಂಡು ಸೀದ ಜಯನಗರದ ಕಡೆಗೆ ಓಡಿದೆ. ಆದರೂ ಮನಸಿಗೆ ಸಮಾಧಾನವೇ ಇಲ್ಲ. ಯಾರೊಂದಿಗೆ ಮಾತನಾಡುವ ಸಹನೆಯೂ ಇಲ್ಲ. ಎಷ್ಟು ಹೊತ್ತಿಗೆ ಲೈಸೆ ಕೈಗೆ ಸಿಗುತ್ತದೋ? ಅನ್ನುವ ಆತುರ. ಅಂತೂ ಒಂದರ್ಧ ಗಂಟೆಯೊಳಗೆ ಎಲ್ಲ ಪ್ರೊಸೀಜರ್ ಮುಗಿದು ನೀವಿನ್ನು ಹೊರಡಬಹುದು. ಲೈಸೆನ್ಸನ್ನು ನಾವು ನಿಮಗೆ ತಲುಪಿಸುತ್ತೇವೆ ಎಂದಾಗ ಅಬ್ಬ! ಸದ್ಯ ಮುಗಿಯಿತಲ್ಲ. ಅನ್ನುವ ದೀರ್ಘ ನಿಟ್ಟುಸಿರು.

ಆದರೆ ಆಫೀಸಿಗೆ ಬರುವಷ್ಟರಗಲೇ ಬಾಸ್ ಯಾಕೋ ಗರಮ್ ಆಗಿದ್ದಾರೆ ಅನ್ನುವ ಸೂಚನೆಗಳು ಸಿಕ್ಕು ಅದೇನು ಗ್ರಹಚಾರ ಕಾದಿದೆಯೋ ಅಂದುಕೊಂಡು ಒಂದು ರೀತಿಯ ಆತಂಕದ ಕಾರ್ಮೋಡವೇ ತುಂಬಿ ಹೋಗಿತ್ತು ಮನದಲ್ಲ… ಏನಾಯ್ತು? ಎಂದು ಡ್ರೈವರನ್ನು ಕೇಳಿದಾಗ, ಗೊತ್ತಿಲ್ಲ ಮೇಡಮ್ ಅಲ್ಲಿ ಚೆನ್ನಾಗೇ ಇದ್ರು. ಇದ್ದಕ್ಕಿದ್ದಂತೆ ಹೊರಡೋಣ ಅಂದ್ರು.

ಬೆಂಗಳೂರಿಗೆ ಬರುವ ದಾರಿಯಲ್ಲಿ ಯಾಕೋ ಸಿಟ್ಟಾದ್ರು ಯಾಕೆ ಅಂತ ಗೊತ್ತಿಲ್ಲ ಅಂದಾಗ, ಈ ಸಮಯದಲ್ಲಿ ನಾನು
ಈ ವಿಷಯವನ್ನು ತಿಳಿಸುವುದಕ್ಕಿಂತ ತೆಪ್ಪಗಿರುವುದೇ ಒಳಿತು ಅಂದುಕೊಂಡು ಸುಮ್ಮನಾದೆ. ನಿದ್ರೆಯಿಂದ ಎದ್ದವರೇ, ಎಲ್ಲಿ ಹೋಗಿದ್ದೆ ಬೆಳಗ್ಗೇನೇ? ಅಂದ್ರು. car test driving ಇತ್ತು…. ಎಂದು ಹೇಳುವಷ್ಟರಲ್ಲಿ… ಒಂದು ಮಾತು ತಿಳಿಸುವ ಸೌಜನ್ಯವೂ ಇಲ್ಲ ನಿನಗೆ…. ಅನ್ನುತ್ತಾ ತೀಕ್ಷ್ಣವಾಗಿ ನೋಡಿ, ತಲೆತಗ್ಗಿಸಿ ಬರೆಯಲಾರಂಭಿಸಿದರು. ಈಗ ನಾನೇನು ವಿವರಣೆ ಕೊಡಲು ಹೋದರೂ ಅದು ತಪ್ಪಾಗುತ್ತದೆ. ಅವರ ಸಿಟ್ಟು ಇನ್ನಷ್ಟು ಹೆಚ್ಚಾಗುತ್ತದೆ.

ಅದರ ಬದಲಿಗೆ ಸುಮ್ಮನಿದ್ದು ಬಿಡೋಣ. ಪರಿಸ್ಥಿತಿ ಸ್ವಲ್ಪ ತಿಳಿಯಾದ ನಂತರ ಎಲ್ಲವನ್ನೂ ವಿವರವಾಗಿ ತಿಳಿಸಿದರಾಯ್ತು ಅಂದುಕೊಂಡು ಹೆಚ್ಚು ಮಾತಾಡದೆ ಸುಮ್ಮನಾದೆ. ಅವತ್ತು ಸಂಜೆಯೇ ಲೈಸೆ ಕೈಗೆ ಬಂತು. ಆದರೆ ಕಾರಿನ ಚಾವಿ ಶಾಶ್ವತವಾಗಿ ಮನೆಯಿಂದ ಆಫೀಸಿಗೆ ಸ್ಥಳಾಂತರಗೊಂಡಿತು. ಮತ್ಯಾವತ್ತೂ ಅದನ್ನು ನಾನು ಕೇಳಲೂ ಇಲ್ಲ. ಮುಂದೆ ಮಗ ಹುಟ್ಟಿದಾಗ two
wheeler ನಲ್ಲಿ ಅವನನ್ನು ಕರೆದುಕೊಂಡು ಪಾರ್ಕಿಗೆ, ದೇವಸ್ಥಾನಕ್ಕೆ, ಬನಶಂಕರಿಯ ಬಿಡಿಎ ಕಾಂಪ್ಲೆಕ್ಸಿಗೆ ಹೋಗಿ ಬರುವಷ್ಟರಲ್ಲಿ ಅವನಿಗೆ ನಿದ್ರೆಯ ಮಂಪರು.

ತುಂಬ ಪುಟ್ಟವನಿದ್ದಾಗ ಮುಂದೆ ನಿಲ್ಲಿಸಿಕೊಳ್ಳುತ್ತಿದ್ದಾನಾದರೂ ಎತ್ತರವಾಗುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿ ರಸ್ತೆಗೆ ಮುಖ
ಮಾಡಿ ನನ್ನ ಬೆನ್ನಿಗೊರಗಿ ಕುಳಿತುಕೊಂಡು ಹಾಗೇ ತಿಳಿಗಾಳಿಗೆ ನಿದ್ರೆಗೆ ಜಾರಿಬಿಡುತ್ತಿದ್ದ. ನೋಡಿದ ಜನ ‘ಮಗೂ ನಿದ್ರೆ ಹೋಗಿ ಬಿಟ್ಟಿದೆ ಹುಶಾರಮ್ಮಾ’ ಎಂದು ಹೇಳುವಾಗ, ಒಂದು ಕಾರಿನ ಅಗತ್ಯವಿದೆ ಈಗ ಅನ್ನುವುದು ಮನವರೆಕೆಯಾಯ್ತು. ಇದ್ದ ಹಣವನ್ನೆಲ್ಲ ಜೊತೆಗೂಡಿಸಿ, ಕಷ್ಟಪಟ್ಟು ರವಿಯಿಂದ ಒಪ್ಪಿಗೆ ಪಡೆದು ಮೊಟ್ಟಮೊದಲ ಬಾರಿಗೆ ಅವರ ಅಮ್ಮನ ಜನ್ಮದಿನವಾದ ವರಮಹಾಲಕ್ಷ್ಮಿಯ ಹಬ್ಬದಂದು ಜಿ೧೦ ಅನ್ನುವ ಕಪ್ಪುಬಣ್ಣದ ಕಾರನ್ನು ಕಂತಿನ ಮೇಲೆಯೇ ಕೊಂಡುಕೊಂಡೆ. Congrats ಹೇಳಿ ಸಿಹಿ ತಿಂದರಾದರೂ ನನ್ನ ಕಾರಿನಲ್ಲಿ ಕೂರುವ ಧೈರ್ಯ ಮಾಡಲಿಲ್ಲ.

ಸೇಫ್ಟಿ ಡ್ರೈವಿಂಗ್ ಬಗ್ಗೆ ಒಂದಷ್ಟು ಟಿ ಕೊಟ್ಟು. ಜೋಪಾನ ಎಂದು ಮುಗಳುನಕ್ಕರು. ಪಕ್ಕದಲ್ಲಿ ಮಗುವನ್ನು ಕೂರಿಸಿಕೊಂಡು ಹಾಡು ಕೇಳುತ್ತಾ ಚೆಂದಗೆ ಡ್ರೈವ್ ಮಾಡುತ್ತಾ ಪದ್ಮನಾಭನಗರ ಹಾಗೂ ಬಸವನಗುಡಿಯ ನಡುವೆ ನೆಮ್ಮದಿಯಾಗಿ ಓಡಾಡಿ ಕೊಂಡಿದ್ದೆವು. ಆದರೆ ಆ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ದೇಹದ ತೂಕ ಹೆಚ್ಚಾದ ಕಾರಣ ರವಿ ಬೇರಿಯಾಟಿಕ್ ಸರ್ಜರಿಗೆ ಒಳಗಾದರು. ಇದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಳಾಗಲಾರಂಭಿಸಿದವು.

ಆಸ್ಪತ್ರೆಯೆಂದರೆ ಸಿಡಿಮಿಡಿಗುಟ್ಟು ತ್ತಿದ್ದ ಅವರನ್ನು ಸಂಭಾಳಿಸುವುದೇ ದೊಡ್ಡ ಸಾಹಸವಾ ದಂತಾಗಿತ್ತು. ಕುಟುಂಬದವರು ಹದಿನೈದು ದಿನಗಳ ಮಟ್ಟಿಗೆ ಅವರ ಎಲ್ಲ ಸಂಪರ್ಕಗಳಿಂದ ಅವರನ್ನು ದೂರವಿರಿಸಿ ಅವರಿಗೆ ಚಿಕಿತ್ಸೆ ಕೊಡಿಸಿದರು. ಆಸ್ಪತ್ರೆ ಯಿಂದ ಗುಣಮುಖರಾಗಿ ಬಂದವರೇ, ಮೂರೂ ಜನ ಎದರೂ ಹೋಗಿ ಒಂದು ಒಳ್ಳೆ ಕಾಫಿ ಕುಡಿದು ಬರೋಣ. ನೀನೇ ಡ್ರೈವ್ ಮಾಡು ಎಂದು ಹೇಳಿ ಪಕ್ಕದ ಸೀಟಿನಲ್ಲಿ ಕುಳಿತರು. ನನ್ನ ಡ್ರೈವಿಂಗ್ ಸ್ಕಿಲ್ ಕಂಡು, ಪರವಾಗಿಲ್ಲ ಚೆನ್ನಾಗೇ ಡ್ರೈವ್ ಮಾಡ್ತೀಯ. ನಾನೇ ಹೆದರಿಕೊಳ್ತೀನಿ ದಡ್ಡ ಅಂದು ನಗುತ್ತಾ ಜಯನಗರದ ಮಯ್ಯಾಸ್ ಹೊಟೇಲಿನಲ್ಲಿ ಬಿಸಿಬಿಸಿ ಕಾಫಿಕುಡಿದು ಮನೆಗೆ
ಬರುವ ಹಾದಿಯಲ್ಲಿ ಗುಲಾಬಿಯ ಗುಚ್ಛ ಕೊಟ್ಟು ಅಭಿನಂದಿಸಿದರು.

ಇಂದು ಅಪ್ಪನ ಮಗಳಾದ ನಾನು, ರವಿಯ ಮಗನಾದ ಹಿಮನ ಜೊತೆಗೆ ಅವನಿಚ್ಛೆಯಂತೆ ಕೊಂಡ ಕೆಂಪು ವರ್ಣದ ಸಿಯಾಜ್ ಕಾರಿನ ಜೊತೆಗೆ ಡ್ರೈವರೂ ಇದ್ದಾರೆ. ಆದರೆ ಅಪ್ಪನೂ ಇಲ್ಲ ಜಿ೧೦ ಕಾರೂ ಇಲ್ಲ. ರವಿಯೂ ಇಲ್ಲ.