Wednesday, 14th May 2025

ಸೂಪರ್ 12: ಹೊರಬಿದ್ದ ಹಾಲಿ ಚಾಂಪಿಯನ್

ಸಿಡ್ನಿ: ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿಯುವ ಕನಸಿನಲ್ಲಿದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ನಿಂದ ಸೂಪರ್ 12 ಸುತ್ತಿನಿಂದಲೇ ಹೊರಬಿದ್ದಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ತಂಡವನ್ನು 4 ವಿಕೆಟ್‌ ಗಳಿಂದ ಮಣಿಸುವುದರೊಂದಿಗೆ ಟಿ20 ವಿಶ್ವಕಪ್ ​ನ ಸೆಮಿ ಫೈನಲ್​ಗೆ ಎಂಟ್ರಿಕೊಟ್ಟಿದೆ.

ಮೊದಲ ಗುಂಪಿನಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಅಧಿಕೃತವಾಗಿ ಸೆಮಿಫೈನಲ್​ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಉತ್ತಮ ಆರಂಭದ ಲಾಭ ಪಡೆಯಲು ಸಾಧ್ಯ ವಾಗದೆ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ತಂಡದ ಪರ ಅರ್ಧಶತಕ ಸಿಡಿಸಿ ಮಿಂಚಿದ ಪಾತುಮ್ ನಿಸಂಕಾ 45 ಎಸೆತಗಳಲ್ಲಿ 67 ರನ್ ಗಳಿಸಿ, ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿ ಕೊಂಡರು.

ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಜಾಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಬಿರುಸಿನ ಬ್ಯಾಟಿಂಗ್ ಮಾಡಿ ಏಳು ಓವರ್‌ಗಳಲ್ಲಿಯೇ ಟಾರ್ಗೆಟ್​ನ ಅರ್ಧದಷ್ಟು ರನ್ ಕಲೆ ಹಾಕಿದರು.

28 ರನ್ ಗಳಿಸಿದ್ದ ಬಟ್ಲರ್​ಗೆ ಧನಂಜಯ್ ಡಿ ಸಿಲ್ವಾ ಪೆವಿಲಿಯನ್ ಹಾದಿ ತೋರಿಸಿದರು. ಈ ವಿಕೆಟ್ ನಂತರ ಹೇಲ್ಸ್ ಕೂಡ ಅರ್ಧಶತಕ ಪೂರೈಸಲು ಸಾಧ್ಯವಾಗದೆ 47ರ ವೈಯಕ್ತಿಕ ಸ್ಕೋರ್‌ನಲ್ಲಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 30 ಎಸೆತಗಳನ್ನು ಎದುರಿಸಿದ ಹೇಲ್ಸ್ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.

ನಾಲ್ಕು ರನ್ ಗಳಿಸಿದ ಹ್ಯಾರಿ ಬ್ರೂಕ್ ಬೇಗನೆ ಪೆವಿಲಿಯನ್​ಗೆ ಮರಳಿದರೆ, ಲಿಯಾಮ್ ಲಿವಿಂಗ್‌ಸ್ಟನ್ ಕೂಡ ನಾಲ್ಕು ರನ್‌ ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಕೊನೆಯವರೆಗೂ ಹೋರಾಡಿದ ಆಲ್​ರೌಂಡರ್ ಬೆನ್​ಸ್ಟೋಕ್ಸ್​ ತಂಡವನ್ನು ಗೆಲುವಿನ ದಡ ಸೇರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 36 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ 2 ಬೌಂಡರಿ ಸಹಿತ ಅಜೇಯ 42 ರನ್ ಬಾರಿಸಿದರು.

ಶ್ರೀಲಂಕಾ ಪರ ಓಪನರ್ ಪಾತುಮ್ ನಿಸಂಕಾ ಅದ್ಭುತ ಇನ್ನಿಂಗ್ಸ್ ಆಡಿ 67 ರನ್ ಗಳಿಸಿದರು. ಈ ಬ್ಯಾಟ್ಸ್‌ಮನ್ ಕುಶಾಲ್ ಮೆಂಡಿಸ್ ಜೊತೆಗೂಡಿ ಮೊದಲ ವಿಕೆಟ್‌ಗೆ ನಾಲ್ಕು ಓವರ್‌ಗಳಲ್ಲಿ 39 ರನ್ ಸೇರಿಸುವುದರೊಂದಿಗೆ ಉತ್ತಮ ಆರಂಭ ನೀಡಿದರು. ಇದೇ ವೇಳೆ ಶ್ರೀಲಂಕಾ ಧನಂಜಯ ಡಿ ಸಿಲ್ವಾ ಮತ್ತು ಚರಿತ ಅಸಲಂಕಾ ಅವರ ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಧನಂಜಯ್ ಒಂಬತ್ತು ಮತ್ತು ಅಸಲಂಕಾ ಎಂಟು ರನ್ ಗಳಿಸಿ ಮರಳಿದರು.

ನಿಸಂಕಾ ರೂಪದಲ್ಲಿ ಶ್ರೀಲಂಕಾ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 45 ಎಸೆತಗಳನ್ನು ಎದುರಿಸಿ ಎರಡು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಬಾರಿಸಿದರು.

ಶ್ರೀಲಂಕಾ ಕೊನೆಯದಾಗಿ ಭಾನುಕಾ ರಾಜಪಕ್ಸೆ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಿತ್ತು. ಆದರೆ ರಾಜಪಕ್ಸೆಗೆ ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಈ ಬ್ಯಾಟ್ಸ್‌ಮನ್ 22 ಎಸೆತಗಳಲ್ಲಿ ಮೂರು ಬೌಂಡರಿ ಒಳಗೊಂಡಂತೆ ಕೇವಲ 22 ರನ್ ಗಳಿಸಲಷ್ಟೇ ಶಕ್ತರಾದರು.