Monday, 12th May 2025

ಕಾರು ಸ್ಫೋಟ ಪ್ರಕರಣ: 45 ಸ್ಥಳಗಳಲ್ಲಿ ಎನ್‌ಐಎ ಶೋಧ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಚೆನ್ನೈ, ಮಧುರೈ ಸೇರಿದಂತೆ ರಾಜ್ಯಾದ್ಯಂತ 45 ಸ್ಥಳಗಳಲ್ಲಿ ಶೋಧ ಕಾರ್ಯಾ ಚರಣೆ ನಡೆಸಿದೆ.

ಕೊಯಮತ್ತೂರಿನಲ್ಲಿ 20, ಚೆನ್ನೈಯಲ್ಲಿ 12ಕ್ಕೂ ಹೆಚ್ಚು ಮತ್ತು ಮುಧುರೈ, ರಾಮನಾಥ ಪುರಂ ಸೇರಿದಂತೆ ರಾಜ್ಯದ ಹಲವೆಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಬಂಧಿಸಿರುವ ಆರು ಆರೋಪಿಗಳಿಗೆ ಸಂಬಂಧಪಟ್ಟ ಸ್ಥಳ ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ನಿಷೇಧಿತ ಸಂಘಟನೆಯ ಸದಸ್ಯರನ್ನು ತನಿಖೆಗೊಳಪಡಿಸಲಾಗುತ್ತಿದೆ.

ಅಕ್ಟೋಬರ್ 23ರಂದು ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ಕಾರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಗೊಂಡು ಅದರಲ್ಲಿದ್ದ ಜಮೀಶ್ ಮುಬೀನ್ ಎಂಬಾತ ಮೃತಪಟ್ಟಿದ್ದ. ಘಟನೆಯಲ್ಲಿ ಮುಬೀನ್ ನಂಟು ಹಾಗೂ ಭಯೋತ್ಪಾದನಾ ಕೃತ್ಯದ ಸಂಚು ಕುರಿತಾಗಿ ತನಿಖೆ ನಡೆಸಲಾಗುತ್ತಿದೆ.

ತಮಿಳುನಾಡು ಸರ್ಕಾರದ ಶಿಫಾರಸಿನಂತೆ ಅಕ್ಟೋಬರ್ 27ರಂದು ಪ್ರಕರಣವನ್ನು ಕೇಂದ್ರ ಸರ್ಕಾರವು ಎನ್‌ಐಎಗೆ ವರ್ಗಾಯಿ ಸಿತ್ತು. ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಎರಡು ವಾರದೊಳಗೆ ನಡೆಸಿರುವ ಮೊದಲ ಶೋಧ ಕಾರ್ಯಾಚರಣೆ ಇದಾಗಿದೆ.